ಪ್ರಗತಿವಾಹಿನಿ ಸುದ್ದಿ, ಮೈಸೂರು : ಭಾರತದ ಸಂಸ್ಕೃತಿ ಹಾಗೂ ಭವಿಷ್ಯ ನಿರ್ಮಾಣದ ಕೆಲಸವನ್ನು ತಳಸಮುದಾಯಗಳು ಮಾಡುತ್ತಿವೆ. ತಳಸಮುದಾಯಗಳಿಗೆ ಸ್ವಾವಲಂಬಿ ಹಾಗೂ ಸ್ವಾಭಿಮಾನದ ಬದುಕು ನೀಡುವತ್ತ ಸರ್ಕಾರದ ನಿರ್ಣಯಗಳಿರುತ್ತವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಇಂದು ಭಾರತೀಯ ಜನತಾ ಪಾರ್ಟಿಯ ವತಿಯಿಂದ ಆಯೋಜಿಸಿರುವ ಎಸ್.ಸಿ ಮೋರ್ಚಾ – ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳು,ಭಾರತದ ಸಾಮಾಜಿಕವಾಗಿ ಪ್ರಮುಖವಾಗಿರುವ ಅಂಗವಾಗಿವೆ. ಭಾರತದ ಸಂಸ್ಕೃತಿಯ ತಳಹದಿಯೇ ಈ ಸಮುದಾಯಗಳು. ಈ ಸಂಸ್ಕೃತಿ ಭಾರತದ ಅಸ್ಮಿತೆಯಾಗಿದೆ. ಈ ಸಂಸ್ಕೃತಿ ಭಾರತಕ್ಕೆ ವಿಶಿಷ್ಟ ಸ್ಥಾನವನ್ನು ನೀಡಿದೆ. ಭಾರತದ ಅಸ್ಮಿತೆ ಹಾಗೂ ಅಭಿವೃದ್ಧಿಯನ್ನು ಕಾಯ್ದುಕೊಳ್ಳಲು ಈ ಸಮುದಾಯಗಳ ಅಭಿವೃದ್ಧಿಗೊಳಿಸುವುದು ನಮ್ಮ ಕರ್ತವ್ಯವಾಗಿದೆ. ಕೃಷಿ, ಕಾರ್ಖಾನೆ ಸೇರಿದಂತೆ ದುಡಿಮೆಯಲ್ಲಿ ತೊಡಗಿರುವ ತಳಸಮುದಾಯದ ದುಡಿಯುವ ವರ್ಗದವರೇ ರಾಜ್ಯದ ಆರ್ಥಿಕತೆಗೆ ಕಾರಣ ಎಂದರು.
*ಎಸ್ ಸಿ ಎಸ್ ಟಿ ಮೀಸಲಾತಿಯನ್ನು ಸಂವಿಧಾನಬದ್ಧವಾಗಿ ಹೆಚ್ಚಿಸಲಾಗಿದೆ :*
ಸಾಮಾಜಿಕ ಪೀಡನೆಗೆ ಕಾರಣವಾಗಿರುವವರ ಮಾನಸಿಕತೆಯನ್ನು ಬದಲಿಸುವ ಕೆಲಸವನ್ನು ಭಾಜಪದ ಎಸ್ ಸಿ ಮೋರ್ಚಾ ಮಾಡಬೇಕಿದೆ. ನಾವು ಯಾರಿಗೂ ಕಮ್ಮಿಯಿಲ್ಲ ಹಾಗೂ ನಮಗೆ ಯಾರ ಅನುಕಂಪವೂ ಬೇಕಾಗಿಲ್ಲ ಮತ್ತು ನಮಗೆ ಅವಕಾಶಗಳು ಬೇಕು ಎನ್ನುವುದನ್ನು ಸ್ಪಷ್ಟಪಡಿಸಬೇಕು. ತಳಸಮುದಾಯದ ಶ್ರೇಯೋಭಿವೃದ್ಧಿಗೆ ಸರ್ಕಾರ ಹತ್ತುಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕರ್ನಾಟಕದಲ್ಲಿ ಎಸ್ ಸಿ ಎಸ್ ಟಿ ಮೀಸಲಾತಿಯನ್ನು ಸಂವಿಧಾನಬದ್ಧವಾಗಿ ಹೆಚ್ಚಿಸಲಾಗಿದೆ. ಜನಸಂಖ್ಯೆಗನುಗುಣವಾಗಿ ಪ್ರಾತಿನಿಧ್ಯ ಇರಬೇಕೆನ್ನುವ ಕಾರಣದಿಂದ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದಕ್ಕೆ ಕಾನೂನಿನ ಬಲವನ್ನು ನೀಡುವ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದರು.
*ಡಾ.ಬಿ.ಆರ್.ಅಂಬೇಡ್ಕರ್ ಅವರು ಶ್ರೇಷ್ಠ ಮಾನವತಾವಾದಿ :*
ಡಾ.ಬಿ.ಆರ್.ಅಂಬೇಡ್ಕರ್ ಶ್ರೇಷ್ಠ ಮಾನವತಾವಾದಿ. ನಾನು ಅಂಬೇಡ್ಕರ್ ವಾದಿ ಎಂದು ಗರ್ವದಿಂದ ಹೇಳುತ್ತೇನೆ. ಅಂಬೇಡ್ಕರ್ ಅವರು ಸಾಮಾಜಿಕ ಹಾಗೂ ಅರ್ಥಿಕ ತಜ್ಞ. ಅವರೊಬ್ಬ ತತ್ವಜ್ಞಾನಿ ಹಾಗೂ ಶ್ರೇಷ್ಠ ದೇಶಭಕ್ತ. ಭಾರತೀಯ ಜನತಾ ಪಕ್ಷ ಅಂಬೇಡ್ಕರ್ ಅವರ ತತ್ವಾದರ್ಶಗಳ ಮೇಲೆ ನಡೆಯುತ್ತಿದೆ. ಅಂಬೇಡ್ಕರ್ ಅವರ ಕುರಿತು ಪ್ರಧಾನಿ ಮೋದಿಯವರ ಬದ್ದತೆ ಇನ್ಯಾರಲ್ಲೂ ಕಾಣಲು ಸಾಧ್ಯವಿಲ್ಲ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎನ್ನುವ ಮೂಲಕ ಎಲ್ಲರನ್ನೂ ಒಳಗೊಂಡ ಬೆಳವಣಿಗೆಯನ್ನು ಮಾಡಲಾಗುತ್ತಿದೆ ಎಂದರು.
*ತಳಸಮುದಾಯಗಳನ್ನು ಅಭಿವೃದ್ಧಿಗೊಳಿಸುವುದು ಭಾಜಪದ ನೀತಿ :*
ಕಾಂಗ್ರೆಸ್ ಪಕ್ಷದವರು ಅಂಬೇಡ್ಕರ್ ಅವರ ಹೆಸರನ್ನು ಬಳಸಿಕೊಳ್ಳುವುದು ಗೊತ್ತಿದೆಯೇ ಹೊರತು, ಸಮುದಾಯಗಳನ್ನು ಮೇಲೆತ್ತುವ ಕೆಲಸವನ್ನು ಮಾಡಲಿಲ್ಲ. ಕೇವಲ ವೋಟ್ ಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಎಸ್ ಸಿ ಎಸ್ಟಿ ಸಮುದಾಯದವರ ಜೀವನ ಉತ್ತಮಗೊಳಿಸಲು ಮಕ್ಕಳಿಗೆ ವಿದ್ಯಾರ್ಥಿವೇತನ ಹೆಚ್ಚಿಸಲಾಗಿದೆ. 100 ಅಂಬೇಡ್ಕರ್ ಹಾಸ್ಟೆಲ್ ನಿರ್ಮಾಣ, 5 ಪ್ರಮುಖ ಶೈಕ್ಷಣಿಕ ಕೇಂದ್ರಗಳಲ್ಲಿ ಮೆಗಾ ಹಾಸ್ಟೆಲ್ ಗಳನ್ನು ನಿರ್ಮಿಸುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸಲಾಗುತ್ತಿದೆ. ಶಿಕ್ಷಣ, ಉದ್ಯೋಗ, ಸಬಲೀಕರಣವನ್ನು ಎಸ್ ಸಿ , ಎಸ್ ಟಿ ಹಾಗೂ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಸಾಧ್ಯವಾಗಿಸುವತ್ತ ಕ್ರಮ ವಹಿಸಲಾಗುತ್ತಿದೆ. ಭೂಮೀ ಖರೀದಿಗೆ ನೆರವು, ಗೃಹ ನಿರ್ಮಾಣಕ್ಕೆ ನೆರವು, ಹೀಗೆ ಸುಮಾರು 29 ಸಾವಿರ ಕೋಟಿ ರೂ.ಗಳನ್ನು ಎಸ್ ಸಿಪಿ ಟಿಎಸ್ ಪಿ ಯೋಜನೆಗಳಿಗೆ ನೀಡಲಾಗಿದೆ. ಸರ್ಕಾರದ ಎಲ್ಲ ಕಾರ್ಯಕ್ರಮಗಳಲ್ಲಿ ತಳಸಮುದಾಯಗಳನ್ನು ಅಭಿವೃದ್ಧಿಗೊಳಿಸುವುದು ಭಾಜಪದ ನೀತಿಯಾಗಿದೆ ಎಂದರು.
https://pragati.taskdun.com/cm-bommayi-assured-to-take-steps-to-establishment-of-medhara-devlopment-board/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ