
ಪ್ರಗತಿವಾಹಿನಿ ಸುದ್ದಿ ಬೆಂಗಳೂರು: ಸುದ್ದಿ ಮನೆಯಲ್ಲಿ ಸಿ.ಆರ್.ಕೆ. ಎಂದೇ ಹೆಸರಾದ ನಡೆದಾಡುವ ಮಾಹಿತಿ ಕಣಜ, 95 ವಸಂತ ತುಂಬಿರುವ ಸಿ.ಆರ್.ಕೃಷ್ಣರಾವ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ (ಕೆಯುಡಬ್ಲ್ಯುಜೆ) ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಅಭಿನಂದಿಸಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕೆಯುಡಬ್ಲ್ಯೂಜೆ ಹಮ್ಮಿಕೊಂಡಿರುವ “ಮನೆಯಂಗಳದಲ್ಲಿ ಮನತುಂಬಿ ನಮನ” ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಸಿ.ಆರ್.ಕೃಷ್ಣರಾವ್ ಮತ್ತು ಶ್ರೀಮತಿ ಶಾರದಾ ದಂಪತಿಗಳಿಗೆ ಕತ್ರಿಗುಪ್ಪೆಯಲ್ಲಿರುವ ಅವರ ನಿವಾಸದಲ್ಲಿ ಗೌರವ ಸಮರ್ಪಣೆ ಮಾಡಲಾಯಿತು.
ಐದು ದಶಕಗಳ ಕಾಲ ಮಾಧ್ಯಮ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸಿ.ಆರ್.ಕೆ. ಅವರು, ಮೈಸೂರು ರಾಜ್ಯ ಪತ್ರಕರ್ತರ ಸಂಘವನ್ನು ಸಮಗ್ರವಾಗಿ ಸಂಘಟಿಸಿ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವನ್ನಾಗಿ ರೂಪಿಸಲು ಶ್ರಮಿಸಿದ ಮಹನೀಯರಲ್ಲಿ ಸಿ ಆರ್ ಕೆ ಪಾತ್ರ ಮರೆಯಲಾಗದು.
‘ಸೋವಿಯತ್ ಲ್ಯಾಂಡ್’ ಪತ್ರಿಕೆಯಲ್ಲಿ ಕೆಲಸ ಮಾಡಲು ಅಂದಿನ ಮದ್ರಾಸ್ ಗೆ ಹೋದವರು ಅಲ್ಲಿನ ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ ಹೊರನಾಡ ಕನ್ನಡಿಗರ ಚಟುವಟಿಕೆಗಳ ಮೇಲೂ ಬೆಳಕು ಚೆಲ್ಲಿದ್ದಾರೆ.
ಐವತ್ತರ ದಶಕದಲ್ಲಿ “ಜನಶಕ್ತಿ”ಪತ್ರಿಕೆ ಆರಂಭವಾದಾಗ ಅಂದು ಮೈಸೂರು ರಾಜ್ಯ ಪತ್ರಕರ್ತರ ಸಂಘದಲ್ಲಿ ಸದಸ್ಯತ್ವ ಪಡೆದಿದ್ದೆ. ಅಂದು ಕೆ.ಜಿ.ರಸ್ತೆಯ ತಾಲೂಕು ಕಚೇರಿ ಬಳಿ ಕಲ್ಲು ಕಟ್ಟಡದಲ್ಲಿತ್ತು. ಅಂದು ಸಂಘವು ಕಟ್ಟಡಕ್ಕಾಗಿ ಸರಕಾರಕ್ಕೆ ತಿಂಗಳ ಬಾಡಿಗೆ 2ರೂ ಪಾವತಿಸುತ್ತಿದ್ದ ಕಾಲವದು ಎಂದು ಅವರೇ ಬರೆದಿರುವ ‘ಬದುಕಿನ ತಿರುವುಗಳು’ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಆಗಿನ ಪತ್ರಕರ್ತರಿಗೆ ನಿಷ್ಠೆ ಹೆಚ್ಚಾಗಿತ್ತು. ಆದರೆ, ಈಗ ಅದು ವಿರಳವಾಗಿರುವುದು ಬೇಸರ ತಂದಿದೆ. ಪತ್ರಕರ್ತ ಯಾವತ್ತೂ ತನ್ನ ನಿಷ್ಠೆ ಮತ್ತು ಬದ್ಧತೆಯಿಂದ ಬದುಕಿದರೆ ಮಾತ್ರ ಸಮಾಜದಲ್ಲಿ ಗೌರವ, ನಂಬಿಕೆ ಹೆಚ್ಚಾಗಲು ಸಾಧ್ಯ ಎಂದರು.
ಕೆಯುಡಬ್ಲ್ಯುಜೆ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರು ಸಂಘಟನೆಯಿಂದ ದೂರ ಉಳಿದಿದ್ದ ಕಾಲಘಟ್ಟದಲ್ಲಿ ಎಲ್ಲರನ್ನೂ ಸಂಘಟಿಸಿ ಕೆಯುಡಬ್ಲ್ಯೂಜೆ ಗೆ ಭದ್ರ ಬುನಾದಿ ಹಾಕಿದ ಹೆಗ್ಗಳಿಕೆ ಸಿ ಆರ್ ಕೆ ಅವರದು. ಸವಾಲುಗಳನ್ನು ಎದುರಿಸಿ ರಾಜ್ಯದ ಉದ್ದಗಲಕ್ಕೂ ಪತ್ರಕರ್ತರನ್ನು ಸಂಘಟಿಸಿದರು ಎಂದು ಅವರ ಸೇವೆಯನ್ನು ಶ್ಲಾಘಿಸಿದರು.
‘ಹೊಸತು’ ಮಾಸ ಪತ್ರಿಕೆ ಸಂಪಾದಕ ಡಾ.ಸಿದ್ದನಗೌಡ ಪಾಟೀಲ ಮಾತನಾಡಿ, ಸ್ವಾತಂತ್ರ್ಯ ಚಳವಳಿಯಲ್ಲಿ ಚಳವಳಿಗಾರರ ನಡುವೆ ಪೂರಕವಾಗಿ ಕೆಲಸ ಮಾಡುವ ಮೂಲಕ ದೇಶ ಪ್ರೇಮ ಮೆರೆದ ಸಿಆರ್ ಕೆ ಆದರ್ಶನೀಯರು. ಅವರು ನಡೆದು ಬಂದ ದಾರಿ ಅನುಕರಣೀಯ ಎಂದರು.
ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಮಾತನಾಡಿ, ಸಿ.ಆರ್.ಕೆ ಯವರು ನಡೆದಾಡುವ ವಿಶ್ವಕೋಶವಿದ್ದಂತೆ. ಪ್ರಪಂಚದ ಪ್ರಚಲಿತ ವಿದ್ಯಮಾನಗಳಲ್ಲಿ ಅಪಾರ ತಿಳುವಳಿಕೆ ಹೊಂದಿದವರು. ರಾಜೀವ್ ಗಾಂಧಿ ಪ್ರಧಾನಿ ಆಗಿದ್ದ ಅವಧಿಯಲ್ಲಿ ಬೆಂಗಳೂರು ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಸೋವಿಯತ್ ಉತ್ಸವ ನಡೆದಾಗ ಕಾರ್ಯಕ್ರಮ ಆಯೋಜನೆಯಲ್ಲಿ ಸಿ.ಆರ್.ಕೆ. ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಶಾರದಾ ಕೃಷ್ಣ ರಾವ್ ತಮ್ಮ ಪತಿಯೊಂದಿಗಿನ ವೈವಾಹಿಕ ಬದುಕಿನ ಆರು ದಶಕಗಳನ್ನು ಕಂಡಿರುವ ಕುರಿತು ಸಂತಸವನ್ನು ಹಂಚಿಕೊಂಡರು.
ರಾಜ್ಯ ಪತ್ರಕರ್ತರ ಸಂಘವು ತೆರೆ ಮರೆಯಲ್ಲಿದ್ದ ಹಿರಿಯರನ್ನು ಗುರುತಿಸಿ ಗೌರವಿಸುವ ಮನೆಯಂಗಳದಲ್ಲಿ ಮನತುಂಬಿ ನಮನ ಕಾರ್ಯಕ್ರಮ ನಮ್ಮೆಲ್ಲರ ಮನದಾಳದಲ್ಲಿ ಅಚ್ಚಳಿಯದೆ ಉಳಿಯುವಂತಾಗಿದೆ ಎಂದು ಶುಭ ಹಾರೈಸಿದರು.
ಸಿ.ಆರ್.ಕೆ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರ ಕಿರಣ್ ಹಾಗೂ ಪುತ್ರಿ ಪ್ರತಿಭಾ ಉದ್ಯೋಗ ನಿಮಿತ್ತ ವಿದೇಶದಲ್ಲಿ ನೆಲೆಸಿದ್ದಾರೆ. ಸಂಘವು ನಡೆಸುತ್ತಿರುವ ಕಾರ್ಯಕ್ರಮಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿ, ಇಂತಹ ಕಾರ್ಯಕ್ರಮ ಮುಂದುವರಿಸುವಂತೆ ಪ್ರಶಂಸಿದರು.
ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯುಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಸ್ವಾಗತಿಸಿದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ದೇವರಾಜ್, ವಾಸುದೇವ ಹೊಳ್ಳ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಚಿತ್ರದುರ್ಗ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ, ಪೋಟೋ ಜರ್ನಲಿಸ್ಟ್ ಪ್ರಶಾಂತ್ ಮತ್ತಿತರರು ಪಾಲ್ಗೊಂಡಿದ್ದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ.ಗಳ ಅನುದಾನ: ಸಿಎಂ ಘೋಷಣೆ
https://pragati.taskdun.com/latest/kalyana-karnatakacm-basavaraj-bommai5000-crore-release/