Karnataka NewsLatestPolitics

*ಸಣ್ಣ ವ್ಯಾಪಾರಿಗಳಿಗೆ ತೆರಿಗೆ ನೋಟಿಸ್: ಬಿಜೆಪಿಯವರು ಬಾಳೆಹಣ್ಣು ತಿಂದು ನಮ್ಮ ಮೂತಿಗೆ ಒರೆಸಲು ಪ್ರಯತ್ನಿಸುತ್ತಿದ್ದಾರೆ: ಡಿಸಿಎಂ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: “ಸಣ್ಣ ವ್ಯಾಪಾರಿಗಳಿಗೆ ಜಿಎಸ್ ಟಿ ನೋಟೀಸ್ ಜಾರಿ ಮಾಡುವ ಮೂಲಕ ಬಿಜೆಪಿಯವರು ತಾವು ಬಾಳೆಹಣ್ಣು ತಿಂದು ನಮ್ಮ ಮೂತಿಗೆ ಒರೆಸುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು.

ಸದಾಶಿವನಗರ ನಿವಾಸದ ಬಳಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದರು.

“ಕೇಂದ್ರ ಬಿಜೆಪಿ ಸರ್ಕಾರ 2019ರಲ್ಲೇ ವಾರ್ಷಿಕ 40 ಲಕ್ಷಕ್ಕೂ ವಹಿವಾಟು ಮಿತಿ ನಿಗದಿಗೊಳಿಸಿ ಎಲ್ಲಾ ರಾಜ್ಯ ಸರ್ಕಾರಗಳಿಗೂ ಇದನ್ನು ಪಾಲಿಸುವಂತೆ ಆದೇಶ ನೀಡಿದ್ದಾರೆ. ಬಡವರಿಗೆ ಕಿರುಕುಳ ನೀಡುವುದನ್ನು ಬಿಜೆಪಿ ಸರ್ಕಾರ ಹಿಂಪಡೆಯಬೇಕು. ತರಕಾರಿ, ಹಣ್ಣು, ಎಳನೀರು, ಹೂವಿನ ವ್ಯಾಪಾರಿ ಸೇರಿದಂತೆ ಸಣ್ಣಪುಟ್ಟ ವ್ಯಾಪಾರ ಮಾಡುವ ಲಕ್ಷಾಂತರ ಮಂದಿ ಇದ್ದಾರೆ. ಈಗಾಗಲೇ 14 ಸಾವಿರ ವ್ಯಾಪಾರಿಗಳಿಗೆ ನೋಟೀಸ್ ನೀಡಲಾಗಿದೆ. ಈ ಹಿಂದೆಯೇ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಜಿಎಸ್ ಟಿ ವಿಚಾರವಾಗಿ ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರದಲ್ಲಿ ಜನರಿಗೆ ಹೇಗೆ ನೆರವಾಗಬಹುದು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ” ಎಂದು ತಿಳಿಸಿದರು.

ಈ ವಿಚಾರವಾಗಿ ಕೇಂದ್ರಕ್ಕೆ ಪತ್ರ ಬರೆಯುತ್ತೀರಾ ಎಂದು ಕೇಳಿದಾಗ, “ಖಂಡಿತವಾಗಿ ಬರೆಯುತ್ತೇವೆ. ನಮ್ಮ ಜನರಿಗೆ ನ್ಯಾಯ ಒದಗಿಸಿಕೊಡಬೇಕು. ಅತಿ ಹೆಚ್ಚು ಜಿಎಸ್ ಟಿ ತೆರಿಗೆ ಕಟ್ಟುತ್ತಿರುವ ರಾಜ್ಯ ನಮ್ಮದು. ನಮ್ಮ ಬಡ ಹಾಗೂ ಮಧ್ಯಮ ವ್ಯಾಪಾರಿಗಳಿಗೆ ಇದರಿಂದ ತೊಂದರೆ ಆಗುತ್ತಿದೆ” ಎಂದು ತಿಳಿಸಿದರು.

Home add -Advt

ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಟಾರ್ಗೆಟ್ ನೀಡಿರುವುದರಿಂದ ಈ ನೋಟೀಸ್ ನೀಡಲಾಗಿದೆ ಎಂದು ಕೇಳಿದಾಗ, “ಕೇಂದ್ರ ಜಿಎಸ್ ಟಿ ಕೌನ್ಸಿಲ್ ಯಾವ ನಿಯಮ ರೂಪಿಸುತ್ತಾರೋ ಅದರಂತೆ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ. ಕೇಂದ್ರದ ಸಮಿತಿಯ ಒತ್ತಡದ ಮೇರೆಗೆ ಈ ನೋಟೀಸ್ ನೀಡಲಾಗಿದೆ” ಎಂದು ಹೇಳಿದರು.

ಜಿಬಿಎ ಅಡಿಯಲ್ಲಿ 5 ಪಾಲಿಕೆ ಮಾಡುವುದನ್ನು ಪ್ರಶ್ನಿಸಿ ಪಿಐಎಲ್ ಅರ್ಜಿ ಹಾಕಿರುವ ಬಗ್ಗೆ ಕೇಳಿದಾಗ, “ಯಾರು ಬೇಕಾದರೂ ಇದರ ಬಗ್ಗೆ ಆಕ್ಷೇಪಣೆ ಸಲ್ಲಿಸಬಹುದು. ಇದರಲ್ಲಿ ತಪ್ಪೇನಿಲ್ಲ ಇದು ಅವರ ಹಕ್ಕು. ಅದನ್ನು ಮೊಟಕುಗೊಳಿಸಲು ಆಗುವುದಿಲ್ಲ. ನಾವು ಏನಾದರೂ ತಪ್ಪು ಮಾಡಿದ್ದಾರೆ ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಬೆಂಗಳೂರಿನಲ್ಲಿ ಐದು ಪಾಲಿಕೆ ಮಾಡಲು ಸರ್ಕಾರ ಬದ್ಧವಾಗಿದೆ. ನಾನು ಬಿಜೆಪಿ ನಾಯಕರ ಸಭೆ ಕರೆದು ಚರ್ಚಿಸಿ ಸಲಹೆಗಳನ್ನು ಸ್ವೀಕರಿಸಿದ್ದೇನೆ. ಜಂಟಿ ಸದನ ಸಮಿತಿ ರಚಿಸಿ ಚರ್ಚೆ ಮಾಡಲಾಗಿದೆ. ಈಗಲೂ ಅವರು ತಮ್ಮ ಆಕ್ಷೇಪಣೆ ಸಲ್ಲಿಸಬಹುದು. ಅವರು ರಾಜಕೀಯ ಕಾರಣಕ್ಕೆ ಧ್ವನಿ ಎತ್ತುತ್ತಿದ್ದಾರೆ. ಬೆಂಗಳೂರಿನ ಹಿತಕ್ಕಾಗಿ ಐದು ಪಾಲಿಕೆ ಮಾಡಲು ಮುಂದಾಗಿದ್ದೇವೆ. ಮುಂದಿನ ಒಂದೆರಡು ದಿನಗಳಲ್ಲಿ ಮಾಧ್ಯಮಗೋಷ್ಠಿ ಕರೆದು ಎ ಖಾತಾ, ಬಿ ಖಾತಾ ವಿಚಾರ, ಇ-ಖಾತಾ ಅಭಿಯಾನ, ತೆರಿಗೆ ಹಾಗೂ ಪಾಲಿಕೆ ವಿಚಾರವಾಗಿ ಮಾಹಿತಿ ನೀಡುತ್ತೇನೆ” ಎಂದು ತಿಳಿಸಿದರು.

ಸುರ್ಜೆವಾಲ ಅವರು ಮತ್ತೆ ರಾಜ್ಯಕ್ಕೆ ಭೇಟಿ ನೀಡುವ ಬಗ್ಗೆ ಕೇಳಿದಾಗ, “25ಕ್ಕೆ ನಾನು ಹಾಗೂ ಸಿಎಂ ದೆಹಲಿ ಪ್ರವಾಸ ಮಾಡುತ್ತಿದ್ದೇವೆ. ಇನ್ನು ಸಂಸತ್ ಅಧಿವೇಶನ ನಡೆಯುತ್ತಿದೆ. ನನಗೆ ಗೊತ್ತಿರುವ ಮಾಹಿತಿ ಇಷ್ಟೆ” ಎಂದು ತಿಳಿಸಿದರು.

ಎಸ್ ಐಟಿ ರಚನೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಪರ ವಿರೋಧ ಚರ್ಚೆ ಆಗುತ್ತಿದೆ. ಇದನ್ನು ಗೃಹ ಸಚಿವರು ನಿಭಾಯಿಸುತ್ತಿದ್ದು, ಬಹಳ ಹಿರಿಯ ಅಧಿಕಾರಿಗಳನ್ನು ಎಸ್ ಐಟಿ ತಂಡದಲ್ಲಿ ನಿಯೋಜಿಸಿದ್ದಾರೆ. ತನಿಖೆ ನಂತರ ಸತ್ಯಾಸತ್ಯತೆ ತಿಳಿಯುತ್ತದೆ” ಎಂದರು.

ವಿಷಯಾಂತರ ಮಾಡಲು ಎಸ್ ಐಟಿ ರಚಿಸಿದ್ದಾರೆ ಎಂದು ಕೇಳಿದಾಗ, “ನಾವು ಏನು ಮಾಡಿದರೂ ಬಿಜೆಪಿ ವಿರೋಧ ಮಾಡುತ್ತದೆ” ಎಂದರು.

ಸ್ಥಳೀಯ ಪೊಲೀಸ್ ತನಿಖೆ ನಂತರ ಎಸ್ ಐಟಿ ರಚನೆ ಬಗ್ಗೆ ತೀರ್ಮಾನ ಎಂದು ಸಿಎಂ ಹೇಳಿದ ಬೆನ್ನಲ್ಲೇ ದಿಢೀರನೆ ಎಸ್ ಐಟಿ ರಚನೆಯಾಗಿದೆ ಎಂದು ಕೇಳಿದಾಗ, “ಮಾಧ್ಯಮಗಳು ಈ ವಿಚಾರವನ್ನು ದೊಡ್ಡದಾಗಿ ಬಿಂಬಿಸಿದಾಗ ನಾವು ಮಾಧ್ಯಮಗಳಿಗೆ ಗೌರವ ನೀಡಬೇಕಲ್ಲವೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜಕ್ಕೆ ನ್ಯಾಯ ಒದಗಿಸುವಲ್ಲಿ ನಿಮಗೂ ನಮ್ಮಷ್ಟೇ ಜವಾಬ್ದಾರಿ ಇದೆ. ನಿಮ್ಮ ಹಾಗೂ ವಿರೋಧ ಪಕ್ಷಗಳ ಹಿತವಚನ, ನುಡಿಮುತ್ತುಗಳನ್ನು ನಾವು ಕೇಳಬೇಕು” ಎಂದು ತಿಳಿಸಿದರು.

Related Articles

Back to top button