Kannada NewsKarnataka NewsLatestPolitics

*60 ವರ್ಷ ಮೇಲ್ಪಟ್ಟವರು, ದೀರ್ಘವ್ಯಾಧಿಯಿಂದ ಬಳಲುತ್ತಿರುವವರು ಕೋವಿಡ್ ಲಸಿಕೆ ಪಡೆಯುವಂತೆ ಸಲಹೆ*

ರಾಜ್ಯದಲ್ಲಿ ರೂಪಾಂತರ ವೈರಸ್ ಹೆಚ್ಚಳ; ವೈದ್ಯಕೀಯ ಶಿಕ್ಷಣ ಸಚಿವರಿಂದ ಮಹತ್ವದ ಸಭೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ರೂಪಾಂತರ ವೈರಸ್ JN.1 ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು 199 ಜನರಲ್ಲಿ ಸೋಂಕು ದೃಢಪಟ್ಟಿದೆ. ರೂಪಾಂತರ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು.

ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ರೂಪಾಂತರ ಜೆ.ಎನ್- 1 ಸೋಂಕು ಕಾಣಿಸಿಕೊಂಡಿದ್ದರೂ ಜನತೆ ಅನಗತ್ಯವಾಗಿ ಆತಂಕಕ್ಕೇ ಒಳಪಡದೆ, ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಸಲಹೆ ಮಾಡಿದ್ದಾರೆ.

ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖಾ ವ್ಯಾಪ್ತಿಗೆ ಒಳಪಡುವ ವಿವಿಧ ಅಸ್ಪತ್ರೆಗಳ ಮುಖ್ಯಸ್ಥರು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು, ಸದಸ್ಯರ ಜೊತೆ ನಡೆಸಿದ ಅವರು, ಪ್ರಸ್ತುತ ರಾಜ್ಯದಲ್ಲಿ ಕೋವಿಡ್ -19 ನಿಯಂತ್ರಣ ಹಾಗೂ ಪೂರ್ವ ಸಿದ್ದತೆಗಳ ಕುರಿತು ಮಾಹಿತಿ ಪಡೆದುಕೊಂಡರು.

ರೂಪಾಂತರ ಜೆ.ಎನ್-1 ಸೋಂಕು ಕಾಣಿಸಿಕೊಂಡಿದ್ದರೂ ಇದು ಮನುಷ್ಯರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ, ಹಾಗೂ ತಜ್ಞರೇ ಹೇಳಿದ್ದಾರೆ.ಆದರೂ ಇದರ ಬಗ್ಗೆ ಮೈ ಮರೆಯದೆ, ಕೆಲವು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಜನಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ
ಸೂಚನೆ ನೀಡಿದರು

ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಪ್ರಸ್ತುತ ಕೇಂದ್ರ ಸರ್ಕಾರ ರಾಜ್ಯಕ್ಕೆ 30 ಸಾವಿರ ಕೋವಿಡ್ ವ್ಯಾಕ್ಸಿನ್ ಬಂದಿದೆ. ಇದರ ಕೊರತೆಯಾಗದಂತೆ ಎಲ್ಲ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ರತಿಯೊಬ್ಬ ಅರ್ಹರಿಗೆ ಕೋವಿಡ್ ಲಸಿಕೆ ನೀಡುವ ಅಗತ್ಯವಿಲ್ಲ 60 ವರ್ಷ ಹಾಗೂ ದೀರ್ಘವ್ಯಾಧಿಯಿಂದ ಬಳಲುತ್ತಿರುವವರು ಬುಧವಾರದಿಂದಲೇ ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ವಾಕ್ಸಿನ್ ತೆಗೆದುಕೊಳ್ಳಬಹುದು. ಒಂದು ಮತ್ತು 2ನೇ ಕೋವಿಡ್ ಸಂದರ್ಭದಲ್ಲಿ ಯಾವ ಲಸಿಕೆಯನ್ನು ನೀಡಲಾಗಿತ್ತೋ ಅದೇ ಲಸಿಕೆಯನ್ನು ನೀಡಲಿದ್ದೇವೆ. ಹೊಸ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರದಿಂದ ನಮಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.

ಪ್ರಸ್ತುತ ರಾಜ್ಯದಲ್ಲಿ ಕಾಣಿಸಿಕೊಂಡಿರುವ ಜೆಎನ್-1 ರೂಪಾಂತರ ಸೋಂಕು ಬಹುಬೇಗನೆ ಹರಡುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹರಡಬಹುದೆಂದು ತಜ್ಞರು ಹೇಳಿದ್ದಾರೆ. ಒಂದು ವೇಳೆ ಹಬ್ಬಿದರೂ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಕಡಿಮೆ ಎಂಬ ಮಾಹಿತಿ ಇದೆ. ಸಾರ್ವಜನಿಕರು ಅನಗತ್ಯವಾಗಿ ಆತಂಕ ಪಡಬಾರದೆಂದು ಮನವಿ ಮಾಡಿದರು.

ಜನದಟ್ಟಣೆ ಮತ್ತಿತರ ಕಡೆ ಅಗತ್ಯ ಇರುವವರು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್‍ಗಳನ್ನು ಧರಿಸುವುದು ಉತ್ತಮ. ಆದರೆ ಕಡ್ಡಾಯವಾಗಿ ಮಾಸ್ಕ್‍ಗಳನ್ನು ಧರಿಸಲೇಬೇಕೆಂಬ ಆದೇಶವನ್ನು ಹೊರಡಿಸುವುದಿಲ್ಲ. ಹಾಗಂತ ಜನರು ಮೈ ಮರೆಬಾರದೆಂದು ಸಲಹೆ ಮಾಡಿದರು.

ಆಕ್ಸಿಜನ್ ಬೆಡ್, ಐಸಿಯು, ವೆಂಟಿಲೇಟರ್, ಔಷಧಗಳು, ಸೇರಿದಂತೆ ಲಭ್ಯವಿರುವ ಉಪಕರಣಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದರು.
ಕೆಲವು ಆಸ್ಪತ್ರೆಗಳಲ್ಲಿ ಸಿಬ್ಬಂದಿ ನೇಮಕ, ಉಪಕರಣಗಳ ಖರೀದಿಸುವ ಬಗ್ಗೆ ನನ್ನ ಗಮನಕ್ಕೆ ತಂದಿದ್ದಾರೆ. ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಕೋವಿಡ್ ಸಂಬಂಧ ಔಷಧಗಳನ್ನು ಖರೀದಿಸಲು ಹಣಕಾಸಿನ ಕೊರತೆ ಇಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದರು.

Related Articles

Back to top button