Karnataka NewsLatestPolitics

*550 ಕಿ.ಮೀ ಮುಖ್ಯರಸ್ತೆ ಅಭಿವೃದ್ಧಿಗೆ ₹1100 ಕೋಟಿ ಮೊತ್ತದ ಕಾರ್ಯಯೋಜನೆ ಸಿದ್ಧತೆಗೆ ಸೂಚನೆ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಇದುವರೆಗೂ 13,000 ಗುಂಡಿಗಳನ್ನು ಮುಚ್ಚಲಾಗಿದೆ. ಪ್ರತಿ ಗುಂಡಿ ಮುಚ್ಚಿರುವುದಕ್ಕೆ ಫೋಟೋ, ವಿಡಿಯೋ ದಾಖಲೆ ಮಾಡಿಸಲಾಗಿದೆ. ನೀವುಗಳು (ಮಾಧ್ಯಮಗಳು) ಕೂಡ ಪರಿಶೀಲನೆ ಮಾಡಬಹುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಂಗಳೂರು ನಾಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಶಿವಕುಮಾರ್ ಅವರು ಮಂಗಳವಾರ ಸಿಟಿ ರೌಂಡ್ ನಡೆಸಿ ರಸ್ತೆಗುಂಡಿ ಮುಚ್ಚುವ ಕಾಮಗಾರಿ ಪರಿಶೀಲಿಸಿದರು.

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಅಧಿಕಾರಿಗಳು ಸರ್ಕಾರದ ಆದೇಶ ಪಾಲನೆ ಮಾಡಿ ಗುಂಡಿ ಮುಚ್ಚುವ ಕಾರ್ಯ ಮಾಡುತ್ತಿದ್ದಾರೆ. ಇದರ ಜೊತೆಗೆ 550 ಕಿ.ಮೀ ಉದ್ದದ ಮುಖ್ಯರಸ್ತೆಗಳ ಅಭಿವೃದ್ಧಿಗೆ ₹1100 ಕೋಟಿ ವೆಚ್ಚದ ಕಾರ್ಯಯೋಜನೆ ಸಿದ್ಧಪಡಿಸಲು ಸೂಚನೆ ನೀಡಿದ್ದೇನೆ” ಎಂದು ಮಾಹಿತಿ ನೀಡಿದರು.

“ಇನ್ನು ಮುಖ್ಯರಸ್ತೆಗಳ ಜಂಕ್ಷನ್ ನಲ್ಲಿ ಕಾಂಕ್ರೀಟ್ ಹಾಕಲು 26 ದಿನಗಳ ಅಗತ್ಯವಿದ್ದು, ಟ್ರಾಫಿಕ್ ನಿಯಂತ್ರಣದ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ನಾನು ಬೆಂಗಳೂರು ರಸ್ತೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಪ್ರಯತ್ನಿಸುತ್ತಿದ್ದೇನೆ. ಇನ್ನು ರಸ್ತೆಗುಂಡಿ ಮುಚ್ಚುವುದಕ್ಕಾಗಿ ₹750 ಕೋಟಿ ನೀಡುವುದಾಗಿ ಸಿಎಂ ಹೇಳಿದ್ದಾರೆ” ಎಂದರು.

Home add -Advt

“ಇನ್ನು ವಾರ್ಡ್ ಮಟ್ಟದ ರಸ್ತೆಗಳ ಅಭಿವೃದ್ಧಿಗೆ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಲು ₹1100 ಕೋಟಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಈ ಅನುದಾನವನ್ನು ರಸ್ತೆಗಳ ಸುಧಾರಣೆಗೆ ಬಳಸಲು ಸೂಚನೆ ನೀಡಲಾಗಿದೆ” ಎಂದು ತಿಳಿಸಿದರು.

“ದೇಶದಲ್ಲಿ ಯಾವುದೇ ನಗರದ ಮಂತ್ರಿ ರಸ್ತೆಯಲ್ಲಿ ಗುಂಡಿ ಕಂಡರೆ ಮಾಹಿತಿ ನೀಡಿ ಎಂದು ಸಾರ್ವಜನಿಕರಿಗೆ ಕರೆ ನೀಡಿರಲಿಲ್ಲ. ಆದರೆ ನಾನು ಇದಕ್ಕಾಗಿ ಪ್ರತ್ಯೇಕ ಆಪ್ ಸಿದ್ಧಪಡಿಸಿ, ಪೋಲೀಸರ ಸಹಕಾರದಲ್ಲಿ ರಸ್ತೆಗುಂಡಿ ಮುಚ್ಚಲಾಗುತ್ತಿದೆ. ಇಂತಹ ಪ್ರಯತ್ನ ನಡೆದಿರುವುದು ಕರ್ನಾಟಕದಲ್ಲಿ ಮಾತ್ರ. ಬೆಂಗಳೂರು ಜಾಗತಿಕ ನಗರ ಹೀಗಾಗಿ ಎಲ್ಲರೂ ಬೆಂಗಳೂರು ರಸ್ತೆಗುಂಡಿಗಳ ಬಗ್ಗೆ ಮಾತ್ರ ಪ್ರಚಾರ ಮಾಡುತ್ತಿದ್ದಾರೆ” ಎಂದು ಹೇಳಿದರು.

ಬಿಜೆಪಿ ನಾಯಕರು ನನ್ನೊಟ್ಟಿಗೆ ದೆಹಲಿಗೆ ಬರಲಿ

ಪ್ರಧಾನಮಂತ್ರಿಗಳ ಮನೆ ರಸ್ತೆಯಲ್ಲಿ ಗುಂಡಿ ಇಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಬೇಕಿದ್ದರೆ ನನ್ನ ಜೊತೆ ಅವರು ಬರಲಿ ತೋರಿಸುತ್ತೇನೆ. ದೆಹಲಿಯಲ್ಲಿರುವ ರಸ್ತೆಗುಂಡಿ ತೋರಿಸುತ್ತೇನೆ. ಕರ್ನಾಟಕ ಭಾವನದಿಂದ ಹೋಗುವಾಗ ನೋಡಿದ್ದೇನೆ. ಎಲ್ಲಾ ಕಡೆ ಇದೇ ಪರಿಸ್ಥಿತಿ ಇದೆ. ಅವರ ತಪ್ಪು ಎಂದು ಹೇಳುವುದಿಲ್ಲ. ಅವರು ಯಾವಾಗ ಬರುತ್ತಾರೆ ಹೇಳಿ, ರಾಜ್ಯದಿಂದ ಒಂದು ನಿಯೋಗ ಹೋಗೋಣ. ಹಾಗೆ ಯಾರಾದರೂ ಕೇಂದ್ರ ಸರ್ಕಾರದಿಂದ ಹಣ ಕೊಡಿಸಿದರೆ ತರೋಣ” ಎಂದರು.

ಕಸ ಹಾಕಿರುವವನನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಿ:

ಕಸದ ಪರಿಸ್ಥಿತಿಯೂ ಹಾಗೇ ಇದೆ ಎಂದು ಕೇಳಿದಾಗ, “ನಿಜ ಕಸದ ಸಮಸ್ಯೆಯೂ ಇದೆ. ಇಂದು ಕಾಂಗ್ರೆಸ್ ಕಚೇರಿಗೆ ಹೋಗುವಾಗ ಜಯಮಹಲ್ ರಸ್ತೆಯಲ್ಲಿ ಯಾರೋ ಒಂದು ಲೋಡ್ ಕಸ ಸುರಿದಿದ್ದಾರೆ. ನಿನ್ನೆ ರಾತ್ರಿ ಇರಲಿಲ್ಲ. ರಾತ್ರೊರಾತ್ರಿ ಬಂದು ಸುರಿದಿದ್ದಾರೆ” ಎಂದರು.

“ಈ ಕಸ ಸುರಿದವರು ಯಾರು ಎಂದು ಸಿಸಿಟಿವಿಯಲ್ಲಿ ಪತ್ತೆ ಮಾಡಿ ಅವನ ವಿರುದ್ಧ ಪ್ರಕರಣ ದಾಖಲಿಸಬೇಕು ಹಾಗೂ ಅವನ ಗಾಡಿ ಸೀಜ್ ಮಾಡಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜನರು ಕೂಡ ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದಾರೆ ಎಂದು ಕೇಳಿದಾಗ, “ಸಾರ್ವಜನಿಕರು ನಮಗೆ ಸಹಕಾರ ನೀಡುತ್ತಿಲ್ಲ” ಎಂದು ಬೇಸರಿಸಿದರು.

ವಾರ್ಡ್ ಗಳ ಬೌಂಡರಿ ನಿಗದಿ ಮಾಡಿ ಪ್ರಕಟಿಸಲಾಗಿದೆ ಎಂದು ಕೇಳಿದಾಗ, “ಈ ಬಗ್ಗೆ ಮಾಹಿತಿ ಇಲ್ಲ. ಇದಕ್ಕಾಗಿ ಸಮಿತಿ ಇದೆ. ಸಾರ್ವಜನಿಕರ ಆಕ್ಷೇಪಣೆ ಇದ್ದರೆ ಸಲ್ಲಿಸಬಹುದು” ಎಂದರು.

Related Articles

Back to top button