
ಟ್ರಾಫಿಕ್ ಫೈನ್ ಪಾವತಿಸಲು ಹೋಗಿ ಸೈಬರ್ ವಂಚಕರು ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿ 2.65 ಲಕ್ಷ ಹಣ ಕಳೆದುಕೊಂಡ ಟೆಕ್ಕಿ
ಪ್ರಗತಿವಾಹಿನಿ ಸುದ್ದಿ: ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ಸಂಬಂಧ ದಂಡ ಪಾವತಿ ಮಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಸಂಚಾರಿ ಪೊಲೀಸರು ಶೇ.50ರಷ್ಟು ರಿಯಾತಿ ನೀಡಿದ್ದು, ಆನ್ ಲೈನ್ ಮೂಲಕ ಪಾವತಿಗೆ ಅವಕಾಶ ಕಲ್ಪಿಸಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು ಲಿಂಕ್ ವೊಂದನ್ನು ಕಳುಹಿಸಿ ಖಾತೆಗೆ ಕನ್ನ ಹಾಕುವ ಕೆಲಸ ಮಾಡುತ್ತಿದ್ದಾರೆ.
ಎಪಿಕೆ ಫೈಲ್ ಲಿಂಕ್ ರೀತಿಯ ಲಿಂಕ್ ವೊಂದನ್ನು ಕಳುಹಿಸಿ ಸೈಬರ್ ವಂಚಕರು ಸಾರ್ವಜನಿಕರನ್ನು ವಂಚಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಈ ಲಿಂಕ್ ಕ್ಲಿಕ್ ಮಾಡಿದ ಟೆಕ್ಕಿಯೊಬ್ಬರು ಬರೋಬ್ಬರಿ 2.65 ಲಕ್ಷ ಹಣ ಕಳೆದುಕೊಂಡಿರುವ ಘಟನೆ ನಡೆದಿದೆ.
ಸೈಬರ್ ವಂಚಕರು ದಂಡವನ್ನು ಪರಿಶೀಲಿಸಲು ಮತ್ತು ಪಾವತಿಸಲು ಸಹಾಯ ಮಾಡುವುದಾಗಿ ಹೇಳುವ ಎಪಿಕೆ ಫೈಲ್ ಲಿಂಕ್ ಅನ್ನು ವಾಟ್ಸಾಪ್‌ಗೆ ಕಳುಹಿಸಿ ಟೆಕ್ಕಿಯನ್ನು ವಂಚಿಸಿದ್ದಾರೆ. 50 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಆನ್‌ಲೈನ್‌ನಲ್ಲಿ ಸಂಚಾರ ಉಲ್ಲಂಘನೆ ಶುಲ್ಕವನ್ನು ಪಾವತಿಸಲು ಲಿಂಕ್ ಎಂದು ನಂಬಿ ವಾಟ್ಸಾಪ್ ಮೂಲಕ ಕಳುಹಿಸಲಾದ ಎಪಿಕೆ ಫೈಲ್ ಅನ್ನು ಕ್ಲಿಕ್ ಮಾಡಿದ್ದಾರೆ. ಆಗ 2.65 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.
ಟೆಲಿಕಾಂ ಲೇಔಟ್ ನಿವಾಸಿ ಮುರಳಿ ಮೋಹನ್ ಸರ್ಕಾರಿ ವೆಬ್‌ಸೈಟ್‌ನಲ್ಲಿ ತಮ್ಮ ವಾಹನದ ಮೇಲೆ ಸಂಚಾರ ದಂಡಗಳಿವೆಯೇ ಎಂದು ಪರಿಶೀಲಿಸಿದ್ದಾರೆ. ಅದಾದ ಸ್ವಲ್ಪ ಸಮಯದ ನಂತರ, ಅವರಿಗೆ ಅಪರಿಚಿತ ಸಂಖ್ಯೆಯಿಂದ APK ಲಿಂಕ್ ಹೊಂದಿರುವ ವಾಟ್ಸಾಪ್ ಸಂದೇಶ ಬಂದಿದೆ. ದಂಡ ಪಾವತಿಸಲು ಅದನ್ನು ಡೌನ್‌ಲೋಡ್ ಮಾಡುವಂತೆ ಸೂಚಿಸಲಾಗಿತ್ತು. ಫೈಲ್ ಕ್ಲಿಕ್ ಮಾಡಿದ ಕೂಡಲೇ ಅವರ ಫೋನ್ ಹ್ಯಾಕ್ ಆಗಿದೆ. ಅದಾದ ಕೆಲವೇ ನಿಮಿಷಗಳಲ್ಲಿ, ಅವರ ಖಾತೆಯಿಂದ 2,65,979 ರೂ.ಗಳನ್ನು ದೋಚಲಾಗಿದೆ . ಹಣ ಕಳೆದುಕೊಂಡಿರುವ ಮುರಳಿ ಮೋಹನ್ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಪರಿಚಿತ ವ್ಯಕ್ತಿಗಳು ಕಳುಹಿಸುವ ಲಿಂಕ್ ಗಳನ್ನು ಕ್ಲಿಕ್ ಮಾಡುವ ಮುನ್ನ ಸರವಜನಿಕರು ಎಚ್ಚರವಹಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.