*ದೆಹಲಿ ಪಾಲಿಟಿಕ್ಸ್ ಎಂಟ್ರಿ ಆಸೆ ಬಿಚ್ಚಿಟ್ಟ ಡಿ.ಕೆ.ಶಿವಕುಮಾರ* *ರಾಷ್ಟ್ರ ರಾಜಕಾರಣಕ್ಕೆ ಹೋಗಲು ದೊಡ್ಡ ಅಡ್ಡಿ ಬಹಿರಂಗಪಡಿಸಿದ ಡಿಸಿಎಂ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಒಂದಿಷ್ಟು ದಿನ ದೆಹಲಿ ಪಾಲಿಟಿಕ್ಸ್ ಮಾಡಬೇಕೆನ್ನುವ ಆಸೆ ಇದೆ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬಹಿರಂಗಪಡಿಸಿದ್ದಾರೆ.
ಪಬ್ಲಿಕ್ ಟಿವಿ 13 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ ಅವರಿಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಆಸೆ ಮತ್ತು ಅದಕ್ಕಿರುವ ಅಡ್ಡಿಯನ್ನು ಬಹಿರಂಗಪಡಿಸಿದರು. ಕರ್ನಾಟಕದಲ್ಲಿ ಒಂದು ಏಜ್ ಇದೆ. ಅದು ಮುಗಿದ ನಂತರ ದೆಹಲಿಯಲ್ಲೂ ಒಂದಿಷ್ಟು ಕಾಲ ರಾಜಕಾರಣ ಮಾಡಬೇಕೆನ್ನುವ ಆಸೆ ಇದೆ ಎಂದು ಅವರು ಹೇಳಿದರು.
ಆದರೆ ಹಿಂದಿ ಭಾಷೆ ಬಾರದಿರುವುದು ತಮಗೆ ರಾಷ್ಟ್ರ ರಾಜಕಾರಣಕ್ಕೆ ಹೋಗಲು ಇರುವ ದೊಡ್ಡ ಅಡ್ಡಿ ಎಂದು ಶಿವಕುಮಾರ ಬಹಿರಂಗಪಡಿಸಿದರು. ತಮಗೆ ಹಿಂದಿ ಕಲಿಯಲು ಸಾಧ್ಯವಾಗಲಿಲ್ಲ. ದೆಹಲಿಯಲ್ಲಿ ರಾಜಕಾರಣ ಮಾಡಬೇಕೆಂದರೆ ಹಿಂದಿ ಬರಬೇಕು. ನಾನು ಜೈಲಿನಲ್ಲಿದ್ದಾಗ ಹಿಂದಿ ಕಲಿಯಲು ಒಂದಿಷ್ಟು ಪ್ರಯತ್ನ ಮಾಡಿದ್ದೆ ಎಂದೂ ಹೇಳಿದರು.
ನನ್ನ ಸುತ್ತ ಮುತ್ತ ಇರುವ ಹಲವರಿಗೆ ಹಿಂದಿ ಬರುತ್ತಿತ್ತು. ಆದರೆ ನಾನು ಹಿಂದಿ ಕಲಿತರೆ ತಮಗೆ ಮಾರ್ಕೆಟ್ ಕಡಿಮೆಯಾಗಬಹುದೇನೋ ಎನ್ನುವ ಕಾರಣಕ್ಕೆ ನನಗೆ ಹಿಂದಿ ಕಲಿಸಲಿಲ್ಲ ಎಂದು ಶಿವಕುಮಾರ ಹೇಳಿದರು. ಕಾರಿನಲ್ಲಾದರೂ ಮಾತನಾಡಿದ್ದರೆ ಅಲ್ಪಸ್ವಲ್ಪ ಶಿವಾಜಿ ನಗರ ಲೆವಲ್ ಗಾದರೂ ಕಲಿಯುತ್ತಿದ್ದೆನೇನೋ. ಆದರೆ ಅವರ ಮಾರ್ಕೆಟ್ ಕಡಿಮೆಯಾಗುತ್ತದೆ ಎನ್ನುವ ಕಾರಣಕ್ಕೆ ನನಗೆ ಯಾರೂ ಕಲಿಸಲು ಹೋಗಲಿಲ್ಲ ಎಂದರು.
ಬಿಜೆಪಿಯ ಹಲವು ಟಾಪ್ ಲೀಡರ್ಸ್, ಹಲವಾರು ಕೇಂದ್ರ ಸಚಿವರೂ ನನಗೆ ನೀವು ಕಾಂಗ್ರೆಸ್ ನಲ್ಲಿ ಒಳ್ಳೆಯ ಲಾಯಲ್ಟಿ ಇಟ್ಟುಕೊಂಡಿದ್ದೀರಿ. ಅದನ್ನು ಉಳಿಸಿಕೊಂಡು ಹೋಗಿ ಎಂದಿದ್ದಾರೆ ಎಂದೂ ಡಿ.ಕೆ.ಶಿವಕುಮಾರ ಹೇಳಿದರು.
ಬೇರೆ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಷ್ಟ ಎದುರಾದಾಗ ಟ್ರಬಲ್ ಶೂಟರ್ ಆಗಿ ಕೆಲಸ ಮಾಡಿದ ರೀತಿಯನ್ನು ವಿವರಿಸಿದರಾದರೂ ಪ್ರಸ್ತುತ ರಾಜಕೀಯದ ಹಲವು ವಿಚಾರಗಳನ್ನು ಅವರು ಬಹಿರಂಗಪಡಿಸಲು ಸಿದ್ಧರಾಗಲಿಲ್ಲ.
ತಮ್ಮ ಮಕ್ಕಳು ರಾಜಕಾರಣಕ್ಕೆ ಬರುವುದನ್ನು ನಾನು ಬಯಸುವುದಿಲ್ಲ ಎಂದ ಅವರು, ಇಲ್ಲಿಯ ಜೀವನದ ಸಂಕಷ್ಟ ಅವರಿಗೆ ಬೇಡ ಎಂದರು. ರಾತ್ರಿ, ಹಗಲು ಎನ್ನುವುದಿಲ್ಲದೆ ಕೆಲಸ ಮಾಡಬೇಕು, ನಿದ್ದೆ ಇಲ್ಲ, ಮಕ್ಕಳ ಜೊತೆ ಮಾತನಾಡುವುದಾದರೂ ವಾಟ್ಸಪ್ ಕಾಲ್ ಮಾಡಬೇಕು. ಇಂತಹ ಜೀವನ ಅವರಿಗೆ ಬೇಡ ಎನ್ನುವುದು ನನ್ನ ಅಭಿಪ್ರಾಯ ಎಂದು ಶಿವಕುಮಾರ ಹಳಿದರು.
ನಿಮ್ಮ ನೆರಳನ್ನೂ ನಂಬ ಬೇಡಿ ಎಂದು ಮಕ್ಕಳಿಗೆ ಹೇಳಿದ್ದೇನೆ. ನನ್ನ ಜೀವನದ ಅನುಭವದಿಂದ ಇದನ್ನು ಹೇಳಿದ್ದೇನೆ ಎಂದ ಅವರು, ಆದರೆ ನಂಬಿಕೆ ಇಲ್ಲದಿದ್ದರೆ ಜೀವನ ನಡೆಸಲು ಸಾಧ್ಯವಿಲ್ಲ ಎಂದೂ ಹೇಳಿದರು.