ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವುದರ ಜತೆಗೆ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಇದೀಗ ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸುವ ಮೂಲಕ ಸಾರ್ವಜನಿಕರ ಸಹಕಾರ ಪಡೆದುಕೊಂಡು ಸರಕಾರದ ಹೊಸ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆಗೆ ಮುಂದಾಗಿದ್ದಾರೆ.
ಆರೋಗ್ಯ, ಕಂದಾಯ ಹಾಗೂ ಪೊಲೀಸ್ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳ ತಂಡಗಳನ್ನು ರಚಿಸುವ ಮೂಲಕ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ, ಆಕ್ಸಿಜನ್ ಲಭ್ಯತೆ ಬಗ್ಗೆ ನಿರಂತರವಾಗಿ ಮಾಹಿತಿಯನ್ನು ಕಲೆಹಾಕಿ ನಿಗದಿತ ನಮೂನೆಯಲ್ಲಿ ಸರಕಾರಕ್ಕೆ ಕಳಿಸಲು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರು ಈಗಾಗಲೇ ಕ್ರಮ ಕೈಗೊಂಡಿದ್ದಾರೆ.
ಇದೇ ರೀತಿ ತಾಲ್ಲೂಕು ಮಟ್ಟದಲ್ಲಿ ಕೂಡ ಎಲ್ಲ ಇಲಾಖೆಯ ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಲಹೆ-ಸೂಚನೆಗಳನ್ನು ನೀಡಲು ಇದೀಗ ತಾಲ್ಲೂಕುವಾರು ಸಭೆಗಳನ್ನು ನಡೆಸುತ್ತಿದ್ದಾರೆ. ಕೋವಿಡ್ ಮಾರ್ಗಸೂಚಿ ಜಾರಿಗೆ ಸಂಬಂಧಿಸಿದಂತೆ ಶನಿವಾರ (ಮೇ 8) ಬೈಲಹೊಂಗಲ, ಚನ್ನಮ್ಮನ ಕಿತ್ತೂರು ಹಾಗೂ ಖಾನಾಪುರ ತಾಲ್ಲೂಕುಗಳಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರು ಅಧಿಕಾರಿಗಳ ಪ್ರತ್ಯೇಕ ಸಭೆ ನಡೆಸಿದರು.
ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಪ್ರಕಟಿಸಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ತುರ್ತುಸೇವೆ ಹೊರತುಪಡಿಸಿ ಉಳಿದ ಯಾವುದೇ ರೀತಿಯ ವಾಹನಗಳು ಮತ್ತು ಜನಸಂಚಾರಕ್ಕೆ ಅವಕಾಶ ಕಲ್ಪಿಸಬಾರದು ಎಂದು ತಿಳಿಸಿದರು.
ಕೋವಿಡ್ ಕೇರ್ ಕೇಂದ್ರ ಬಳಕೆಗೆ ನಿರ್ದೇಶನ:
ಲಕ್ಷಣರಹಿತ ಸೋಂಕಿತರನ್ನು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಆರಂಭಿಸಲಾಗಿರುವ ಕೋವಿಡ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ಒದಗಿಸಬೇಕು. ತುರ್ತುಚಿಕಿತ್ಸೆ ಅಗತ್ಯವಿರುವವರನ್ನು ಮಾತ್ರ ವೈದ್ಯರ ಸಲಹೆ ಮೇರೆಗೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದರು.
ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ಶೀಘ್ರದಲ್ಲೇ ಗುರುತಿಸಿ ಅವರಿಗೆ ಮಾರ್ಗಸೂಚಿ ಪ್ರಕಾರ ಹೋಮ್ ಕ್ವಾರಂಟೈನ್ ಮಾಡಬೇಕು ಎಂದರು. ಇದೇ ವೇಳೆ ಬೈಲಹೊಂಗಲದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಹಾಗೂ ಕಿತ್ತೂರು ಶಾಸಕ ಮಹಾಂತೇಶ ದೊಡಗೌಡ್ರ ಜತೆ ಕೂಡ ಚರ್ಚೆ ನಡೆಸಿದ ಜಿಲ್ಲಾಧಿಕಾರಿಗಳು, ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಸೋಂಕಿತರ ಚಿಕಿತ್ಸೆಗೆ ತಾಲ್ಲೂಕು ಕೇಂದ್ರಗಳಲ್ಲಿಯೇ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕು. ಆಕ್ಸಿಜನ್, ರೆಮಿಡಿಸಿವಿರ್ ಹಾಗೂ ಆಂಬ್ಯಲೆನ್ಸ್ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ವೈದ್ಯರು ಸೇರಿದಂತೆ ಸಿಬ್ಬಂದಿ ಕೊರತೆ ನೀಗಿಸಲು ಆದ್ಯತೆ ನೀಡಬೇಕು ಎಂದು ಉಭಯ ಶಾಸಕರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸರಕಾರದ ಹೊಸ ಮಾರ್ಗಸೂಚಿ ಪ್ರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಬಗ್ಗೆ ಜನರಿಗೆ ಸೂಕ್ತ ತಿಳಿವಳಿಕೆ ನೀಡಿ ಅವರಿಂದಲೂ ಸಹಕಾರ ಪಡೆದುಕೊಳ್ಳಬೇಕು ಎಂದರು. ಜಿಲ್ಲೆಗೆ ಹಂಚಿಕೆಯಾಗುವ ಆಕ್ಸಿಜನ್ ಮತ್ತು ರೆಮಿಡಿಸಿವಿರ್ ಗಳನ್ನು ಅಗತ್ಯತೆ ಆಧರಿಸಿ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಉಪ ಚುನಾವಣೆಯ ಬಳಿಕ ಆಡಳಿತ ಯಂತ್ರವನ್ನು ಸಂಪೂರ್ಣವಾಗಿ ಕೋವಿಡ್ ನಿಯಂತ್ರಣಕ್ಕೆ ಬಳಸಿಕೊಂಡು ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್, ರೆಮಿಡಿಸಿವಿರ್, ಆಂಬ್ಯುಲೆನ್ಸ್ ಬಳಕೆಯ ಮೇಲೆ ನಿಗಾವಹಿಸಲು ಅಧಿಕಾರಿಗಳನ್ನು ನಿಯೋಜಿಸಲಾಗಿರುತ್ತದೆ.
ಕೋವಿಡ್ ನಿಯಂತ್ರಣಕ್ಕಾಗಿ ತಾಲ್ಲೂಕು ಮಟ್ಟದಲ್ಲಿ ಆರಂಭಿಸಲಾಗಿರುವ ಕಂಟ್ರೋಲ್ ರೂಮ್ ಗಳನ್ನು ಇನ್ನಷ್ಟು ಬಲಪಡಿಸುವ ಮೂಲಕ ಜನರಿಗೆ ತಕ್ಷಣವೇ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಹೇಳಿದರು.
ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ್ ಬಗಲಿ, ಬೆಳಗಾವಿ ಉಪ ವಿಭಾಗಾಧಿಕಾರಿ ಅಶೋಕ ತೇಲಿ, ಖಾನಾಪುರ ತಹಶಿಲ್ದಾರ ರೇಶ್ಮಾ, ಹುಕ್ಕೇರಿ ತಹಶೀಲ್ದಾರ ಬಸವರಾಜ ನಾಗರಾಳ, ತಾಲ್ಲೂಕು ಆರೋಗ್ಯಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಜನಸೇವೆಯೇ ನಮ್ಮುಸಿರು: ಕೋವಿಡ್ ನಿಂದ ಜನರನ್ನು ರಕ್ಷಿಸಲು ಉಚಿತ ಸೇವೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ