Kannada NewsKarnataka NewsLatestPolitics

*ದೇಶದಲ್ಲೇ ಇತಿಹಾಸ ಸೃಷ್ಟಿಸುವ ಹೆಜ್ಜೆ ಇಟ್ಟ ಬಿಎಂಟಿಸಿ; ಶೀಘ್ರದಲ್ಲೇ ಅತಿ ಹೆಚ್ಚು ವಿದ್ಯುತ್ ಚಾಲಿತ ಬಸ್ ಗಳ ಸಂಚಾರ*

ಡಿಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ


ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಾರಿಗೆ ಮಂತ್ರಿಗಳ ನೇತೃತ್ವದಲ್ಲಿ ಬಿಎಂಟಿಸಿ ದೇಶದಲ್ಲೇ ಇತಿಹಾಸ ಸೃಷ್ಟಿಸುವ ಹೆಜ್ಜೆ ಇಟ್ಟಿದೆ. ಮುಂದಿನ ವರ್ಷಾಂತ್ಯದ ವೇಳೆಗೆ ಅತಿ ಹೆಚ್ಚು ವಿದ್ಯುತ್ ಚಾಲಿತ ಬಸ್ ಗಳ ಸಂಚಾರ ಹೊಂದಿರುವ ಸಾರಿಗೆ ಸಂಸ್ಥೆ ಎಂಬ ಮೈಲಿಗಲ್ಲು ಸಾಧಿಸಲಿದೆ. ಅದಕ್ಕಾಗಿ ಸಾರಿಗೆ ಸಚಿವರು ಹಾಗೂ ಸಿಬ್ಬಂದಿಗೆ ಸರ್ಕಾರ ಹಾಗೂ ಜನರ ಪರವಾಗಿ ಅಭಿನಂದನೆಗಳು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

100 ಬಿಎಂಟಿಸಿ ಎಲೆ ಕ್ಟ್ರಿಕ್ ಬಸ್ ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ, ಎಲೆಕ್ಟ್ರಿಕಲ್ ಬಸ್ ಗಳ ಬಳಕೆಯಿಂದ ಡೀಸೆಲ್ ವಾಹನಗಳ ಬಳಕೆ ತಗ್ಗಲಿದೆ. ಇದರಿಂದ ಎಮಿಷನ್ ಸಮಸ್ಯೆ ಕೂಡ ತಗ್ಗಲಿದೆ. ಆಮೂಲಕ ಪರಿಸರ ಸ್ನೇಹಿ ಸಂಚಾರ ವ್ಯವಸ್ಥೆಯತ್ತ ಸಾಗುತ್ತಿದ್ದೇವೆ ಎಂದರು.

ನಮ್ಮ ಸರ್ಕಾರ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅವಕಾಶ ಕಲ್ಪಿಸಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕವಾಗಿ 3 ಸಾವಿರ ಕೋಟಿ ಹೊರೆ ಬೀಳಬಹುದಾದರೂ, ಈ ಯೋಜನೆ ಪರಿಣಾಮವಾಗಿ ದೇವಾಲಯಗಳಲ್ಲಿ ಆದಾಯ ಹೆಚ್ಚಾಗಿದೆ. ಅದರ ಜತೆ ಪ್ರವಾಸೋದ್ಯಮ, ವ್ಯಾಪಾರ ವಹಿವಾಟು ಹೆಚ್ಚಾಗಿದೆ.

ಹಣ ಮತ್ತು ರಕ್ತ ಒಂದೇ ಕಡೆ ನಿಲ್ಲಬಾರದು. ಅದು ನಿರಂತರವಾಗಿ ಹರಿಯುತ್ತಿರಬೇಕು ಎಂದು ಸಾಯಿಬಾಬಾ ಅವರು ಒಂದು ಕಡೆ ಹೇಳಿದ್ದರು. ಹಣ ಒಂದೇ ಕಡೆ ಇದ್ದರೆ ಕಳ್ಳರು, ಆದಾಯ ತೆರಿಗೆ ಇಲಾಖೆ ಸಮಸ್ಯೆ ಬರುತ್ತವೆ. ಅದೇ ರೀತಿ ರಕ್ತ ಒಂದೇ ಕಡೆ ಸೇರಿಕೊಂಡರೆ ಆರೋಗ್ಯ ಸಮಸ್ಯೆ ಬರುತ್ತದೆ. ಹೀಗಾಗಿ ಇವೆರಡೂ ಹರಿದಾಡಬೇಕು. ನಮ್ಮ ಶಕ್ತಿ ಯೋಜನೆಯಿಂದ ಹಣ ಹರಿದಾಡುವಂತಾಗಿದೆ ಎಂದು ಹೇಳಿದರು.

ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರು ತಮ್ಮ ಕುಟುಂಬ ಸಮೇತರಾಗಿ ಸುತ್ತಾಡಿ ಈ ಯೋಜನೆಯಿಂದ ಉಳಿದ ದುಡ್ಡನ್ನು ತಮ್ಮ ಅಗತ್ಯಗಳಿಗೆ ಖರ್ಚು ಮಾಡುತ್ತಿದ್ದಾರೆ. ನಮ್ಮ ಸಮೀಕ್ಷೆಯಲ್ಲಿ ಈ ಯೋಜನೆಯಿಂದ 92% ರಷ್ಟು ಮಹಿಳೆಯರು ಸಂತೋಷಗೊಂಡಿದ್ದಾರೆ. ತಮಿಳುನಾಡಿನಲ್ಲಿ ಚೆನ್ನೈ ನಗರದಲ್ಲಿ ಮಾತ್ರ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿದ್ದರು. ನಮ್ಮ ರಾಜ್ಯದಲ್ಲಿ ಶಕ್ತಿ ಯೋಜನೆಯನ್ನು ಇಡೀ ರಾಜ್ಯದಲ್ಲಿ ಮಾಡಿದ್ದೇವೆ. ಇದು ಐತಿಹಾಸಿಕ ಯೋಜನೆಯಾಗಿದ್ದು, ಬೇರೆ ರಾಜ್ಯಗಳು ನಮ್ಮನ್ನು ಅನುಕರಣೆ ಮಾಡುತ್ತಿವೆ.

ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುತ್ತಿದ್ದ ಪ್ರಧಾನಮಂತ್ರಿಗಳು ಈಗ ತಮ್ಮ ಸರ್ಕಾರದ ಜಾಹೀರಾತಿನಲ್ಲಿ ಮೋದಿ ಗ್ಯಾರಂಟಿ ಎಂದು ಪ್ರಚಾರ ಪಡೆಯುತ್ತಿದ್ದಾರೆ. ಇಂದು ನಮ್ಮ ಸರ್ಕಾರದ ಐದನೇ ಗ್ಯಾರಂಟಿ ಯೋಜನೆಯ ನೋಂದಣಿ ಆರಂಭಿಸುತ್ತಿದ್ದೇವೆ. ನಿರುದ್ಯೋಗಿ ಯುವಕರಿಗೆ ಪ್ರೋತ್ಸಾಹ ಧನ ನೀಡಲು ಸರ್ಕಾರ ಮುಂದಾಗಿದೆ. ಆ ಮೂಲಕ ನಾವು ನುಡಿದಂತೆ ನಡೆಯುತ್ತಿದ್ದೇವೆ ಎಂದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button