ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮತ್ತಷ್ಟು ಬಿಗಿ ಕ್ರಮಗಳ ಜಾರಿಗೆ ಸೂಚನೆ ನೀಡಿದ್ದು, ಶಾಲಾ ಕಾಲೇಜುಗಳಿಗೆ ರಜೆ ನೀಡುವ ನಿರ್ಧಾರ ಜಿಲ್ಲಾಡಳಿತಕ್ಕೆ ಬಿಟ್ಟಿದೆ.
ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಪರಿಸ್ಥಿತಿ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ವರ್ಚುವಲ್ ಸಭೆ ನಡೆದಿದ್ದು, ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ರಾಜ್ಯದಲ್ಲಿ ಪ್ರತಿದಿನ ಕೋವಿಡ್ ಟೆಸ್ಟಿಂಗ್ ಪ್ರಮಾಣ ಒಂದೂವರೆ ಲಕ್ಷಕ್ಕೆ ಹೆಚ್ಚಿಸಲು ಸೂಚಿಸಲಾಗಿದೆ ಎಂದರು.
ಹೋಂ ಐಸೋಲೇಷನ್ ನಲ್ಲಿರುವವರ ಬಗ್ಗೆ ಹೆಚ್ಚಿನ ನಿಗಾ, ಬೂಸ್ಟರ್ ಡೋಸ್ ವೇಗ ಹೆಚ್ಚಿಸಲು ಕ್ರಮ, ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ, ಆಸ್ಪತ್ರೆಗಳಲ್ಲಿ ಮಕ್ಕಳಿಗೆ ವಿಶೇಷ ವಾರ್ಡ್, ಬೆಡ್ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ವೈಕುಂಠ ಏಕಾದಶಿಯಂದು ಸಂಪ್ರದಾಯದಂತೆ ದೇವಾಲಯಗಳಲ್ಲಿ ಪೂಜೆಗೆ ಅವಕಾಶವಿದೆ. ಆದರೆ ಜನಸಂದಣಿಯಾಗದಂತೆ ನೋಡಿಕೊಳ್ಳಬೇಕು. ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಬೇಕು. ಮಾಸ್ಕ್, ದೈಹಿಕ, ಸಾಮಾಜಿಕ ಅಂತರ ಪಾಲನೆ ಕಡ್ಡಾಯ. ಮಾರ್ಕೆಟ್ ಗಳಲ್ಲಿ ಜನಸಂದಣಿಗೆ ಅವಕಾಶವಿಲ್ಲ. ಮಾರ್ಕೆಟ್ ವಿಕೇಂದ್ರೀಕರಣ ವ್ಯವಸ್ಥೆಗೆ ತೀರ್ಮಾನಿಸಲಾಗಿದೆ ಎಂದರು.
ಶಾಲಾ-ಕಾಲೇಜು, ಹಾಸ್ಟೇಲ್ ಗಳಲ್ಲಿ ವಿದ್ಯಾರ್ಥಿಗಳಲ್ಲಿ ಸೋಂಕು ಹೆಚ್ಚಾಗಿ ಹರಡುತ್ತಿದ್ದು, ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಶಾಲೆಗಳನ್ನು ಬಂದ್ ಮಾಡುವ ನಿರ್ಧಾರ ಶಿಕ್ಷಣ ಸಂಸ್ಥೆ, ಆಯಾ ತಾಲೂಕೂ ಅಧಿಕಾರಿಗಳು ಹಾಗೂ ಜಿಲ್ಲಾಡಳಿತಕ್ಕೆ ಬಿಟ್ಟದ್ದು ನಾಳೆಯಿಂದಲೇ ನಿಯಮ ಜಾರಿಗೆ ನಿರ್ಧಾರ ಕೈಗೊಳ್ಳಬಹುದು ಎಂದರು.
ವೀಕೆಂಡ್ ಕರ್ಫ್ಯೂ ಮುಂದುವರಿಕೆ ಸೇರಿದಂತೆ ಇನ್ನಷ್ಟು ಕಠಿಣ ನಿಯಮಗಳ ಬಗ್ಗೆ ಜ.14ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯಲಿರುವ ಸಭೆ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆರೋಗ್ಯ ವಿಚಾರಿಸಿದ ಪ್ರಧಾನಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ