ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಹಾಗೂ ಲೋಕಸಭಾ ಉಪ ಚುನಾವಣಾ ಪ್ರಕ್ರಿಯೆಯನ್ನು ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ನಡೆಸಲು ಸಮಾನ ಆದ್ಯತೆಯ ಮೇರೆಗೆ ಕಾರ್ಯನಿರ್ವಹಿಸಲಾಗುವುದು ಎಂದು ನೂತನ ಜಿಲ್ಲಾಧಿಕಾರಿ ಡಾ.ಕೆ.ಹರಿಶ್ ಕುಮಾರ್ ತಿಳಿಸಿದರು.
ಸೋಮವಾರ (ಮಾ.22) ಅಧಿಕಾರ ಸ್ವೀಕರಿಸಿದ ಬಳಿಕ ಚುನಾವಣಾ ಸಂಬಂಧಿತ ಅಧಿಕಾರಿಗಳ ಜತೆ ಸಂಜೆ ಕರೆಯಲಾಗಿದ್ದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣಾ ನೀತಿಸಂಹಿತೆ ಪಾಲನೆ ಸೇರಿದಂತೆ ಚುನಾವಣಾ ಆಯೋಗದ ನಿರ್ದೇಶನಗಳ ಪ್ರಕಾರ ಪ್ರತಿಯೊಬ್ಬರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಕೋವಿಡ್ ನಿಯಂತ್ರಣ ಮತ್ತು ಚುನಾವಣಾ ಕೆಲಸಗಳನ್ನು ಏಕಕಾಲಕ್ಕೆ ಮಾಡಬೇಕಾಗಿರುವುದರಿಂದ ಯಾವುದನ್ನೂ ನಿರ್ಲಕ್ಷಿಸದೇ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಈಗಾಗಲೇ ರಚಿಸಲಾಗಿರುವ ತಂಡಗಳು ತಮಗೆ ವಹಿಸಲಾಗಿರುವ ಹೊಣೆಗಾರಿಕೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು. ಈ ನಿಟ್ಟಿನಲ್ಲಿ ಯಾವುದೇ ರೀತಿಯ ಸಹಾಯ-ಸಹಕಾರ ಒದಗಿಸಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಜಿಲ್ಲಾಧಿಕಾರಿ ಡಾ.ಹರಿಶ್ ಕುಮಾರ್ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಯೋಗೇಶ್ವರ್ ಎಸ್., ಎನ್.ಐ.ಸಿ. ಅಧಿಕಾರಿ ಸಂಜೀವ್ ಕ್ಷೀರಸಾಗರ, ಶ್ರೀಷ್ ಕಡಗದಕೈ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಚುನಾವಣಾ ಶಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಬೆಳಗಾವಿ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿ ಯೋಗೇಶ್ವರ್ ಎಸ್. ಇಂದು ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅಧಿಕಾರ ಹಸ್ತಾಂತರಿಸಿ, ಶುಭ ಕೋರಿದರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ