Advertisement -Home Add

ಮತ್ತಷ್ಟು ಗಾಂಜಾ ವಶ: ಮಹಿಳೆ ಸೇರಿ ಇಬ್ಬರ ಬಂಧನ

ಹೊಲದಲ್ಲಿ ಬೆಳೆಸಿದ ಗಾಂಜಾ ಸಸಿ ಮತ್ತು ನಗದು ವಶ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಖಚಿತ ಮಾಹಿತಿ ಮೇರೆಗೆ ತಾಲೂಕಿನ ಜಾಂಬೋಟಿ ಗ್ರಾಮದ ಮನೆಯೊಂದರ ಮೇಲೆ ದಾಳಿ ನಡೆಸಿದ ಖಾನಾಪುರ ಪೊಲೀಸರು ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ೭೭೧ ಗ್ರಾಂ ಗಾಂಜಾ ವಶಕ್ಕೆ ಪಡೆದ ಘಟನೆ ಬುಧವಾರ ವರದಿಯಾಗಿದೆ.

ಈ ಘಟನೆಯಲ್ಲಿ ಅದೇ ಗ್ರಾಮದ ಪ್ರತಿಭಾ ಪ್ರಭಾಕರ ಬಿರ್ಜೆ ಎಂಬ ಮಹಿಳೆಯನ್ನು ಮತ್ತು ಹಳಿಯಾಳ ತಾಲೂಕು ಚಿಬ್ಬಲಕೇರಿ ಗ್ರಾಮದ ನಿವಾಸಿ ಲಕ್ಷ್ಮಣ ಸಹದೇವ ಹುಂದಳೇಕರ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.

ಬಂಧಿತರಿಂದ ಹಳಿಯಾಳ ತಾಲೂಕಿನ ಹೊಲದಲ್ಲಿ ಬೆಳೆಸಿದ ಗಾಂಜಾ ಸಸಿಗಳನ್ನು ಮತ್ತು ೬೬೦ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ಖಾನಾಪುರ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ಹಲವು ದಿನಗಳಿಂದ ಜಾಂಬೋಟಿ ಹಾಗೂ ಸುತ್ತಲಿನ ಭಾಗದವರಿಗೆ ಗಾಂಜಾ ಮಾರುತ್ತಿದ್ದ ಪ್ರತಿಭಾ ಎಂಬ ಮಹಿಳೆಯ ಚಲನವಲನಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದರು.

ಬುಧವಾರದ ದಾಳಿ ಸಂದರ್ಭದಲ್ಲಿ ಆಕೆಯ ಮನೆಯಲ್ಲಿ ಸಿಕ್ಕ ಗಾಂಜಾ ಹಾಗೂ ಆಕೆ ನೀಡಿದ ಮಾಹಿತಿ ಮೇರೆಗೆ ಹಳಿಯಾಳ ತಾಲೂಕಿನ ಚಿಬ್ಬಲಕೇರಿ ಗ್ರಾಮದ ಮನೆಯೊಂದರ ಮೇಲೆ ದಾಳಿ ನಡೆಸಿ ಮಾಲು ಸಮೇತ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಎಸ್.ಪಿ ಲಕ್ಷ್ಮಣ ನಿಂಬರಗಿ ಅವರ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಸಿಪಿಐ ಸುರೇಶ ಶಿಂಗಿ, ಪಿಎಸ್‌ಐ ಬಸಗೌಡ ಪಾಟೀಲ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.