Latest

*ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಂಜನಾದ್ರಿ ಅಭಿವೃದ್ಧಿ ಮಂಡಳಿ ಸ್ಥಾಪನೆ; ಹನುಮ ಜನ್ಮಸ್ಥಳ ಅಭಿವೃದ್ಧಿ ಮಾಡುತ್ತೇವೆ: ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಮೈಸೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಅಂಜನಾದ್ರಿ ಅಭಿವೃದ್ಧಿ ಮಂಡಳಿ ಸ್ಥಾಪಿಸಿ, ಹನುಮ ಜನ್ಮಸ್ಥಳ ಅಭಿವೃದ್ಧಿ ಮಾಡುತ್ತೇವೆ. ನಾವು ಕೂಡ ಹನುಮ ಭಕ್ತರು. ದೇವರ ಹೆಸರಿನಲ್ಲಿ ಸಂಘಟನೆ ಮಾಡಿಕೊಂಡು ಕಾನೂನು ಕೈಗೆತ್ತಿಕೊಂಡು ಸಮಾಜದಲ್ಲಿ ಅಶಾಂತಿ ಮೂಡಿಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದಷ್ಟೇ ನಾವು ಹೇಳಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ದೇವರ ದರ್ಶನ ಪಡೆದ ಸಂದರ್ಭದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್ ಅವರು, ‘ಬಿಜೆಪಿ ಅವರು ಈ ವಿಚಾರವನ್ನು ಭಾವನಾತ್ಮಕವಾಗಿ ಸೆಳೆಯಲು ಮುಂದಾಗಿದೆ’ ಎಂದು ತಿಳಿಸಿದರು.

ನಮ್ಮ ನಾಡ ದೇವತೆ ಚಾಂಮುಂಡೇಶ್ವರಿ. ರಾಜ್ಯಕ್ಕೆ ಬಂದಿರುವ ದುಖಃವನ್ನು ದೂರ ಮಾಡುವ ದೇವಿ ದುರ್ಗಾದೇವಿ. ಚುನಾವಣೆ ಪ್ರಚಾರದ ವೇಳೆ ಮತಯಾಚನೆ ವೇಳೆ ತಾಯಿ ದರ್ಶನ ಪಡೆದು ನಮ್ಮ ಸಂಕಷ್ಟಗಳು ಬಗೆಹರಿದು ಯಶಸ್ಸು ಸಿಗಲಿ ಎಂದು ಪ್ರಾರ್ಥನೆ ಮಾಡಿದ್ದೇವೆ. ಆರಂಭದಲ್ಲಿ ಗಣೇಶ, ತಾಯಿ ಚಾಮುಂಡೇಶ್ವರಿ ಹಾಗೂ ಆಂಜನೇಯನ ಬಳಿ ಪ್ರಾರ್ಥನೆ ಮಾಡಿ ಪ್ರಚಾರಕ್ಕೆ ಹೊರಟಿದ್ದೇನೆ. ಯಶಸ್ಸು ಖಂಡಿತವಾಗಿಯೂ ಸಿಗಲಿದೆ ಎಂದು ನಂಬಿದ್ದೇನೆ ಎಂದರು.

ಬಜರಂಗದಳ ವಿಚಾರ ನಿಮ್ಮ ವೇಗಕ್ಕೆ ಬ್ರೇಕ್ ಹಾಕಿದೆಯೇ ಎಂಬ ಪ್ರಶ್ನೆಗೆ, ‘ನಮ್ಮ ಪ್ರಣಾಳಿಕೆ ಕಂಡು ಬಿಜೆಪಿಯವರು ಗಾಬರಿಯಾಗಿದ್ದಾರೆ. ಆಂಜನೇಯನಿಗೂ ಬಜರಂಗದಳಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಬಜರಂಗದಳ ಒಂದು ಸಂಘಟನೆ. ಹುಟ್ಟಿದ ಕುರುಗಳೆಲ್ಲಾ ಬಸವ ಆಗುವುದಿಲ್ಲ, ಅದೇ ರೀತಿ ಆಂಜನೇಯನ ಹೆಸರಿಟ್ಟುಕೊಂಡ ಮಾತ್ರಕ್ಕೆ ಎಲ್ಲರೂ ಹನುಮಂತನಾಗುತ್ತಾರೆ. ಅವರು ಹನುಮಂತನ ಹೆಸರಿಟ್ಟುಕೊಂಡು ಸಂಘಟನೆ ಮಾಡಿ ನೈತಿಕ ಪೊಲೀಸ್ ಗಿರಿ ಮಾಡಿಕೊಂಡು ಬಂದಿದ್ದಾರೆ. ಯಾರು ಸಮಾಜದಲ್ಲಿ ಕಾನೂನ ಕೈಗೆತ್ತಿಕೊಂಡು ಅಶಾಂತಿ ಮೂಡಿಸುತ್ತಾರೋ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದೇವೆ. ನಾವು ಕೂಡ ಹನುಮಂತನ ಭಕ್ತರು. ರಾಮನ ತಂದೆ ದಶರಥನ ದೇವಾಲಯ ಇಲ್ಲ. ಆದರೆ ರಾಮನ ಭಂಟ ಹನುಮಂತನ ದೇವಾಲಯ ಎಲ್ಲೆಡೆ ಇದೆ. ಈ ನಾಡಿನಲ್ಲಿ ಹನುಮಂತ ಹುಟ್ಟಿದ್ದಾನೆ. ಅದಕ್ಕೆ ಶಕ್ತಿ ತುಂಬಲು ನಾವು ಬದ್ಧವಾಗಿದ್ದು, ಇದಕ್ಕಾಗಿ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಎಲ್ಲಾ ಪ್ರಮುಖ ಆಂಜನೇಯ ದೇವಾಲಯ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸುತ್ತದೆ. ಆಂಜನೇಯನ ಹೆಸರಲ್ಲಿ ಪ್ರತಿ ತಾಲೂಕಿನಲ್ಲಿ ಯುವಕರಿಗೆ ಕಾರ್ಯಕ್ರಮ ರೂಪಿಸುತ್ತೇವೆ. ಅಂಜನಾದ್ರಿ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡುತ್ತೇವೆ. ಪ್ರಧಾನಮಂತ್ರಿಗಳು ಸೇರಿದಂತೆ ಬಿಜೆಪಿ ನಾಯಕರು ದೇವರ ಹೆಸರನ್ನು ರಾಜಕೀಯವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರು ಭಾವನಾತ್ಮಕವಾಗಿ ವಿಚಾರ ತೆಗೆದುಕೊಂಡು ಹೋಗುತ್ತಿದ್ದಾರೆ. ನಾವು ದೇವರನ್ನು ಭಕ್ತಿ, ಭಾವನೆಗೆ ಸೀಮಿತಗೊಳಿಸಿದ್ದೇವೆ. ಕೆಂಗಲ್ ಹನುಮಂತಯ್ಯ ಅವರು ಕಟ್ಟಿದ ಆಂಜನೇಯನ ದೇವಾಲಯ ಸೇರಿದಂತೆ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸುತ್ತಾ ಸುಮಾರು 25 ಆಂಜನೇಯ ದೇವಾಲಯಗಳಿವೆ. ಬಿಜೆಪಿಯವರು ಯಾವುದಾದರೂ ಒಂದು ಆಂಜನೇಯನ ದೇವಾಲಯ ಕಟ್ಟಿದ್ದಾರಾ? ಬಿಜೆಪಿಯವರು ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದು, ಯಾವುದೂ ಫಲ ನೀಡುವುದಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಸರ್ಕಾರ ಹನುಮ ಜನಿಸಿದ ಅಂಜನಾದ್ರಿ ಅಭಿವೃದ್ಧಿ ಮಾಡಲಿದೆ. ಬಿಜೆಪಿಯವರು ರಾಮದೇವರ ಬೆಟ್ಟದಲ್ಲಿ ರಾಮ ಮಂದಿರ ಕಟ್ಟುವುದಾಗಿ ಈಗ ಹೇಳುತ್ತಿದ್ದಾರೆ. ಇಷ್ಟು ದಿನ ಏನು ಮಾಡುತ್ತಿದ್ದರು?’ ಎಂದು ಪ್ರಶ್ನಿಸಿದರು.

Home add -Advt
https://pragati.taskdun.com/basanagowda-patil-yatnald-k-shivakumarbajarangadala-ban-issuekoppala/


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button