*ಮಾಫಿ ಸಾಕ್ಷಿ ಪ್ರದೋಶ್ಗೆ ಬಿಗ್ ಶಾಕ್*: *ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ತೀವ್ರಗೊಂಡಿರುವ ಬೆನ್ನಲ್ಲೇ, ಪ್ರಕರಣದ ಪ್ರಮುಖ ಆರೋಪಿ ಪ್ರದೋಶ್ಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ಮೂರು ವಾರಗಳ ಕಾಲ ಜಾಮೀನು ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ತಂದೆಯ ಕಾರ್ಯ ನೆರವೇರಿಸಬೇಕಿರುವ ಕಾರಣ ಮೂರು ವಾರಗಳ ಕಾಲ ಜಾಮೀನು ನೀಡುವಂತೆ ಪ್ರದೋಶ್ ಪರ ವಕೀಲರು ಮನವಿ ಮಾಡಿದ್ದರು. ಜೊತೆಗೆ ಜೀವ ಬೆದರಿಕೆ ಇರುವುದರಿಂದ ಬೇರೆ ಪೊಲೀಸ್ ಠಾಣೆಯಲ್ಲಿ ಹಾಜರಾತಿ ನೀಡಲು ಅವಕಾಶ ಕಲ್ಪಿಸುವಂತೆಯೂ ಕೋರಿದ್ದರು.
ಆದರೆ, ಪ್ರದೋಶ್ಗೆ ಜಾಮೀನು ನೀಡಲು ದರ್ಶನ್ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಕೂಡ ಕಾನೂನಿನ ತೊಡಕುಗಳನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಪ್ರದೋಶ್, ಇದೀಗ ಮಾಫಿ ಸಾಕ್ಷಿಯಾಗಿ ಬದಲಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಹಲವು ಮಾಹಿತಿಗಳನ್ನು ನ್ಯಾಯಾಧೀಶರ ಮುಂದೆ ಹೇಳಿಕೆ ರೂಪದಲ್ಲಿ ದಾಖಲಿಸಿದ್ದಾರೆ.
ಪ್ರದೋಶ್ ಮಾಫಿ ಸಾಕ್ಷಿಯಾಗುವುದನ್ನು ತಡೆಯಲು ದರ್ಶನ್ ಪರ ವಕೀಲರು ಹಲವು ಪ್ರಯತ್ನಗಳನ್ನು ನಡೆಸಿದ್ದರು. ಪೊಲೀಸರ ಒತ್ತಡಕ್ಕೆ ಮಣಿದು ಅವರ ಪರವಾಗಿ ಪ್ರದೋಶ್ ಹೇಳಿಕೆ ನೀಡಿದ್ದಾರೆ ಎಂದೂ ಆರೋಪಿಸಿದ್ದರು. ಆದರೆ, ಆ ಪ್ರಯತ್ನಗಳು ಫಲ ನೀಡಿರಲಿಲ್ಲ. ಮಾಫಿ ಸಾಕ್ಷಿಯಾಗಿ ಹೇಳಿಕೆ ದಾಖಲಿಸಿದ ಬಳಿಕ ಪ್ರದೋಶ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಇದಕ್ಕೂ ಮೊದಲು ಇದೇ ಪ್ರಕರಣದ ಇತರ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನೂ ನ್ಯಾಯಾಲಯ ವಜಾಗೊಳಿಸಿತ್ತು. ಇದೀಗ ಪ್ರದೋಶ್ ಅರ್ಜಿಯೂ ತಿರಸ್ಕೃತವಾಗಿದೆ. ಇನ್ನು ದರ್ಶನ್ ಜಾಮೀನು ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿರುವ ಆದೇಶವೂ ಮಹತ್ವದ್ದಾಗಿದೆ. ಕನಿಷ್ಠ ಒಂದು ವರ್ಷದವರೆಗೆ ಜಾಮೀನು ಅರ್ಜಿ ಸಲ್ಲಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿರುವುದಾಗಿ ವರದಿಯಾಗಿದೆ.




