ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ಪ್ರವಾಹ ಸಂತ್ರಸ್ತರಿಗೆ ಮನೆ ನಿರ್ಮಿಸಲು ಬಿಡುಗಡೆ ಮಾಡಲಾಗಿರುವ ಮೊದಲ ಕಂತಿನ ಹಣದಲ್ಲಿ ಕೆಲವರು ಕಮೀಷನ್ ಪಡೆಯುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಸಂತ್ರಸ್ತರ ಪರಿಹಾರ ಹಣದಲ್ಲಿ ಯಾರಾದರೂ ಕಮೀಷನ್ ಕೇಳಿರುವುದು ಕಂಡುಬಂದರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದ್ದಾರೆ.
ಪರಿಹಾರದ ಹಣದಲ್ಲಿ ಕಮೀಷನ್ ಪಡೆಯಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿಗಳು, ಇಂತಹ ಪ್ರಕರಣ ಕಂಡುಬಂದ ತಕ್ಷಣವೇ ಮೊಕದ್ದಮೆ ದಾಖಲಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಮನೆಯ ನಿರ್ಮಾಣಕ್ಕೆ ಮೊದಲ ಕಂತಿನ ಒಂದು ಲಕ್ಷ ರೂಪಾಯಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ.
ಈ ಹಣದಲ್ಲಿ ಕೆಲವರು ಕಮೀಷನ್ ಕೇಳುತ್ತಿದ್ದಾರೆ ಎಂಬುದು ಸಹಿಸಲು ಸಾಧ್ಯವಿಲ್ಲ. ಪರಿಹಾರ ಬಿಡುಗಡೆ ವಿಚಾರದಲ್ಲಿ ಮಧ್ಯವರ್ತಿಗಳಿಗೆ ಆಸ್ಪದವೇ ಇರುವುದಿಲ್ಲ.
ಸಂತ್ರಸ್ತರು ಮೊದಲ ಕಂತಿನ ಹಣದಲ್ಲಿ ನಿಗದಿತ ಹಂತದವರೆಗೆ ಮನೆ ನಿರ್ಮಿಸಿ, ಛಾಯಾಚಿತ್ರದ ಸಮೇತ ದಾಖಲೆಗಳನ್ನು ಸಲ್ಲಿಸಿದ ಬಳಿಕ ಎರಡನೇ ಕಂತಿನ ಹಣ ನೇರವಾಗಿ ಅವರ ಖಾತೆಗೆ ಜಮೆಯಾಗುತ್ತದೆ. ಆದ್ದರಿಂದ ಸಂತ್ರಸ್ತರು ಯಾವುದೇ ಕಾರಣಕ್ಕೂ ಯಾರಿಗೂ ಹಣ ನೀಡಬಾರದು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಒಂದು ವೇಳೆ ಯಾರಾದರೂ ಪರಿಹಾರ ಮಂಜೂರು ಮಾಡಲು ಹಣಕ್ಕಾಗಿ ಬೇಡಿಕೆ ಇಟ್ಟರೆ ಸಂತ್ರಸ್ತರು ತಕ್ಷಣವೇ ಅಂತಹವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಮತ್ತು ತಹಶೀಲ್ದಾರ ಕಾರ್ಯಾಲಯಕ್ಕೂ ಮಾಹಿತಿ ನೀಡಬೇಕು.
ಸಂಬಂಧಿಸಿದ ತಹಶೀಲ್ದಾರರು ಹಾಗೂ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಕೂಡ ಇಂತಹ ಪ್ರಕರಣಗಳ ಬಗ್ಗೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆಗಳ ಸಭೆ
ಲೋಕಾಯುಕ್ತ ಪೊಲೀಸರಿಂದ ಬೆಳಗಾವಿ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಕುಂದುಕೊರತೆಗಳ ಸಭೆಯನ್ನು ನಡೆಸಲು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಆರ್.ಶಿವಕುಮಾರ್ ಅವರು ಆದೇಶಿಸಿರುತ್ತಾರೆ. ಹಾಗೂ ತಾಲೂಕಾ ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಸದರಿ ಸಭೆಯಲ್ಲಿ ಕಡ್ಡಾಯವಾಗಿ ಹಾಜರಿರಬೇಕೆಂದು ಸೂಚಿಸಿರುತ್ತಾರೆ.
ಸರ್ಕಾರಿ ಕಛೇರಿಗಳಲ್ಲಿ ಅಧೀಕೃತ ಕೆಲಸಗಳನ್ನು ಮಾಡಿಕೊಡುವಲ್ಲಿ ವಿಳಂಬ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ಪತ್ರದಲ್ಲಿ ನೀಡಬಹುದಾಗಿದೆ.
ಸ್ಥಳದಲ್ಲಿ ಪರಿಹಾರ ಕಂಡುಕೊಳ್ಳಬಹುದಾದ ದೂರುಗಳನ್ನು ಅಲ್ಲಿನ ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಆರ್.ಶಿವಕುಮಾರ್ ರವರು ತಿಳಿಸಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಹುಕ್ಕೇರಿ ತಾಲೂಕ ಪಂಚಾಯತಿ ಸಭಾ ಭವನದಲ್ಲಿ ನವೆಂಬರ್ ೧೬ ರಂದು ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೨ ಗಂಟೆಯವರಿಗೆ ಕುಂದುಕೊರತೆಗಳ ಸಭೆ ನಡೆಸಲಿದ್ದಾರೆ.
ನವೆಂಬರ್ ೨೦ ರಂದು ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕುಗಳ ಸಭೆಯನ್ನು ಚಿಕ್ಕೋಡಿ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೨ ಗಂಟೆಯವರಿಗೆ ಕುಂದುಕೊರತೆಗಳ ಸಭೆ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಮಾವಿನ ಕೀಟ ಮತ್ತು ರೋಗಗಳ ನಿರ್ವಹಣಾ ಕ್ರಮ
ತೋಟದಲ್ಲಿ ಬೆಳೆಯುತ್ತಿರುವ ಮಾವಿನ ಗಿಡದ ಕಾಂಡವನ್ನು ಕೀಟ ರೋಗಗಳಿಂದ ರಕ್ಷಿಸುವುದು ತುಂಬಾ ಅವಶ್ಯಕವಾಗಿರುವುದರಿಂದ ಕಾಂಡ ರಕ್ಷಕ ಪೇಸ್ಟ್ ಬಳಿಯಬೇಕು ಎಂದು ಬೆಳಗಾವಿ ಹಾರ್ಟಿ ಕ್ಲಿನಿಕ್ ವಿಷಯ ತಜ್ಞರು ತಿಳಿಸಿದ್ದಾರೆ.
ಕಾಂಡ ರಕ್ಷಕ ಪೇಸ್ಟ್ ತಯಾರಿಸಲು ಕಾಪರ್ ಆಕ್ಸಿಕ್ಲೋರೈಡ್ ೪೦ ಗ್ರಾಂ + ಕ್ಲೋರೋಪೈರಿಫಾಸ್ ೧೦ಮಿ.ಲಿ.+ಹೆಕ್ಸಾಕೊನ್‌ಜೋಲ್ ೫ ಮಿ.ಲೀ. ಬಳಸಬೇಕು.
ಕ್ರಮಗಳು:
ದಟ್ಟವಾದ ರೆಂಬೆ ಕೊಂಬೆಗಳನ್ನು ಸವರುವುದು, ಮೊದಲ ಬಾರಿಯ ಕೊಟ್ಟಿಗೆ ಗೊಬ್ಬರವನ್ನು ಕೊಡುವುದು(ಪ್ರತಿ ಗಿಡಕ್ಕೆ ೨೫ಕಿ. ಗ್ರಾಂ.), ಹತ್ತು ವರ್ಷ ಮೇಲ್ಪಟ್ಟ ಮರಗಳಿಗೆ ಪ್ರಮುಖ ಪೋಷಕಾಂಶಗಳಾದ ಸಾರಜನಕ ೭೩೦ ಗ್ರಾಂ, ರಂಜಕ ೧೮೦ ಗ್ರಾಂ ಮತ್ತು ಪೊಟಾಷ್ ೬೮೦ ಗ್ರಾಂ ಪ್ರತಿಮರಕ್ಕೆ ಕೊಡುವುದು, ಮಾವು ಸುಣ್ಣವನ್ನು ಬಯಸುವುದರಿಂದ ಜಂಬಿಟ್ಟಿಗೆ, ಕೆಂಪುಗೋಡು ಹಾಗೂ ಕೆಂಪು ಮರಳು ಮಿಶ್ರಿತ ಮಣ್ಣಾಗಿದ್ದಲ್ಲಿ ಅರಳಿದ ಸುಣ್ಣವನ್ನು ಗಿಡದ ವಯಸ್ಸಿನ ಅನುಸಾರವಾಗಿ ೨೫೦ ಗ್ರಾಂನಿಂದ ೫ ಕೆ.ಜಿ. ವರೆಗೆ ೨ ರಿಂದ ೩ ವರ್ಷಕ್ಕೊಮ್ಮೆ ನೀಡುವುದು ಉತ್ತಮ ಎಂದು ಬೆಳಗಾವಿ ಹಾರ್ಟಿ ಕ್ಲಿನಿಕ್ ವಿಷಯ ತಜ್ಞರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ