Kannada NewsKarnataka News

ಕಂಪನಿಗಳ ಸಾಮಾಜಿಕ ಜವಾಬ್ದಾರಿ ಸಲಹಾ ವಿಭಾಗ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕರ್ನಾಟಕ ಕಾನೂನು ಸಂಸ್ಥೆಯ ವ್ಯವಸ್ಥಾಪನಾ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ಮತ್ತು ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಕಾರ್ಪೋರೇಟ್ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ ಸಲಹಾ ಕೇಂದ್ರವನ್ನು ಐಎಂಇಆರ್‌ನಲ್ಲಿ ಉದ್ಘಾಟಿಸಲಾಯಿತು.
ಎಕ್ಸಪರ್ಟ್ ಇಂಜಿನಿಯರಿಂಗ್ ಎಂಟರ್‌ಪ್ರೈಜಿಸ್‌ನ ಸಿಇಒ ವಿನಾಯಕ ಲೋಕೂರ ಮಾತನಾಡಿ, ಕಾರ್ಪೋರೇಟ್ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ ಕಾನೂನು ೨೦೧೩ರ ವ್ಯಾಪ್ತಿಯಡಿ ಬರುವ ಕಂಪನಿಗಳಿಗೆ ಪಾಲನೆ ಕಡ್ಡಾಯವಾಗಿದ್ದು, ಶೆಡ್ಯೂಲ್ ೭ರಡಿ ತಿಳಿಸಿರುವ ಸಾಮಾಜಿಕ ಜವಾಬ್ದಾರಿಗಳ ನಿರ್ವಹಣೆಗೆ ಕಂಪನಿಗಳು ತಮ್ಮ ಲಾಭದ ಶೇ. ೨ರಷ್ಟನ್ನು ತೆಗೆದಿರಿಸಬೇಕಾಗುತ್ತದೆ.

ಸಾಮಾಜಿಕ ಜವಾಬ್ದಾರಿ ನಿರ್ವಹಣೆ ಕಂಪನಿಗಳಿಗೆ ಕಡ್ಡಾಯವಾಗಿದ್ದರೂ ನಿಸ್ವಾರ್ಥವಾಗಿ, ದೂರದೃಷ್ಟಿಯಿಂದ ಹಾಗೂ ದಯಾಗುಣಪರರಾಗಿ ಸಾಮಾಜಿಕ ಕರ್ತವ್ಯವನ್ನು ಕಂಪನಿಗಳು ನಿಭಾಯಿಸಬೇಕು ಎಂದರು.

ತಮ್ಮ ಕಂಪನಿ ರಕ್ತದಾನ ಶಿಬಿರ, ಸಸಿ ನೆಡುವಿಕೆಯಂತಹ ಮೊದಲಾದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದೆ. ಕಾರ್ಪೋರೇಟ್ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ ಸಲಹಾ ಕೇಂದ್ರದ ಸ್ಥಾಪನೆ ವಿವಿಧ ಕಂಪನಿಗಳು ಹಾಗೂ ಎನ್ ಜಿಒಗಳು ಒಗ್ಗೂಡಿ ಸಾಮಾಜಿಕ ಕಾರ್ಯ ನಿರ್ವಹಿಸಲು ಒಂದು ಉತ್ತಮ ವೇದಿಕೆಯಾಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಉದ್ಯಮಿ ಹಾಗೂ ಐಎಂಇಆರ್ ಅಡಳಿತ ಮಂಡಳಿ ಚೇರ್‌ಮನ್‌ ರಾಜೇಂದ್ರ ಬೆಳಗಾಂವಕರ ಮಾತನಾಡಿ, ಕಾರ್ಪೋರೇಟ್ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ ಪ್ರಾಜೆಕ್ಟಗಳು ದೂರಗಾಮಿ ದೃಷ್ಟಿಕೋನ ಹೊಂದಿರಬೇಕು. ಕಾರ್ಪೋರೇಟ್ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ ಸಲಹಾ ಕೇಂದ್ರವು ನಗರದ ಕಂಪನಿಗಳಿಗೆ ಸ್ಮಾರ್ಟ್ ಸಿಟಿಯಾಗಿ ಬೆಳಗಾವಿ ಅಭಿವೃದ್ಧಿ ವಿಚಾರಗಳನ್ನು ಹಂಚಿಕೊಳ್ಳಲು ಉತ್ತಮ ವೇದಿಕೆಯಾಗಲಿದೆ ಎಂದು ನುಡಿದರು.

ಸಾಮಾಜಿಕ ಜವಾಬ್ದಾರಿ ಸಲಹಾ ವಿಭಾಗದಲ್ಲಿ ಎಸ್. ಅರ್. ದೇಶಪಾಂಡೆ (ಸಿ.ಎಸ್) ಆರ್.ಒ.ಸಿ ಅನುಸರಣೆ, ಆಶೋಕ ಪರಾಂಜಪೆ (ಸಿ.ಎ) ಲೆಕ್ಕಪತ್ರಗಳು, ಡಾ. ಸಮೀನಾ ನಹೀದ್ ಬೇಗ್ (ಕಾನೂನು) ಹಾಗೂ ಡಾ. ಅತುಲ್ ದೇಶಪಾಂಡೆ, ಡಾ. ಕೀರ್ತಿ ಶಿವಕುಮಾರ್, ಶೈಲಜಾ ಹಿರೇಮಠ್, ರಾಹುಲ್ ಮೇಲ್‌ಕಾಂಟ್ರ್ಯಾಕ್ಟರ್ (ಸಿಎಸ್ ಆರ್, ಮಾನವ ಸಂಪನ್ಮೂಲ, ಹಣಕಾಸು, ವಿಶ್ಲೇಷಣೆ ಹಾಗೂ ಎನ್‌ಜಿಒ ಸಂಬಂಧಗಳು) ಒಂದು ತಂಡವಾಗಿ ಕಂಪನಿಗಳಿಗೆ ಸಲಹೆ ನೀಡಲಿದ್ದಾರೆ.
ಸಿಎಸ್‌ಆರ್ ವಿಭಾಗದ ಕಿರುಹೊತ್ತಿಗೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಏಕಸ್, ಅಶೋಕ ಐರನ್ ಗ್ರೂಪ್, ಓರಿಯಾನ್ ಹೈಡ್ರಾಲಿಕ್ಸ್ ಮೊದಲಾದ ಕಂಪನಿಗಳ ಪ್ರತಿನಿಧಿಗಳು ಹಾಗೂ ಸರ್ಕಾರೇತರ ಸೇವಾ ಸಂಘಟನೆಗಳಾದ ಮಹೇಶ್ ಫೌಂಡೇಶನ್, ಆಶ್ರಯ ಫೌಂಡೇಶನ್, ರಾಜಲಕ್ಷ್ಮಿ ಫೌಂಡೇಶನ್, ಜಯ ಭಾರತ ಫೌಂಡೇಶನ್, ಎನ್‌ಜಿಒ ಬಾರ್ಕ್ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಐಎಂಇಆರ್ ನಿರ್ದೇಶಕರಾದ ಡಾ. ಅತುಲ್ ದೇಶಪಾಂಡೆ ಸ್ವಾಗತಿಸಿದರು. ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸಂಧ್ಯಾ ಎಚ್. ವಿ ಮತ್ತು ಎರಡೂ ಸಂಸ್ಥೆಗಳ ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಪೋರೇಟ್ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ ಕುರಿತ ಮಾಹಿತಿ, ಸೇವೆಗೆ ಉದ್ಯಮಗಳು ಕೆಎಲ್‌ಎಸ್ ಐಎಂಇಆರ್ ೯೪೪೯೦೦೭೫೫೦ ಅಥವಾ [email protected] ಸಂಪರ್ಕಿಸಬಹುದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button