Kannada NewsKarnataka News

ತಪ್ಪಿಲ್ಲದ ನನಗೆ ಶಿಕ್ಷೆ ಯಾಕೆ? ಇಲ್ಲಿದೆ ಉತ್ತರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  – ನಾನು ಯಾರಿಗೂ ಆನ್ಯಾಯ ಮಾಡಿಲ್ಲ, ಲಂಚತೆಗೆದುಕೊಂಡಿಲ್ಲ, ಕಳ್ಳತನ, ದರೋಡೆ, ಅತ್ಯಾಚಾರ ಇವು ಯಾವುದನ್ನೂ ಮಾಡದೆ ನನಗೇಕೆ ಬಡತನ, ರೋಗ, ಅವಮಾನ ಇತ್ಯಾದಿ ಸಮಸ್ತ ದುಃಖ? ಈ ಪ್ರಶ್ನೆ ಇಂದಿನ ಪ್ರಪಂಚದಲ್ಲಿ ಎಲ್ಲರನ್ನೂ ಕಾಡಿಸುತ್ತೆ. ಇದಕ್ಕೆ ಭಾರತೀಯ ಶಾಸ್ತ್ರಗಳಷ್ಟೇ ಉತ್ತರಕೊಟ್ಟಿದೆ ಎಂದು ಉತ್ತರಾಧಿಮಠದ ಶ್ರೀ ಸತ್ಯಾತ್ಮತೀರ್ಥ ಪಾದಂಗಳವರು ಹೇಳಿದರು.

ನಗರದ ರೇಲ್ವೆ ನಿಲ್ದಾಣದ ಹತ್ತಿರವಿರುವ ಬಿ. ಕೆ. ಮಾಡೆಲ್ ಹೈಸ್ಕೂಲದ ಹೊರ ಆವರಣದಲ್ಲಿ ಹಾಕಲಾಗಿರುವ ಭವ್ಯ ವೇದಿಕೆಯಲ್ಲಿ ಎಂಟು ದಿನಗಳ ಕಾಲ ನಗರದ ಪಾದುಕಾ ಮಹಾ ಸಮಾರಾಧನೆ ಸೇವಾ ಸಮಿತಿಯವರು ಹಮ್ಮಿಕೊಂಡಿರುವ ಶ್ರೀಮತ್ ಅನುವ್ಯಾಖ್ಯಾನ ಶ್ರೀಮನ್‌ನ್ಯಾಯಸುಧಾ ಮಂಗಲ ಮಹೋತ್ಸವದ ಸಂದರ್ಭದಲ್ಲಿ ಶ್ರೀಗಳು ಮೇಲಿಂತೆ ಹೇಳಿದರು.

ನಾವೇನೂ ಪಾಪ ಮಾಡದಿದ್ದರೂ ನಮ್ಮ ಅನಂತ ಜನ್ಮಗಳಲ್ಲಿ ಮಾಡಿದ ಅನಂತ ಪಾಪಗಳಿವೆಯಲ್ಲಾ? ಅದಕ್ಕಾಗಿ ಈಗ ದುಃಖ ಇದಯೇ ಹೊರತು ತಪ್ಪುಮಾಡದೇ ಸುಮ್ಮನೇ ಭಗವಂತ ಶಿಕ್ಷೆ ಕೊಟ್ಟಿಲ್ಲ. ಆಗತಾನೇ ಹುಟ್ಟಿದವನು ಏನೂ ಕ್ರಿಯೆ ಮಾಡಲಸಮರ್ಥನಾದವನು ಯಾವ ಪುಣ್ಯಕಾರ್ಯಗಳನ್ನೂ ಮಾಡಿರಲಾರ.

ಹೀಗಿದ್ದರೂ ಸ್ವಲ್ಪ ಪ್ರೌಢನಾದ ಅವನು “ಏನೂ ಪುಣ್ಯ ಕಾರ್ಯ ಮಾಡದ ನನಗೆ ಭಗವಂತ ಹುಟ್ಟಿದತಕ್ಷಣ ತಂದೆ ತಾಯಿಗಳ ಪ್ರೀತಿ ಸೌಖ್ಯ,ಲಾಲನೆ, ಪಾಲನೆ, ಬಂಧುಗಳ ಸಹಾಯಗಳನ್ನ ಭಗವಂತ ಹೇಗೆ ಕೊಟ್ಟ? ಹೀಗೆ ಯೋಚನೆ ಮಾಡುವುದೇ ಇಲ್ಲ.

ಹಾಗಾದರೇ ಪರಮ ಕರುಣಾಶಾಲಿಯಾದ ದೇವರು ಜನ್ಮಾಂತರದ ಪುಣ್ಯ ನಿಮಿತ್ತದಿಂದ ಈ ಜನ್ಮದಲ್ಲಿಯೇ ಪುಣ್ಯ ಮಾಡಿರದಿದ್ದರೂ, ಸುಖ ಕೊಟ್ಟಿದ್ದಾನೆ, ಅದರಂತೇ ಈ ಜನ್ಮದಲ್ಲಿಯೇ ಪಾಪ ಮಾಡಿರದಿದ್ದರೂ ಜನ್ಮಾಂತರ ಪಾಪ ನಿಮಿತ್ತದಿಂದ ಈ ಜನ್ಮದಲ್ಲಿ ದುಃಖ, ಶಿಕ್ಷೆಗಳನ್ನ ಕೊಟ್ಟಿದ್ದಾನೆ.

ಹೀಗೆಲ್ಲಾ ತಿಳಿದಾಗ ಭಗವಂತನಿಗೆ ದೋಷಾರೋಪಣೆ ಬುದ್ಧಿವಂತನಾದವನು ಮಾಡಲಾರ.
ಹೀಗಿದ್ದರೂ ಅನಂತ ಜನ್ಮಗಳಲ್ಲಿ ಮಾಡಿದ ಅನಂತ ಜನ್ಮಗಳ ಪಾಪಗಳ ನಾಶವೆಂದು? ಸದಾ ಸುಖಾನುಭವಸ್ಥಿತಿಯ ಮುಕ್ತಿ ಹೇಗೆ?, ಯಾವಾಗ? ಯಾರಿಂದ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಲಿಕ್ಕಾಗಿಯೇ ಈ ಎಲ್ಲಾ ವೇದಾಂತ, ಪಾಠ, ಪ್ರವಚನ, ಗೋಷ್ಠಿ, ಚರ್ಚೆ, ಸಂಶೋಧನೆ, ಬ್ರಹ್ಮಸೂತ್ರ, ಮಧ್ವಾಚಾರ್ಯರ ಅನುವ್ಯಾಖ್ಯಾನ, ಶ್ರೀಮಜ್ಜಯತೀರ್ಥರ ಶ್ರೀಮನ್ಯಾಯಸುಧಾ ಅಧ್ಯಯನ ಪಾಠ, ಪರೀಕ್ಷೆ ಇತ್ಯಾದಿಗಳು ನಡೆದಿವೆ.

ಇದು ಈ ಬೆಳಗಾವಿ ನಗರದಲ್ಲಿ ನಡೆಯುತ್ತಿರುವ ಶ್ರೀಮನ್ಯಾಯ ಸುಧಾ ಮಂಗಲ ಮಹೋತ್ಸವದ ಮುಖ್ಯ ಉದ್ದೇಶ ಎಂದು ಬಣ್ಣಿಸಿದರು.

ಈ ಶುಭ ಸಂದರ್ಭದಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸಿದ  ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನತೀರ್ಥರು ಈ ಕಾರ್ಯಕ್ರಮವನ್ನೂ  ಶ್ರೀಸತ್ಯಾತ್ಮರನ್ನೂ ಅಭಿನಂದಿಸಿದರು.

ಭಗವಂತನಲ್ಲಿ ಭಕ್ತಿ ಮೂಡಲು, ಪ್ರಮೇಯ ಗ್ರಂಥಗಳಷ್ಟೇ ಅಲ್ಲದೇ ಪ್ರಮಾಣ ಗ್ರಂಥಗಳ ಅಧ್ಯಯನ, ಸಂಶೋಧನೆ ಅವಶ್ಯಕವಾಗಿದೆ. ಆ ರೀತಿಯ ಶ್ರೇಷ್ಠ ಗ್ರಂಥವಾದ ಶ್ರೀಮನ್ಯಾಯಸುಧಾ ಅಧ್ಯಯನ, ಪರೀಕ್ಷೆ ಹಾಗೂ ಮಂಗಲ ಕಾರ‍್ಯಕ್ರಮಗಳು ತುಂಬ ಔಚಿತ್ಯಪೂರ್ಣವಾಗಿ ಮತ್ತು ಶ್ಲಾಘನೀಯ ಎಂದು ಹೇಳಿದರು.

ಇಂದಿನ ಯುವಕರಿಗೆ ಈ ಮಾರ್ಗದಲ್ಲಿ ತರಲು ಶ್ರೀ ಸತ್ಯಾತ್ಮರ ಸ್ರೀ ಜಯತೀರ್ಥ ವಿದ್ಯಾಪೀಠ ಹಾಗೂ ಪೇಜಾವರ ಶ್ರೀಗಳ ಪೂರ್ಣಪ್ರಜ್ಞ ವಿದ್ಯಾಪೀಠಗಳು ಕಾರ್ಯ ನಿರ್ವಹಿಸುತ್ತಿದ್ದು ಶ್ರೀ ಮಧ್ವಾಚಾರ್ಯರ ಎರಡು ಕಣ್ಣುಗಳಿದ್ದಂತಿವೆ ಎಂದು ಶ್ಲಾಘಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀಗಳು ಬೆಳಗಾವಿ ನಗರದಲ್ಲಿ ನಡೆಯುತ್ತಿರುವ ತಮ್ಮ ಗುರುಗಳಾದ ಶ್ರೀ ಸತ್ಯಪ್ರಮೋದತೀರ್ಥರ ಪಾದುಕಾ ಸಮಾರಾಧನೆ ಹಾಗೂ ಅವರೇ ಸ್ಥಪಿಸಿದ ಜಯತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳ ಶ್ರೀಮನ್ಯಾಯ ಸುಧಾಮಂಗಲ ಇವು ನಡೆಯುತ್ತಿರುವ ಶುಭ ಸಂದರ್ಭದಲ್ಲಿ ಅವರು ಯಾರ ಶಿಷ್ಯರ ಶಿಷ್ಯರೋ ಅಂತಹ ಮಹಾನುಭಾವರ ಶ್ರೀ ಸತ್ಯಧ್ಯಾನ ತೀರ್ಥರು ಇವತ್ತಿನ ಎಲ್ಲಾ ವಿದ್ಯಾಪೀಠಗಳಿಗೂ ಮೂಲ ಎಂದು ಹೇಳಿದರು.

ಈ ಸುಧಾ ಮಂಗಳ ಮಹೋತ್ಸವಕ್ಕೆ ಆಗಮಿಸಿದ ಉಡುಪಿ ಶ್ರೀ ಕಾಣಿಯೋರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಶ್ರೀ ಸತ್ಯಾತ್ಮತೀರ್ಥರನ್ನು ಶಾಲು ಹೊದಿಸಿ ಗೌರವಿಸಿದರು.
ಸಾಯಂಕಾಲದ ಸಾಂಸ್ಕೃತಿಕ ಕಾರ‍್ಯಕ್ರಮದಲ್ಲಿ ಧಾರವಾಡದ ಗೀತಾ ಆಲೂರ ಇವರಿಂದ ಹಾಡುಗಾರಿಕೆ, ವಡಗಾವಿಯ ರಾಘವೇಂದ್ರ ಭಜನಾ ಮಂಡಳದವರಿಂದ ಭಜನೆ, ಗುರುಗೋವಿಂದ ಭಜನಾ ಮಂಡಳಿಯರಿಂದ ಕೃಷ್ಣನ ಬಾಲ ಲೀಲೆಗಳು ರೂಪಕ ಹಾಗೂ ಗೋಕಾಕದ ಪರಿಮಳ ಭಜನಾ ಮಂಡಲದವರಿಂದ ದೀಪ ನೃತ್ಯಗಳು ನಡೆದವು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button