*ಮಾಜಿ ಪ್ರಿಯಕರನ ಜೊತೆ ಸೇರಿ ಹಾಲಿ ಪ್ರಿಯಕರನ ಹತ್ಯೆ*: *ಮಹಿಳೆ ಸೇರಿ ಇಬ್ಬರು ಬಂಧನ*

ಪ್ರಗತಿವಾಹಿನಿ ಸುದ್ದಿ: ಹಲವು ವರ್ಷಗಳ ಪ್ರೇಮ ಸಂಬಂಧ, ಮದುವೆ ವಿಚಾರದ ಗೊಂದಲ ಹಾಗೂ ಕಿರುಕುಳದ ಆರೋಪದ ನಡುವೆ ವ್ಯಕ್ತಿಯೊಬ್ಬನ ಕೊಲೆ ನಡೆದಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಹಾಗೂ ಆಕೆಯ ಮಾಜಿ ಪ್ರಿಯಕರನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಮೃತನನ್ನು ರಣವೀರಸಿಂಗ್ ರಜಪೂತ (32) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಶ್ರೀದೇವಿ ರಜಪೂತ ಹಾಗೂ ಆಕೆಯ ಪ್ರಿಯಕರ ಬೈರು ಪವಾರ್ ಎಂಬಾತನನ್ನು ಬಂಧಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ನಡೆದಿದ್ದು
ಶ್ರೀದೇವಿ ಹಾಗೂ ರಣವೀರಸಿಂಗ್ ರಜಪೂರ್ ನಡುವೆ ಕಳೆದ ಐದಾರು ವರ್ಷಗಳಿಂದ ಸಂಬಂಧವಿತ್ತು. ಈ ವಿಚಾರವನ್ನು ಇಬ್ಬರೂ ರಹಸ್ಯವಾಗಿಟ್ಟುಕೊಂಡಿದ್ದರು. ಇದೇ ಸಂದರ್ಭದಲ್ಲಿ ಶ್ರೀದೇವಿಯ ಪುತ್ರಿಯನ್ನು ರಣವೀರಸಿಂಗ್ನ ಸೋದರ ಸಂಬಂಧಿಗೆ ಮದುವೆ ಮಾಡಿಕೊಡುವಂತೆ ಕುಟುಂಬದ ಕಡೆಯಿಂದ ಬೇಡಿಕೆ ಬಂದಿತ್ತು.
ಈ ಮದುವೆ ಬೇಡಿಕೆಗೆ ಶ್ರೀದೇವಿ ಒಪ್ಪದ ಹಿನ್ನೆಲೆಯಲ್ಲಿ ರಣವೀರಸಿಂಗ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಮಗಳನ್ನು ಮದುವೆ ಮಾಡಿಕೊಡುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.
ರಣವೀರಸಿಂಗ್ನಿಂದ ಕಿರುಕುಳವಾಗುತ್ತಿದೆ ಎಂದು ಶ್ರೀದೇವಿ ಆರೋಪಿಸಿದ್ದಳು. ಈ ವಿಚಾರವನ್ನು ಹಿಂದೆ ಪರಿಚಯವಿದ್ದ ಬೈರು ಪವಾರ್ಗೆ ತಿಳಿಸಿದ್ದಾಳೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಶ್ರೀದೇವಿ ಮತ್ತು ಬೈರು ಪವಾರ್ ಶಾಲಾ ದಿನಗಳಿಂದಲೇ ಪರಸ್ಪರ ಪರಿಚಿತರಾಗಿದ್ದು, ಪ್ರೀತಿಸುತ್ತಿದ್ದರು. ಆದರೆ ಕುಟುಂಬಸ್ಥರು ಇಬ್ಬರ ಪ್ರೀತಿಗೆ ಸಮ್ಮತಿ ನೀಡದ ಹಿನ್ನೆಲೆಯಲ್ಲಿ ಸುಮಾರು 20 ವರ್ಷಗಳ ಹಿಂದೆ ಶ್ರೀದೇವಿ ಬಳ್ಳಿಗೇರಿಯ ಯುವಕನನ್ನು ವಿವಾಹವಾಗಿದ್ದಳು.
ಕಿರುಕುಳದ ವಿಚಾರ ತಿಳಿಸಿದ ಬಳಿಕ ಶ್ರೀದೇವಿ ಮತ್ತು ಬೈರು ಪವಾರ್ ಭೇಟಿಯಾಗಿ ರಣವೀರಸಿಂಗ್ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಯೋಜನೆಯಂತೆ ಬಳ್ಳಿಗೇರಿಗೆ ಬಂದ ಬೈರು ಪವಾರ್ ರಣವೀರಸಿಂಗ್ನ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಹತ್ಯೆಯ ಬಳಿಕ ಬೈರು ಪವಾರ್ ಸ್ಥಳದಿಂದ ಪರಾರಿಯಾಗಿದ್ದ. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕರೆಗಳ ವಿವರಗಳನ್ನು ಪರಿಶೀಲಿಸಿ ಶ್ರೀದೇವಿ ಹಾಗೂ ಬೈರು ಪವಾರ್ನನ್ನು ಬಂಧಿಸಿದ್ದಾರೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಹತ್ಯೆಗೆ ಸಂಬಂಧಿಸಿದ ಇತರ ಅಂಶಗಳು ಹಾಗೂ ಆರೋಪಿಗಳ ಪಾತ್ರದ ಕುರಿತು ತನಿಖೆಯಲ್ಲಿ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




