Advertisement -Home Add

ಗಂಡು ಮಕ್ಕಳಿಲ್ಲವೆಂದು ಮತ್ತೊಂದು ಮದುವೆಯಾದ, ಆದರೆ ಆಗಿದ್ದೇನು?

ಇದೊಂದು ಘೋರ ದುರಂತ ಘಟನೆ

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ – ಇದೊಂದು ಘೋರ ದುರಂತ ಘಟನೆ. ಆತನಿಗೆ 6 ಮಕ್ಕಳಾದರೂ ಗಂಡು ಮಕ್ಕಳಾಗಲಿಲ್ಲ ಎನ್ನುವ ಕೊರಗಿತ್ತು. ಹಾಗಾಗಿ ಗಂಡು ಮಗು ಬೇಕೆಂದು ಮತ್ತೊಂದು ಮದುವೆಯಾದ. ಎರಡನೇ ಹೆಂಡತಿಗೆ ಗಂಡು ಮಕ್ಕಳೇನೋ ಆದರು. ಆದರೆ ಈಗ ಆಗಿದ್ದೇನು?
ಈ ಸುದ್ದಿ ಓದಿ.

ಹುಕ್ಕೇರಿ ತಾಲೂಕಿನ  ನೊಗನಿಹಾಳದ ಬಸವರಾದ ಶಿವರುದ್ರ ಮರಬಸನ್ನವರ್ ಮಹಾದೇವಿ ಎನ್ನುವವಳನ್ನು ವಿವಾಹವಾಗಿದ್ದ. ಆಕೆಗೆ 6 ಜನ ಮಕ್ಕಳಾದರೂ ಎಲ್ಲವೂ ಹೆಣ್ಣು ಮಕ್ಕಳೇ ಆಗಿದ್ದರು. ಇದರಿಂದಾಗಿ ಆತ ಗಂಡು ಮಗು ಬೇಕೆಂದು 12 ವರ್ಷದ ಹಿಂದೆ ಮಾಲವ್ವ ಎನ್ನುವವಳನ್ನು ಮತ್ತೊಂದು ಮದುವೆಯಾಗಿದ್ದ. ಎರಡನೇ ಹೆಂಡತಿಗೆ 2 ಗಂಡು ಹಾಗೂ ಒಂದು ಹೆಣ್ಣು ಮಕ್ಕಳಾದರು. ಗಂಡು ಮಕ್ಕಳಿಬ್ಬರು ತಂದೆ, ತಾಯಿ ಜೊತೆಯಲ್ಲಿದ್ದರೆ, ಮಗಳು ಅಜ್ಜನ ಮನೆ ನಂದಗಾಂವ್ ದಲ್ಲಿರುತ್ತಿದ್ದಳು.

ಗುರುವಾರ ಸವತಿಯರಾದ ಮಹಾದೇವಿ ಮತ್ತು ಮಾಲವ್ವಾ ಮಧ್ಯೆ ಜಗಳ ನಡೆಯಿತು. ಇದರಿಂದ ನೊಂದ ಮಾಲವ್ವಾ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಘಟಪ್ರಭಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

 ಮಾಲವ್ವಾ ಬಸವರಾಜ ಮರಬಸನ್ನವರ (35 ವರ್ಷ ), ಮಗ ಸಿದ್ದಪ್ಪಾ ಬಸವರಾಜ ಮರಬಸನ್ನವರ (10 ವರ್ಷ) ಹಾಗೂ ಮತ್ತೋರ್ವ ಮಗ ಗುರುನಾಥ  ಬಸವರಾಜ ಮರಬಸನ್ನವರ (03 ವರ್ಷ) ಸಾವಿಗೀಡಾದವರು.
ಗಂಡು ಮಕ್ಕಳಿಗಾಗಿ ಮತ್ತೊಂದು ಮದುವೆಯಾದರೂ ಆ ಮಕ್ಕಳು ಬದುಕುಳಿಯಲಿಲ್ಲ.