*ಅಂಗನವಾಡಿ ಕಾರ್ಯಕರ್ತೆಯರೇ, ಗರ್ಭಿಣಿ, ಬಾಣಂತಿಯರೇ ಹುಷಾರ್…! ಇಂತಹ ಲಿಂಕ್ ಕ್ಲಿಕ್ ಮಾಡುವ ಮುನ್ನ ಇರಲಿ ಎಚ್ಚರ*
ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರ ಹಾವಳಿ ಹೆಚ್ಚಾಗುತ್ತಿದೆ. ಇದೀಗ ಗರ್ಭಿಣಿಯರು, ಬಾಣಂತಿಯರು, ಚಿಕ್ಕ ಮಕ್ಕಳು, ಅಂಗನವಾಡಿ ಕಾರ್ಯಕರ್ತಯರನ್ನು ಹೊಸದೊಂದು ಆಪ್ ಮೂಲಕ ವಂಚಿಸುವ ಜಾಲವೊಂದು ಸಂಕ್ರಿಯವಾಗಿದ್ದು, ಈ ಬಗ್ಗೆ ಎಚ್ಚರಿಕೆವಹಿಸುವಂತೆ ಬೆಳಗಾವಿ ಪೊಲೀಸರು ಸೂಚಿಸಿದ್ದಾರೆ.
ಸೈಬರ್ ವಂಚಕರು POSHAN TRACKER APP ಹ್ಯಾಕ್ ಮಾಡಿ ಅದರಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿಯರು, ಬಾಣಂತಿಯರು ಮತ್ತು 6 ವರ್ಷದವರೆಗಿನ ಮಕ್ಕಳ ಮಾಹಿತಿಯನ್ನು ಪಡೆದು ವಂಚಿಸುತ್ತಿದ್ದಾರೆ. ಈ ಆಪ್ ಮೂಲಕ ಮಾಹಿತಿ ಸಂಗ್ರಹಿಸಿ ಗರ್ಭಿಣಿಯರಿಗೆ, ಬಾಣಂತಿಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಕರೆಮಾಡಿ ಲಿಂಕ್ ಒಂದನ್ನು ಕಳುಹಿಸಿ ಕ್ಲಿಕ್ ಮಾಡುವಂತೆ ಹೇಳಿ ಫೋನ್ ಪೇ ಆನ್ ಮಾಡಿ ಇಡಲು ತಿಳಿಸಿ ನಿಮ್ಮ ಖಾತೆಯಲ್ಲಿರುವ ಹಣವನ್ನು ವರ್ಗಾಯಿಸಿಕೊಳ್ಳುತ್ತಾರೆ.
POSHAN TRACKER APPಗೆ ಸಂಬಂಧಿಸಿದ ಅನುಮಾನಾಸ್ಪದ ಕರೆಗಳು ಬಂದಲ್ಲಿ ಎಚ್ಚರವಹಿಸಿ. ಅಪರಿಚಿತ ವ್ಯಕ್ತಿಗಳು ಕಳುಹಿಸುವ ಯಾವುದೇ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ.
ಯಾವುದೇ ಸೈಬರ್ ವಂಚನೆಗೆ ಒಳಗಾದಲ್ಲಿ ತಕ್ಷಣ ಸಿಇಎನ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಥವಾ 1930 ಸಂಖ್ಯೆಗೆ ಕರೆ ಮಾಡಿ ಎಂದು ಬೆಳಗಾವಿ ಪೊಲೀಸರು ಸೂಚಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ