ಹಿರಿಯ ನಾಗರಿಕರಿಗೆ ಹುರುಪು ತರುವ ಕ್ರಿಯೇಷನ್ ಕ್ಲಬ್ ಡಿಸೆಂಬರ್ ವೇಳೆಗೆ ಲೋಕಾರ್ಪಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಾಸಕ ಅಭಯ ಪಾಟೀಲರ ಕನಸಿನ ಯೋಜನೆಯಾದ ಹಿರಿಯ ನಾಗರಿಕರಿಗೆ ಕ್ರಿಯೇಷನ್ ಕ್ಲಬ್ ಸ್ಥಾಪನೆ ಕಾರ್ಯರೂಪಕ್ಕೆ ಬರುತ್ತಿದ್ದು, ಡಿಸೆಂಬರ್ ತಿಂಗಳಿನಲ್ಲಿ ಉದ್ಘಾಟನೆ ಮಾಡಿ, ಬೆಳಗಾವಿ ಹಿರಿಯ ನಾಗರಿಕರಿಗೆ ಸಮರ್ಪಣೆ ಮಾಡಲಾಗುವುದು ಎಂದು ಅಭಯ ಪಾಟೀಲ ತಿಳಿಸಿದ್ದಾರೆ.
ಈ ಕ್ಲಬ್ ನಲ್ಲಿ 50 ಜನ ಹಿರಿಯ ನಾಗರಿಕರು ಕುಳಿತು ಓದುವಂಥ ವಾಚನಾಲಯವಿರಲಿದೆ. ಅದರಲ್ಲಿ 10 ಸಾವಿರಕ್ಕೂ ಹೆಚ್ಚು ಪುಸ್ತಕಗಳು, ಎಲ್ಲ ದಿನಪತ್ರಿಕೆಗಳು, ವಾರ ಪತ್ರಿಕೆಗಳು, ಮಾಸಪತ್ರಿಕೆಗಳು ಇರಲಿವೆ. 60 ವರ್ಷ ವಯಸ್ಸಾಗಿರುವ ಹಿರಿಯ ನಾಗರಿಕರ ವಯಸ್ಸಿಗೆ ತಕ್ಕಂಥ ಅಟಗಳಾದ ಬ್ಯಾಡ್ಮಿಂಟನ್, ಕೇರಮ್, ಟೇಬಲ್ ಟೆನಿಸ್, ಚೆಸ್ ಇವುಗಳೊಂದಿಗೆ ಬಾಲ್ಯದ ಆಟಗಳಾದ ಗೋಟ, ಬುಗುರಿ, ಚಿನ್ನಿ ದಂಡು ಹಾಗೂ ಮುಂತಾದ ಆಟಗಳಿಗೂ ಅವಕಾಶ ಕಲ್ಪಸುವುದರೊಂದಿಗೆ ಯೋಗಾಸನ, ಏಕಾಗ್ರತೆ ಕೊಠಡಿ ನಿರ್ಮಾಣ ಮಾಡಲಾಗುವುದು.
ಕ್ಯಾಂಟಿನ್, ಲ್ಯಾಬ್ ನಿರ್ಮಾಣ ಮಾಡಿ ವಯೋಸಹಜ ಕಾಯಿಲೆಗಳಾದ ಜಿ.ಪಿ, ಶುಗರ್, ಇತರ ಕಾಯಿಲೆಗಳನ್ನು ಪರೀಕ್ಷಿಸಲು ವಾರದಲ್ಲಿ ಒಂದು ಬಾಲ ವೈದ್ಯರು ಬಂದು ಪರೀಕ್ಷಿಸಿ ಉಪಚಾರ ಮಾಡುವ ವ್ಯವಸ್ಥೆ ಹಾಗೂ ಮಾನಸಿಕ ಒತ್ತಡ ಕಡಿಮೆ ಮಾಡುವ ದೃಷ್ಟಿಯಿಂದ ಮಾನಸಿಕ ತಜ್ಞರಿಂದ ಸಂವಾದ ಕಾರ್ಯಕ್ರಮ ಹಾಗೂ ತಿಂಗಳಿಗೆ ಒಂದು ನಾಟಕ ಪ್ರದರ್ಶನ, 15 ದಿನಕ್ಕೆ ಒಂದು ಸಲ ಹಳೆಯ ಚಿತ್ರಗಳ ಪ್ರಸಾರ, ಗೆಳೆಯರೊಂದಿಗೆ ಹರಟೆ ಹೊಡೆಯಲು ‘ಉಸಾಬರಿ ಕಟ್ಟೆ’ ನಿರ್ಮಾಣ ಇದರೊಂದಿಗೆ ಸಂಗೀತ ಹವ್ಯಾಸವುಳ್ಳ ಹಿರಿಯ ನಾಗರಿಕರಿಗೆ ಸಂಗೀತ ಕೊಠಡಿ ನಿರ್ಮಿಸಿ ಅದರಲ್ಲಿ ಕೊಳಲು, ಹಾರ್ಮೋನಿಯಂ, ತಬಲಾ, ಡೋಲು, ಗಿಟಾರ್, ಡ್ರಮ್ ಮುಂತಾದ ಸಂಗೀತ ವಾದ್ಯಗಳ ವ್ಯವಸ್ಥೆ ಕಲ್ಪಿಸಲಾಗುವುದು.
ಅದರಂತೆ ಹಿರಿಯ ಮಹಿಳಾ ನಾಗರಿಕರಿಗೂ ಪ್ರತ್ಯೇಕವಾಗಿ ಕ್ರೀಡಾ ಕೊಠಡಿ, ಸಂಗೀತ ಕೊಠಡಿ ಇತರ ಕೊಠಡಿಗಳ ನಿರ್ಮಾಣ ಮಾಡಲಾಗುತ್ತದೆ.
ಇದರಲ್ಲಿ ಸಾರ್ವಜನಿಕರು ತಮ್ಮ ಸಲಹೆ ಹಾಗೂ ಸೂಚನೆಗಳು ಏನಾದರೂ ಇದ್ದಲ್ಲಿ 8073818281 ಈ ವಾಟ್ಸಾಪ್ ಸಂಖ್ಯೆಗೆ ಕಳಿಸುವಂತೆ ಅವರು ಕೋರಿದ್ದಾರೆ.
ಕರಾವಳಿಯಲ್ಲಿ ತಗ್ಗಿದ ಮಳೆಯ ಆರ್ಭಟ; ಆರೇಂಜ್ ಅಲರ್ಟ್ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ