
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಸಿಎಂ ಬಿ ಎಸ್ ಯಡಿಯೂರಪ್ಪ ಸರ್ಕಾರದ ಮೇಲಿನ ಹಿಡಿತ ಕಳೆದುಕೊಳ್ಳುತ್ತಿದ್ದಾರೆ. ಕೊರೊನಾ ಸೋಂಕಿನಂತಹ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳು ಆಯಾ ಜಿಲ್ಲೆಗಳಲ್ಲಿ ಇರಲು ಸೂಚನೆ ನೀಡಿದರೂ ಸಚಿವರುಗಳು ನಿರ್ಲಕ್ಷ್ಯವಹಿಸಿದ್ದಾರೆ. ಇದರಿಂದಾಗಿ ಸೈಕಲ್ ಮೇಲೂ ಕೊರೊನಾ ಸೋಂಕಿತರ ಮೃತದೇಹ ಸಾಗಿಸುವ ಸ್ಥಿತಿ ಬಂದಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಕೊರೊನಾ ಮತ್ತು ಪ್ರವಾಹ ಸಂಧರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಇರಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ. ಆದರೆ ಸಿಎಂ ಆದೇಶವನ್ನು ಪಾಲಿಸಿಲ್ಲ. ಬೆಳಗಾವಿಯಲ್ಲಿ ಸೈಕಲ್ ಮೇಲೆ ಕೊರೊನಾ ಸೋಂಕಿತ ವ್ಯಕ್ತಿಯ ಮೃತ ದೇಹವನ್ನು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲು ಬಳ್ಳಾರಿಯಲ್ಲಿ ಹೆಣ ಬಿಸಾಕಿದರು. ಈಗ ಬೆಳಗಾವಿಯ ಸರದಿ, ಬಿಜೆಪಿ ಆಡಳಿತದಲ್ಲಿ ದೇಶದ ಗೌರವ ಹಾಳಾಯಿತು ಎಂದು ಗುಡುಗಿದರು.
ಇನ್ನು ಬೆಂಗಳೂರು ಗಲಭೆ ಪ್ರಕರಣ ಸಂಬಂಧ ಮಾತನಾಡಿ, ಬಿಜೆಪಿಯವರಿಗೆ ಅಧಿಕಾರಿಗಳ ಮೇಲೆ ವಿಶ್ವಾಸವಿಲ್ಲ ಸಿಎಂ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪೊಲೀಸ್ ಕಮಿಷನರ್ ಮೇಲೆ ತನಿಖೆ ಮಾಡುತ್ತಿದ್ದಾರೆ, ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ತನಿಖೆ ಮಾಡಲು ಹೊರಟಿದ್ದಾರೆ. ಇದಕ್ಕಿಂತ ಇನ್ನೊಂದು ದುರಂತ ಇಲ್ಲ ಎಂದು ಹೇಳಿದರು.
ಮತ್ತೊಂದು ಅಮಾನವೀಯ ಘಟನೆ: ಸೈಕಲ್ ಮೇಲೆ ಶವ ಸಾಗಣೆ



