*ಸ್ಥಗಿತವಾಗಿರುವ ಬೆಂಗಳೂರು ಅಭಿವೃದ್ಧಿ ಕಾಮಗಾರಿಗಳ ಪುನರಾರಂಭಕ್ಕೆ ಡಿಸಿಎಂ ಸೂಚನೆ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಲಾಖೆಗಳಿಂದ ಅನುಮತಿ ಪಡೆದು ಸ್ಥಗಿತವಾಗಿರುವ ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳನ್ನು ಪುನರಾರಂಭಿಸಲು ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಸಂತನಗರದ ಅಯ್ಯಪ್ಪ ಸ್ವಾಮಿ ದೇವಾಸ್ಥಾನದ ಪಕ್ಕ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಉಪಮುಖ್ಯಮಂತ್ರಿಗಳು ನಂತರ ಜಯಮಹಲ್ ಪ್ಯಾಲೇಸ್ ರಸ್ತೆಯ ಅಗಲೀಕರಣ ಹಾಗೂ ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆ ಕಾಮಗಾರಿಯನ್ನು ಪರಿಶೀಲಿಸಿದರು.
ಆದಷ್ಟು ಬೇಗ ಈ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕರಾದ ರಿಜ್ವಾನ್ ಅರ್ಷದ್, ಬಿಡಿಎ ಮುಖ್ಯಸ್ಥರಾದ ರಾಕೇಶ್ ಸಿಂಗ್, ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಇದ್ದರು.
ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಟೆಂಡರ್ ಶ್ಯೂರ್ ಕಾಮಗಾರಿ ನಡೆದಿವೆ. ಟೆಂಡರ್ ಶ್ಯೂರ್ ರಸ್ತೆಯಲ್ಲಿ ಮುಂದೆ ಯಾರೂ ಕೂಡ ರಸ್ತೆಯನ್ನು ಅಗೆಯಬಾರದು, ಕೇಬಲ್ ಲೈನ್ ಎಳೆದುಕೊಂಡು ಹೋಗಲು ಅವಕಾಶ ಮಾಡಿಕೊಡಲಾಗಿದೆ. ಅವುಗಳನ್ನು ಯಾರೂ ಉಪಯೋಗಿಸುತ್ತಿಲ್ಲ. ನಾವು ಎಲ್ಲೆಲ್ಲಿ ಈ ವ್ಯವಸ್ಥೆ ಕಲ್ಪಿಸಿದ್ದೇವೆ, ಅಲ್ಲೆಲ್ಲಾ ಇದರ ಕಾನೂನುಬದ್ಧವಾಗಿ ಉಪಯೋಗ ಮಾಡಿಕೊಳ್ಳಬೇಕು. ಬೆಂಗಳೂರಿನ ಅಂದ ಹೆಚ್ಚಿಸಲು ಕೇಬಲ್ ಗಳನ್ನು ಅಂಡರ್ ಗ್ರೌಂಡ್ನಲ್ಲಿ ತೆಗೆದುಕೊಂಡು ಹೋಗಬೇಕು.
ಬೆಂಗಳೂರಿನಲ್ಲಿ ಬೀಳುವ ಮಳೆ ನೀರು ರಸ್ತೆಯ ಮೇಲೆ ನಿಲ್ಲಬಾರದು, ಒಳಚರಂಡಿ ಮೂಲಕ ಹರಿದುಹೋಗಬೇಕು ಅದಕ್ಕಾಗಿ ನಾವು ಈಗಾಗಲೇ ಅನುಮತಿ ನೀಡಲಾಗಿರುವ ಕಾಮಗಾರಗಳನ್ನು ಪುನರಾರಂಭಿಸಲು ಸೂಚಿಸಿದ್ದೇನೆ. ಇನ್ನು ಬೆಂಗಳೂರಿನ ರಸ್ತೆಗುಂಡಿಗಳ ಬಗ್ಗೆ ಸಾರ್ವಜನಿಕರು ಅಧಿಕಾರಿಗಳಿಗೆ ಮಾಹಿತಿ ನೀಡಬಹುದು. ಕೂಡಲೇ ಅವುಗಳನ್ನು ಸರಿಪಡಿಸಲಾಗುವುದು. ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಗುರುತಿಸಲು ಚರ್ಚೆ ಮಾಡಿದ್ದೇವೆ. ಪೊಲೀಸ್ ಇಲಾಖೆ ಹಾಗೂ ಪಾಲಿಕೆ ಸೇರಿ ರಸ್ತೆಗುಂಡಿಗಳನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ಆದ್ಯತೆ ಮೇರೆಗೆ ಈ ಕೆಲಸ ಮಾಡಬೇಕಾಗಿದೆ. ಈ ಮಧ್ಯೆ ಇದೇ ತಿಂಗಳು 7ರಂದು ಹೊರವರ್ತುಲ ರಸ್ತೆಗೆ ಭೇಟಿ ನೀಡಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಚರ್ಚೆ ಮಾಡಲಾಗುವುದು.
ಬಿಬಿಎಂಪಿ ಬಿಲ್ ಬಾಕಿ ವಿಚಾರವಾಗಿ, ಅಮೃತನಗರ ಯೋಜನೆಯಲ್ಲಿ ಐದು ಸಾವಿರ ಕೋಟಿ ವೆಚ್ಚದ 352 ಪ್ಯಾಕೇಜ್ ಕಾಮಗಾರಿಗಳ ಪೂರ್ಣಗೊಳಿಸಲು ತಿಳಿಸಲಾಗಿದೆ. ಇನ್ನು ಕಾಮಗಾರಿಗಳ ತನಿಖೆ ಕೂಡ ಮುಂದುವರಿದು ವರದಿ ಸಲ್ಲಿಕೆಯಾಗಲಿದೆ. 675 ಕೋಟಿ ಮೊತ್ತದ ಬಿಲ್ ಪಾವತಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಸುಮಾರು 50-75% ನಷ್ಟು ಬಿಲ್ ಪಾವತಿ ಮಾಡಲಾಗಿದೆ. 432 ಕೋಟಿ ಬಿಬಿಎಂಪಿ ಅನುದಾನ ಕೂಡ ಬಿಡುಗಡೆ ಮಾಡಲಾಗುವುದು. ಉಳಿದ ಬಾಕಿ ಮೊತ್ತವನ್ನು ಪಾವತಿ ಮಾಡಲಾಗುವುದು. ಜನರಿಗೆ ತೊಂದರೆ ಆಗದಂತೆ ಕೆಲಸ ಆರಂಭಿಸಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ ಇಂಜಿನಿಯರ್ ಗಳಿಗೆ ವಹಿಸಲಾಗಿದೆ” ಎಂದು ತಿಳಿಸಿದರು.
ಎಸ್ಐಟಿ ತನಿಖೆ ಎಲ್ಲಿಯವರೆಗೂ ಬಂದಿದೆ ಎಂಬ ವಿಚಾರವಾಗಿ ಕೇಳಿದ ಪ್ರಶ್ನೆಗೆ, “ತನಿಖೆ ನಡೆಯುತ್ತಿದೆ. ಪೂರ್ಣಗೊಂಡ ನಂತರ ಅದರ ವರದಿ ಸಲ್ಲಿಕೆಯಾಗಲಿದೆ. ಅದಕ್ಕಾಗಿ ನಾವು ಸ್ವಲ್ಪ ಪ್ರಮಾಣದ ಬಿಲ್ ಗಳನ್ನು ಪಾವತಿ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ