Kannada NewsKarnataka NewsLatestPolitics

*ಬಿಜೆಪಿ ನಾಯಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸವಾಲ್*

ಪ್ರಗತಿವಾಹಿನಿ ಸುದ್ದಿ: “ಬರ ಪರಿಸ್ಥಿತಿಯನ್ನು ಸರ್ಕಾರ ಯಶಸ್ವಿಯಾಗಿ ನಿಭಾಯಿಸುತ್ತಿರುವುದನ್ನು ಸಹಿಸಲಾಗದೇ ಬಿಜೆಪಿ ಸುಳ್ಳು ಪ್ರಚಾರಕ್ಕೆ ಮುಂದಾಗಿದೆ. ನೀರಿನ ವಿಚಾರದಲ್ಲಿ ರಾಜಕೀಯ ಮಾಡೋದು ಬಿಟ್ಟು ಕೇಂದ್ರ ಸರ್ಕಾರದಿಂದ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಸವಾಲು ಹಾಕಿದರು.

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದರು. ತಮಿಳುನಾಡಿಗೆ ಕಾವೇರಿ ನೀರು ಬಿಡಲಾಗಿದೆ ಎಂಬ ಸುಳ್ಳು ಆರೋಪ ಮಾಡಿರುವ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಅವರು ಹೇಳಿದ್ದಿಷ್ಟು:

“ಕಾವೇರಿ ನೀರು ಪೂರೈಕೆ ಪ್ರದೇಶಗಳಲ್ಲಿ ನೀರಿನ ಅಭಾವವಿಲ್ಲ. ಕೊಳವೆ ಬಾವಿಗಳು ಬತ್ತಿರುವ ಕಡೆಗಳಲ್ಲಿ ಮಾತ್ರ ಅಭಾವ ಹೆಚ್ಚಾಗಿದೆ. ಆದರೆ ಈ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ ಎಂಬುದು ಸುಳ್ಳು. ನಮ್ಮಲ್ಲಿ ನೀರೇ ಇಲ್ಲದಿರುವಾಗ ತಮಿಳುನಾಡಿಗೆ ಎಲ್ಲಿಂದ ನೀರು ಬಿಡಲು ಸಾಧ್ಯ? ಮೇಲಾಗಿ ಅವರು ನೀರು ಕೇಳಿಯೇ ಇಲ್ಲ. ಬಿಜೆಪಿಯದು ಕೇವಲ ರಾಜಕೀಯ ಗಿಮಿಕ್. ರಾಜ್ಯ ಬಿಜೆಪಿ ನಾಯಕರು ರಾಜಕೀಯ ಬಿಟ್ಟು ಮೇಕೆದಾಟು ಯೋಜನೆಗೆ ಕೇಂದ್ರ ಬಿಜೆಪಿ ಸರ್ಕಾರದಿಂದ ಅನುಮತಿ ಕೊಡಿಸಲಿ.”

ಅಸೂಯೆಯಿಂದ ಬಿಜೆಪಿ ಅಪಪ್ರಚಾರ:

“ಸರ್ಕಾರದ ಯಶಸ್ಸು ನೋಡಿ ಸಹಿಸಲಾಗದೇ ವಿರೋಧ ಪಕ್ಷಗಳು ಸುಳ್ಳು ಪ್ರಚಾರ ಮಾಡುತ್ತಿವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ತಮಿಳುನಾಡಿಗೂ ಕಾವೇರಿ ನೀರಿಗೂ ಏನು ಸಂಬಂಧ? ತಮಿಳುನಾಡಿನವರು ನೀರು ಬಿಡಿ ಎಂದು ಕೇಳಿದ್ದಾರಾ? ಕೇಳದಿದ್ದರೂ ನೀರು ಬಿಡಲು ನಮಗೆ ತಲೆ ಕೆಟ್ಟಿದೆಯಾ? ಬೆಂಗಳೂರಿಗೆ ಕುಡಿಯಲು ನೀರನ್ನು ಸಮರ್ಪಕವಾಗಿ ಪೂರೈಸಲು ನೀರು ಹರಿಸಲಾಗಿದೆ. ಬರ ಪರಿಸ್ಥಿತಿಯನ್ನು ಸರ್ಕಾರ ಯಶಸ್ವಿಯಾಗಿ ನಿಭಾಯಿಸುತ್ತಿದೆಯಲ್ಲ ಎಂಬ ಅಸೂಯೆಯಿಂದ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಅವರದ್ದು ಕೇವಲ ರಾಜಕಾರಣ.”

ಸಂಸ್ಕರಿಸಿದ ನೀರಿನ ಪೂರೈಕೆಗೆ ಜನ ಮುಂದೆ ಬರುತ್ತಿದ್ದಾರಾ ಎಂದು ಕೇಳಿದಾಗ, “ಖಂಡಿತವಾಗಿಯೂ ಜನ ಇದಕ್ಕೆ ಮುಂದೆ ಬಂದಿದ್ದಾರೆ. ಉದ್ಯಾನವನ, ಕೈಗಾರಿಕೆಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಈ ನೀರನ್ನು ನೀಡಲಾಗುತ್ತಿದೆ” ಎಂದು ತಿಳಿಸಿದರು.

ಮಂಜುನಾಥ್ ಅವರನ್ನು ಗೌರವಿಸುತ್ತೇವೆ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಾ. ಮಂಜುನಾಥ್ ಅವರ ಸ್ಪರ್ಧೆ ವಿಚಾರವಾಗಿ ಕೇಳಿದಾಗ, “ನಾವು ಮಂಜುನಾಥ್ ಅವರನ್ನು ಗೌರವಿಸುತ್ತೇವೆ. ಅವರು ಉತ್ತಮ ವೈದ್ಯರು. ಅವರಿಗೆ ನಾವು ಬೆಂಬಲ ನೀಡಿದ್ದೆವು. ಆದರೆ ರಾಜಕೀಯವೇ ಬೇರೆ. ನನ್ನ ಸಹೋದರ ಈ ಕ್ಷೇತ್ರದಲ್ಲಿ ಸಂಸದನ ರೀತಿ ಕೆಲಸ ಮಾಡುತ್ತಿಲ್ಲ, ಗ್ರಾಮ ಪಂಚಾಯ್ತಿ ಸದಸ್ಯನಂತೆ ಜನರ ಮಧ್ಯೆ ನಿಂತು ಕೆಲಸ ಮಾಡುತ್ತಿದ್ದಾರೆ” ಎಂದು ತಿಳಿಸಿದರು.

ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುವುದಿಲ್ಲ ಎಂಬ ಅಮಿತ್ ಶಾ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅಧಿಕಾರ ಕಳೆದುಕೊಳ್ಳುವ ಭಯದಿಂದ ಅವರು ಈ ಸಮಯದಲ್ಲಿ ಸಿಎಎ ಜಾರಿಗೆ ಮುಂದಾಗಿದ್ದಾರೆ” ಎಂದು ತಿಳಿಸಿದರು.

ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಬಳಕೆ ಕಡ್ಡಾಯದ ಬಗ್ಗೆ ಕೇಳಿದಾಗ, “ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯ ಮಾಡಲು ನೀಡಿದ್ದ ಕಾಲಮಿತಿ ಮುಕ್ತಾಯವಾಗಿದೆ. ಕನ್ನಡ ಪರ ಚಳುವಳಿಗಾರರು ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಸರ್ಕಾರ ಕನ್ನಡ ಬಳಕೆ ಕಡ್ಡಾಯ ಮಾಡಲು ಬದ್ಧವಾಗಿದೆ” ಎಂದು ತಿಳಿಸಿದರು.

ಬಿಜೆಪಿ ಪಟ್ಟಿಯಲ್ಲಿ 6 ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗಿದೆ ಎಂದು ಕೇಳಿದಾಗ, “ನನಗೆ ಬಂದಿರುವ ಮಾಹಿತಿ ಪ್ರಕಾರ 10 ಹಾಲಿ ಸಂಸದರಿಗೆ ಟಿಕೆಟ್ ತಪ್ಪಲಿದೆ. ನಾನು ಅದಕ್ಕೆ ಬದ್ದವಾಗಿದ್ದೇನೆ. ಅದು ಅವರ ಪಕ್ಷದ ವಿಚಾರ. ಅವರು ಏನಾದರೂ ಮಾಡಿಕೊಳ್ಳಲಿ” ಎಂದು ತಿಳಿಸಿದರು.

ಟಿಕೆಟ್ ತಪ್ಪಿರುವವರಲ್ಲಿ ಯಾರಾದರೂ ಕಾಂಗ್ರೆಸ್ ಸೇರ್ಪಡೆಯಾಗುತ್ತಾರಾ ಎಂದು ಕೇಳಿದಾಗ, “ಈ ಸಮಯದಲ್ಲಿ ಇದನ್ನು ಬಿಡಿಸಿ ಹೇಳುವುದಿಲ್ಲ” ಎಂದು ತಿಳಿಸಿದರು.

Related Articles

Back to top button