Kannada NewsLatestPolitics

*ಹೆಚ್.ಡಿ.ಕುಮಾರಸ್ವಾಮಿ ಬಹಿರಂಗ ಚರ್ಚೆಗೆ ಬರಲಿ: ಅವರು ಹೇಳಿದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮಾಡೋಣ: ಡಿಸಿಎಂ ಸವಾಲು*

ಪ್ರಗತಿವಾಹಿನಿ ಸುದ್ದಿ: “ಕುಮಾರಸ್ವಾಮಿ ಎಲ್ಲಿ ಕೈಗಾರಿಕೆ ತರುತ್ತಾರೆ ಎಂದು ಹೇಳಲಿ, ಅಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮಾಡೋಣ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಯಶವಂತಪುರ ವಿಧಾನಸಭೆ ಕ್ಷೇತ್ರದ ಹೇರೋಹಳ್ಳಿಯ ಭರತ್ ನಗರ ಗಾಂಧಿ ಉದ್ಯಾನವನದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಶನಿವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.

ಎ ಖಾತಾ ಹಾಗೂ ಬಿ ಖಾತಾ ಪರಿವರ್ತನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಜೆಡಿಎಸ್ ಆರೋಪದ ಬಗ್ಗೆ ಕೇಳಿದಾಗ, “ಬಹಿರಂಗ ಚರ್ಚೆಗೆ ಬನ್ನಿ ಎಂದು ನಾನು ಕರೆಯುತ್ತಲೇ ಇದ್ದೇನೆ. ಎ ಖಾತಾ ಬಿ ಖಾತಾ ವಿಚಾರದಲ್ಲಿ ಯಾವ ಭ್ರಷ್ಟಾಚಾರ ನಡೆಯುತ್ತಿದೆ? ಬೆಂಗಳೂರು ನಾಗರಿಕರ ಆಸ್ತಿ ದಾಖಲೆ ಸರಿಪಡಿಸಿಕೊಳ್ಳಲು, ಅವರಿಗೆ ಮುಂದೆ ಬ್ಯಾಂಕ್ ಸಾಲ ಹಾಗೂ ಇತರೆ ಸೌಲಭ್ಯ ಸಿಗಬೇಕು, ಜನರಿಗೆ ಉತ್ತಮ ಸೌಕರ್ಯ ಒದಗಿಸಬೇಕು, ಜನರು ತೆರಿಗೆ ಪಾವತಿಸುವಂತಾಗಬೇಕು ಎಂಬ ಉದ್ದೇಶದಿಂದ ನಾವು ಈ ಯೋಜನೆ ಮಾಡುತ್ತಿದ್ದೇವೆ. ಜನರ ಆಸ್ತಿ ದಾಖಲೆ ಸರಿಪಡಿಸುವುದು ನಮ್ಮ ಆರನೇ ಗ್ಯಾರಂಟಿ. ನಮ್ಮ ಈ ಕಾರ್ಯವನ್ನು ದೇಶದ ಯಾವುದೇ ನಗರದಲ್ಲಿ ಮಾಡಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿದೆ. ನಮ್ಮ ಈ ಯೋಜನೆಗೆ ಸಾವಿರಾರು ಜನ ಅರ್ಜಿ ಹಾಕುತ್ತಿದ್ದಾರೆ. ಅವರ ಕಾಲದಲ್ಲಿ ಯಾಕೆ ಆಸ್ತಿಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡಲಿಲ್ಲ? ಇ ಖಾತಾ ಮಾಡಿಕೊಡಲು ಅವರಿಂದ ಆಗಲಿಲ್ಲ. ಅವರಿಗೆ ಇಂತಹ ಯಾವುದೇ ಆಲೋಚನೆಗಳು ಇರಲಿಲ್ಲ. ಕುಮಾರಸ್ವಾಮಿ ಅವರು ಕೈಗಾರಿಕೆ ತರುತ್ತೇನೆ ಎನ್ನುತ್ತಾರಲ್ಲ, ತರಲಿ. ರಾಮನಗರದಲ್ಲಿ ಕೈಗಾರಿಕೆ ಮಾಡುತ್ತಾರೋ, ಬಿಡದಿಯಲ್ಲಿ ಮಾಡುತ್ತಾರೋ, ಮಂಡ್ಯದಲ್ಲಿ ಮಾಡುತ್ತಾರೋ ಎಲ್ಲಿ ಮಾಡುತ್ತಾರೆ ಎಂದು ಅವರೇ ಪಟ್ಟಿ ನೀಡಲಿ. ಅಗತ್ಯ ಭೂಮಿ ಬಗ್ಗೆ ಅರ್ಜಿ ಹಾಕಲಿ. ಸುಮ್ಮನೆ ಖಾಲಿ ಮಾತಾಡಿದರೆ ಯಾರೂ ಒಪ್ಪುವುದಿಲ್ಲ” ಎಂದು ತಿಳಿಸಿದರು.

ಅಧಿಕಾರಕ್ಕೆ ಬರುವುದು, ಜಿಬಿಎ ರದ್ದುಗೊಳಿಸುವುದು ಬಿಜೆಪಿಯವರ ಹಣೆಯಲ್ಲಿ ಬರೆದಿಲ್ಲ

Home add -Advt

ಬಿಜೆಪಿ ಅಧಿಕಾರಿಕ್ಕೆ ಬಂದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರದ್ದು ಮಾಡುವುದಾಗಿ ಹೇಳುತ್ತಿದೆ ಎಂದಾಗ, “ಅವರು ಅಧಿಕಾರಕ್ಕೆ ಬಂದಾಗ, ಏನು ಬೇಕಾದರೂ ಮಾಡಲಿ. ಅಧಿಕಾರಕ್ಕೆ ಬರುವುದು, ಜಿಬಿಎ ರದ್ದುಗೊಳಿಸುವುದು ಅವರ ಹಣೆಯಲ್ಲಿ ಬರೆದಿಲ್ಲ. ಇದು ಹೀಗೆ ಮುಂದುವರಿಯಲಿದೆ. ಅವರಿಗೆ ಜಿಬಿಎ ಬೇಡವಾದರೆ ಅವರು ಮುಂಬರುವ ಪಾಲಿಕೆಗಳ ಚುನಾವಣೆಯನ್ನು ಬಹಿಷ್ಕರಿಸಲಿ. ಚುನಾವಣೆಯಿಂದ ಹಿಂದೆ ಸರಿಯಲಿ ನೋಡೋಣ. ಅವರ ಕಾರ್ಯಕರ್ತರೆಲ್ಲರೂ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗುತ್ತಿದ್ದಾರೆ” ಎಂದರು.

ತೇಜಸ್ವಿ ಸೂರ್ಯ ಖಾಲಿ ಟ್ರಂಕ್, ಅವರ ಕಾರ್ಯ ಯೋಜನೆ ಏನು?
ಸುರಂಗ ರಸ್ತೆಗೆ ಸಂಸದ ತೇಜಸ್ವಿ ಸೂರ್ಯ ಅವರ ವಿರೋಧದ ಬಗ್ಗೆ ಕೇಳಿದಾಗ, “ಯಾರೂ ಏನಾದರೂ ವಿರೋಧ ಮಾಡಿಕೊಳ್ಳಲಿ. ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದಾರೆ. ಸರ್ಕಾರ ಉತ್ತಮ ಕೆಲಸ ಮಾಡಿ ಹೆಸರು ಮಾಡಬಾರದು ಎಂಬುದು ಅವರ ಉದ್ದೇಶ. ನಾನು ಈ ಯೋಜನೆಗೆ ಯಾವುದೇ ಜಮೀನನ್ನು ಸ್ವಾಧೀನಪಡಿಸಿಕೊಳ್ಳುತ್ತಿಲ್ಲ. ಒಂದು ಸಣ್ಣ ಭಾಗದಲ್ಲಿ ಈ ರಸ್ತೆ ಹಾದುಹೋಗುತ್ತದೆ. ಇದನ್ನು ಪರಿಶೀಲನೆ ಮಾಡುತ್ತೇನೆ. ಸಮಸ್ಯೆ ಇದ್ದರೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಲಾಲ್ ಬಾಗ್ ಗೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ. ಲಾಲ್ ಬಾಗ್ ನ ಸ್ವಲ್ಪ ಜಾಗವನ್ನು ಈ ಯೋಜನೆ ಕಾಮಗಾರಿ ನಡೆಯುವವರೆಗೂ ಬಳಸಿಕೊಳ್ಳುತ್ತೇವೆ. ನಂತರ ಅದನ್ನು ತೆರವುಗೊಳಿಸಿ ಮತ್ತೆ ಲಾಲ್ ಬಾಗ್ ಉದ್ಯಾನಕ್ಕೆ ಹಿಂತಿರುಗಿಸುತ್ತೇವೆ” ಎಂದು ತಿಳಿಸಿದರು.

ಮುಂಬೈ, ದೆಹಲಿಯಲ್ಲಿ ಸುರಂಗ ರಸ್ತೆ ಮಾಡುತ್ತಿರುವುದೇಕೆ?

ಸಾವಿರಾರು ಇತಿಹಾಸವಿರು ವ ಜಾಗ ಎಂದು ತೇಜಸ್ವಿ ಸೂರ್ಯ ಹೇಳುತ್ತಿದ್ದಾರೆ ಎಂದಾಗ, “ಸುರಂಗ ರಸ್ತೆಯನ್ನು ಭೂಮಿಯ ಒಳಗೆ ಕೊರೆಯಲಾಗುವುದು. ಹೊರಗೆ ಮಾಡಲು ಆಗುವುದಿಲ್ಲ. ಅವರ ಮಾತು ಕೇಳಿಕೊಂಡು ಯೋಜನೆ ನಿಲ್ಲಿಸಲು ಆಗುವುದಿಲ್ಲ. ಹಾಗಿದ್ದರೆ ಮುಂಬೈ ನಲ್ಲಿ ಯಾಕೆ ಭೂಮಿ ಕೊರೆದು ಸುರಂಗ ರಸ್ತೆ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಯಾಕೆ ಮಾಡುತ್ತಿದ್ದಾರೆ. ಯಾವುದೇ ಸಂದರ್ಭದಲ್ಲಿ ನಾನು ಆತನ ಮಾತಿಗೆ ಬಾಗುವುದಿಲ್ಲ. ಹೋರಾಟ ಮಾಡುವವರು ಮಾಡುತ್ತಾರೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನಾವು ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ. ಅವರ ಕಾಲದಲ್ಲಿ ಬೆಂಗಳೂರಿಗಾಗಿ ಯಾವುದೇ ಒಳ್ಳೆಯ ಕೆಲಸ ಮಾಡಲು ಆಗಲಿಲ್ಲ. ತೇಜಸ್ವಿ ಸೂರ್ಯ ಎಂದರೆ ಖಾಲಿ ಟ್ರಂಕ್” ಎಂದು ಕಿಡಿಕಾರಿದರು.

ಶ್ರೀಮಂತರಿಗೆ ಅನುಕೂಲವಾಗಲು ಈ ಸುರಂಗ ರಸ್ತೆ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಹೌದು, ಟೋಲ್ ಕಟ್ಟಿ ಹೋಗುವವರಿಗೆ ಈ ರಸ್ತೆ ಮಾಡಲಾಗುತ್ತಿದೆ. ಈ ಯೋಜನೆ ಬೇಡವಾದರೆ ಅವರು ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಒಂದು ಕಾರ್ಯ ಯೋಜನೆಯನ್ನು ನೀಡಲು ಹೇಳಿ. ಬೆಂಗಳೂರಿನ ಸಂಸದರಾಗಿ ಪ್ರಧಾನಮಂತ್ರಿ ಬಳಿ ಒಂದು ದಿನವೂ ಈ ನಗರದ ಅಭಿವೃದ್ಧಿಗೆ 10 ರೂಪಾಯಿ ವಿಶೇಷ ಅನುದಾನ ಕೊಡಿಸಿಲ್ಲ. ಅವರ ಸರ್ಕಾರವಿದ್ದಾಗ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳೇನು? ಅವರು ಸಮಸ್ಯೆ ಬಗೆಹರಿಸಲಿಲ್ಲ ಯಾಕೆ? ಕಾಲದಲ್ಲಿ ಕಸದ ಟೆಂಡರ್ ಕರೆಯಲು ಸಾಧ್ಯವಾಗಲಿಲ್ಲ ಯಾಕೆ? ರಸ್ತೆ ಅಗಲೀಕರಣ, ಫ್ಲೈಓವರ್ ಮಾಡಲಿಲ್ಲ ಯಾಕೆ? ಅವರು ಬೆಂಗಳೂರಿಗಾಗಿ ಏನೂ ಮಾಡಲಿಲ್ಲ. ಬೆಂಗಳೂರಿನ ಬೀದಿಗಳಲ್ಲಿ ಕೇಬಲ್ ವೈಯರ್ ಗಳು ನೇತಾಡುತ್ತಿರುವುದನ್ನು ನೋಡುತ್ತಿದ್ದೀರಲ್ಲವೇ? ಅವುಗಳನ್ನು ಯಾಕೆ ತೆರವುಗೊಳಿಸಲಿಲ್ಲ. ಮಾಫಿಯಾ ಜೊತೆ ಕೈಜೋಡಿಸಿ, ಬೆಂಗಳೂರನ್ನು ಹದಗೆಡಿಸಿದ್ದಾರೆ. ಈ ಕಾರಣಕ್ಕೆ ಜನ ನಮ್ಮ ಪಕ್ಷಕ್ಕೆ ಬೆಂಬಲಿಸಿ 140 ಶಾಸಕರನ್ನು ಆಯ್ಕೆ ಮಾಡಿ ಅಧಿಕಾರದಲ್ಲಿ ಕೂರಿಸಿದ್ದಾರೆ. ನಾವು ನಮ್ಮ ಕೆಲಸವನ್ನು ಮಾಡೇ ಮಾಡುತ್ತೇವೆ. ಅದಕ್ಕೆ ಬದ್ಧರಾಗಿದ್ದೇವೆ. ಬೆಂಗಳೂರು ಜಾಗತಿಕ ನಗರ. ಇದನ್ನು ಕಾಪಾಡಲು ಏನು ಮಾಡಬೇಕೋ ಅದನ್ನು ಮಾಡಿಯೇ ಮಾಡುತ್ತೇವೆ” ಎಂದು ತಿಳಿಸಿದರು.

ಪ್ರದೀಪ್, ಪ್ರತಾಪ್ ವಿಚಾರದಲ್ಲಿ ಮಧ್ಯ ಪ್ರವೇಶಿಸಲಾರೆ, ಅಭಿವೃದ್ಧಿ ವಿಚಾರ ಇದ್ದರೆ ಹೇಳಿ:

ಶಾಸಕ ಪ್ರದೀಪ್ ಈಶ್ವರ್ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ನಡುವಣ ಕಿತ್ತಾಟದ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ನಾನು ಮಧ್ಯಪ್ರವೇಶ ಮಾಡುವುದಿಲ್ಲ. ಯಾವುದಾದರೂ ಅಭಿವೃದ್ಧಿ ವಿಚಾರ ಇದ್ದರೆ ನಾನು ಮಾತನಾಡುತ್ತೇನೆ” ಎಂದರು.

ಶಾಸಕ ಎಸ್.ಟಿ ಸೋಮಶೇಖರ್ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರಾ ಎಂದು ಕೇಳಿದಾಗ, “ಅವೆಲ್ಲಾ ಬಿಡಿ. ಒಬ್ಬ ಶಾಸಕರಾಗಿ ಏನು ಕರ್ತವ್ಯ ಮಾಡಬೇಕೋ ಅವರು ಮಾಡುತ್ತಿದ್ದಾರೆ” ಎಂದರು.

ಬೆಂಗಳೂರು ನಡಿಗೆ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, “ಸುಮಾರು 25 ವರ್ಷಗಳ ಹಿಂದೆ ಅಭಿವೃದ್ಧಿಯಾದ ಪ್ರದೇಶ. ಇಲ್ಲಿ ದಟ್ಟಣೆ ಹೆಚ್ಚಾಗಿದೆ. ಇಲ್ಲಿ ಹೆಚ್ಚಾಗಿ ಮಧ್ಯಮವರ್ಗದ ಜನರಿದ್ದಾರೆ. ಅನೇಕ ಮೂಲಭೂತಸೌಕರ್ಯ ಸಮಸ್ಯೆಗಳಿವೆ. ನೂರಾರು ಜನ ಬಂದು ತಮ್ಮ ಸಮಸ್ಯೆ ಹೇಳಿಕೊಂಡಿದ್ದು, ಈ ಭಾಗಕ್ಕೆ ಮತ್ತೊಂದು ದಿನ ಬಂದು ಈ ಜನರಿಗೆ ಸಮಯ ನೀಡುತ್ತೇನೆ” ಎಂದು ತಿಳಿಸಿದರು.

Related Articles

Back to top button