*ಜೂನ್ 2026ರ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “2026ರ ಜೂನ್ ತಿಂಗಳ ವೇಳೆಗೆ ತುಂಗಭದ್ರಾ ಅಣೆಕಟ್ಟಿನ ಎಲ್ಲಾ 33 ಗೇಟ್ ಗಳನ್ನು ಬದಲಾವಣೆ ಕಾರ್ಯ ಪೂರ್ಣಗೊಳ್ಳಲಿದ್ದು, ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.
ಕಾಂಗ್ರೆಸ್ ಸದಸ್ಯ ಬಸನಗೌಡ ಬಾದರ್ಲಿ ಅವರು ತುಂಗಭದ್ರಾ ಅಣೆಕಟ್ಟು ಗೇಟ್ ಗಳ ಬದಲಾವಣೆಗಳ ಬಗ್ಗೆ ಕೇಳಿದಾಗ, “ಕಳೆದ ವರ್ಷ 19ನೇ ಗೇಟ್ ತುಂಡರಿಸಿದಾಗ ಎಲ್ಲರೂ ಆತಂಕಕ್ಕೆ ಒಳಗಾಗಿದ್ದರು. ನಾನೂ ಗಾಬರಿಯಾಗಿದ್ದೆ. ಆಗ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಜನಾರ್ದನ ರೆಡ್ಡಿ ಸೇರಿದಂತೆ ಅನೇಕರು ನಮ್ಮನ್ನು ಟೀಕೆ ಮಾಡಿದರು. ಆಗ ನಾನು ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನಾವು ಕೇವಲ 7 ದಿನಗಳಲ್ಲಿ ಗೇಟ್ ಬದಲಾವಣೆ ಮಾಡಿದೆವು. ನಂತರ ನಾವು ಕೇಂದ್ರ ಜಲ ಆಯೋಗದ ಮಾಜಿ ಮುಖ್ಯಸ್ಥರಾದ ಎಂ.ಕೆ. ಬಜಾಜ್ ಅವರ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಿ, ಇಡೀ ರಾಜ್ಯದ ಎಲ್ಲಾ ಅಣೆಕಟ್ಟುಗಳ ಗೇಟ್ ಗಳ ಪರಿಶೀಲನೆಗೆ ಸೂಚಿಸಿದೆವು. ಈ ಸಮಿತಿ ಶಿಫಾರಸ್ಸಿನ ಆಧಾರದ ಮೇಲೆ ಟಿಬಿ ಅಣೆಕಟ್ಟಿನ ಎಲ್ಲಾ 33 ಗೇಟ್ ಗಳ ಬದಲಾವಣೆಗೆ ಮುಂದಾಗಿದ್ದು, 52 ಕೋಟಿ ರೂ. ಮೊತ್ತದ ಟೆಂಡರ್ ಕರೆಯಲಾಗಿದೆ” ಎಂದು ಭರವಸೆ ನೀಡಿದರು.
“ಈ ವಿಚಾರದಲ್ಲಿ ಯಾರೂ ಆತಂಕಕ್ಕೆ ಒಳಗಾಗುವುದು ಬೇಡ, ಉತ್ತಮ ಗುಣಮಟ್ಟದ ಕಾಮಗಾರಿ ನಡೆಯಲಿದೆ. ನಮ್ಮ ರಾಜ್ಯದಿಂದ 10 ಕೋಟಿ ಹಾಗೂ ಆಂಧ್ರ ಪ್ರದೇಶದಿಂದ 20 ಕೋಟಿ ಅನುದಾನ ನೀಡಲಾಗಿದೆ. ಇದಕ್ಕೆ ಅಗತ್ಯವಿರುವ ಹಣವನ್ನು ಒದಗಿಸಲಾಗುವುದು. ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಅಣೆಕಟ್ಟುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಆದ್ಯತೆ ಮೇರೆಗೆ ವರಾಹಿ ಯೋಜನೆ ಬಾಕಿ ಕಾಮಗಾರಿ ಪೂರ್ಣ:
ವಿಧಾನ ಪರಿಷತ್ತಿನ ಗಮನ ಸೆಳೆವ ಸೂಚನೆ ವೇಳೆ ಕಾಂಗ್ರೆಸ್ ಸದಸ್ಯರಾದ ಮಂಜುನಾಥ್ ಭಂಡಾರಿ ಅವರು ವರಾಹಿ ಯೋಜನೆ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಜಲಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ಉತ್ತರ ನೀಡಿದರು.
“ಈ ಯೋಜನೆಗೆ ಸಂಬಂಧಿಸಿದಂತೆ ಅರಣ್ಯ ಭೂಮಿ ಬಿಡುಗಡೆ ಬಾಕಿ ಇದೆ. ವರಾಹಿ ಯೋಜನೆಯ ಎಲ್ಲಾ ಬಾಕಿ ಕಾಮಗಾರಿಗಳನ್ನು ಅವಶ್ಯಕತೆ ಇರುವ ಅರಣ್ಯ ಭೂಮಿ ಪಡೆದು ಆದ್ಯತೆ ಮೇರೆಗೆ ಪೂರ್ಣಗೊಳಿಸಲಾಗುವುದು. ಎಲ್ಲಾ ಸರ್ಕಾರಗಳು ಇದನ್ನು ಮಾಡಬೇಕಿತ್ತು. ಅರಣ್ಯ ಇಲಾಖೆ ಅಡಚಣೆಯಿಂದ ಸಾಧ್ಯವಾಗಿಲ್ಲ. 3519 ಕೋಟಿ ರೂ. ಅಂದಾಜು ಯೋಜನೆ ವರದಿ ಸಿದ್ಧಪಡಿಸಿದ್ದು, ಇದರ ಪರಿಶೀಲನೆ ಮಾಡಲಾಗುತ್ತಿದೆ. ಈ ಯೋಜನೆ ಸ್ಥಳಕ್ಕೆ ನಾನೇ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಇಲ್ಲಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜೊತೆ ಸಭೆ ಮಾಡುತ್ತೇನೆ” ಎಂದು ಭರವಸೆ ನೀಡಿದರು.



