

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಚುನಾವಣೆ ಹೊತ್ತಿಲಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಭೇಟಿ ಮಾಡಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಧಾವಿಸುತ್ತಿದ್ದಾರೆ.
ವಿಶೇಷ ವಿಮಾನದಲ್ಲಿ ಇಂದು ರಾತ್ರಿಯೇ ಅವರು ಬೆಳಗಾವಿಗೆ ಆಗಮಿಸುತ್ತಿದ್ದು, ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿ ನಾಳೆ ಹುಬ್ಬಳ್ಳಿಗೆ ತೆರಳುವರು.
ರಾತ್ರಿ 10 ಗಂಟೆಗೆ ವಿಶೇಷ ವಿಮಾನದಲ್ಲಿ ಬೆಂಗಳೂರಿನಿಂದ ಹೊರಟು 11.30ಕ್ಕೆ ಬೆಳಗಾವಿಗೆ ಬಂದು ವಾಸ್ತವ್ಯಹೂಡುವರು. ಬುಧವಾರ ಬೆಳಗ್ಗೆ 8 ಗಂಟೆಗೆ ಲಕ್ಷ್ಮಣ ಸವದಿ ಅವರ ಮನೆಗೆ ತೆರಳಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ನಂತರ 9 ಗಂಟೆಗೆ ಹುಬ್ಬಳ್ಳಿಗೆ ತೆರಳಿ ಜಗದೀಶ ಶೆಟ್ಟರ್ ಅವರನ್ನು ಭೇಟಿ ಮಾಡುವರು. ಅಲ್ಲಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ತೆರಳುವರು.
ಇಬ್ಬರಿಗೂ ಸಚಿವಸ್ಥಾನ ಸಿಗದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ ಅವರ ಭೇಟಿ ಮಹತ್ವ ಪಡೆದುಕೊಂಡಿದೆ. ಜಗದೀಶ ಶೆಟ್ಟರ್ ಸೋತಿದ್ದರೂ ಸಚಿವಸ್ಥಾನದ ನಿರೀಕ್ಷೆಯಲ್ಲಿದ್ದರು. ಲಕ್ಷ್ಮಣ ಸವದಿ ಸಹ ಈ ಬಾರಿ ಸಚಿವಸ್ಥಾನ ಖಚಿತ ಎಂದೇ ಭಾವಿಸಿದ್ದರು. ಆದರೆ ಇಬ್ಬರಿಗೂ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ. ಹಾಗಾಗಿ ಇಬ್ಬರನ್ನೂ ಭೇಟಿಯಾಗಿ ಸಮಾಧಾನ ಹೇಳಲಿದ್ದಾರೆ.
 
					 
				 
					 
					 
					 
					
 
					 
					 
					


