ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ತೀವ್ರ ತಲೆನೋವು, ತಲೆಸುತ್ತು, ವಾಂತಿ ಹಾಗೂ ಕಣ್ಣು ಮಂಜಾಗುವಿಕೆಯಿಂದ ಬಳಲುತ್ತಿದ್ದ ಮಹಿಳೆಯೋರ್ವಳನ್ನು ಮಹಾರಾಷ್ಟ್ರದ ಕೊಲ್ಹಾಪೂರದ ಆಸ್ಪತ್ರೆಯೊಂದರಿಂದ ಕರೆದುಕೊಂಡು ಬರಲಾಗಿತ್ತು. ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಅಪಘಾತ ಮತ್ತು ತುರ್ತು ವೈದ್ಯಕೀಯ ಸೇವಾ ಕೇಂದ್ರಕ್ಕೆ ಅರೆಪ್ರಜ್ಞಾವಸ್ಥೆಯಲ್ಲಿ ಆಗಮಿಸಿದಾಗ ಹಿರಿಯ ನರಶಸ್ತ್ರ ಚಿಕಿತ್ಸಕರಾದ ಡಾ. ಪ್ರಕಾಶ ಮಹಾಂತಶೆಟ್ಟಿ ಅವರು ಮೆದುಳಿನ ಎಂಜಿಯೋಗ್ರಾಫಿ ಮೂಲಕ ಪರೀಕ್ಷಿಸಿದಾಗ ನರಮಂಡಲದ ರಕ್ತನಾಳವು ಊದಿಕೊಂಡು ಒಳಗಡೆಯಿಂದ ರಕ್ತಸೋರುತ್ತಿರುವುದು ಕಂಡು ಬಂದಿತು.
ಅತ್ಯಂತ ಕಠಿಣವಾದ ಶಸ್ತ್ರಚಿಕಿತ್ಸೆ ಮೂಲಕ ಕ್ಲಿಪಿಂಗ್ ಅಳವಡಿಸಿ, ೫೩ವರ್ಷದ ಮಹಿಳೆಯನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ನರಮಂಡಲದ ರಕ್ತನಾಳಕ್ಕೆ ಬಾವು ಬಂದಿದ್ದರಿಂದ ನರಮಂಡಲ ವ್ಯವಸ್ಥೆ ಮೇಲೆ ತೀವ್ರ ಹಾನಿಯನ್ನುಂಟು ಮಾಡಿತ್ತು. ಒಂದು ವೇಳೆ ಶೀಘ್ರವೇ ಶಸ್ತ್ರಚಿಕಿತ್ಸೆ ನೆರವೇರಿಸದಿದ್ದರೆ, ಲಕ್ವಾ ಹೊಡೆದು ಶಾಶ್ವತವಾಗಿ ಅಂಗವಿಕಲತೆಯಾಗುತ್ತಿತ್ತು. ಇಲ್ಲವೇ ಜೀವಕ್ಕೆ ಎರವಾಗುವ ಸಂದರ್ಭ ಅಧಿಕವಾಗಿತ್ತು. ಅತ್ಯಂತ ಕಠಿಣವಾದ ಮತ್ತು ಸಂಕೀರ್ಣತೆಯಿಂದ ಕೂಡಿದ್ದ ಶಸ್ತ್ರಚಿಕಿತ್ಸಾ ಕೌಶಲ್ಯದ ಮೂಲಕ ನರಮಂಡಲಕ್ಕೆ ಹಾನಿಯಾಗುವುದನ್ನು ತಪ್ಪಿಸಲಾಯಿತು. ಊದಿಕೊಂಡಿರುವ ಅಥವಾ ಭಾವುಗೊಂಡು ರಕ್ತ ಪಸರುವಿಕೆಯಲ್ಲಿ ತೊಂದರೆ ಮಾಡುತ್ತಿದ್ದ ನರಕ್ಕೆ ಸೂಕ್ಷ್ಮ ಕ್ಲಿಪ್ ಅಳವಡಿಸಿ, ರಕ್ತ ಸಂಚಾರವನ್ನು ಸರಾಗಗೊಳಿಸಲಾಯಿತು.
ಈ ಸೂಕ್ಷ್ಮ ಕ್ಲಿಪ್ ಸ್ಪ್ರಿಂಗ್ ನಂತೆ ಕಾರ‍್ಯನಿರ್ವಹಿಸಲಿದ್ದು, ನಂತರ ಬಲೂನಿನಂತೆ ಊದಿಕೊಂಡಿರುವುದಕ್ಕೆ ರಕ್ತ ಸಂಚಾರ ನಿಂತುಹೋಗಿ, ಸರಳಗೊಂಡು ಸಹಜತೆಗೆ ಮರಳುತ್ತದೆ. ಟಿಟಾನಿಯಮ್‌ನಿಂದ ತಯಾರಿಸಲ್ಪಟ್ಟ ಕ್ಲಿಪ್ ಶಾಶ್ವತವಾಗಿರುತ್ತದೆ. ಇದರಿಂದ ಮತ್ತೆ ರಕ್ತನಾಳವು ಊದಿಕೊಳ್ಳುವ ಸಾಧ್ಯತೆಗಳು ಕಡಿಮೆಯಾಗುತ್ತದೆ. ಶಸ್ತ್ರಚಿಕಿತ್ಸೆಗೊಳಗಾದ ಮಹಿಳೆಯು ಗುಣಮುಖಗೊಂಡಿದ್ದಾಳೆ.
ಮಹಾರಾಷ್ಟ್ರದ ಮಹಾತ್ಮಾ ಜ್ಯೋತಿಬಾ ಫುಲೆ ಆರೋಗ್ಯ ಯೋಜನೆಯಡಿ ಉಚಿತ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಗಿದೆ. ಅತ್ಯಾಧುನಿಕವಾದ ಶಸ್ತ್ರಚಿಕಿತ್ಸಾ ಕೌಶಲ್ಯಗಳಿಂದ ಇಂತ ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದ ನುರಿತ ತಜ್ಞವೈದ್ಯರನ್ನು ಕೆಎಲ್‌ಇ ಸಂಸ್ಥೆಯ ಕಾರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ