*ತನ್ನ ಮಗನಿಗೆ ಸ್ಥಾನ ಸಿಗಲಿಲ್ಲ ಎಂದು ಅಣ್ಣನ ಮಗನ ವಿರುದ್ಧವೇ ಪಿತೂರಿ ಮಾಡಿದ್ರಾ HDK?* *ಲಕ್ಷ್ಮೀ ವಿಲಾಸ ಬ್ಯಾಂಕ್ ನಿಂದ ವಿಜಯೇಂದ್ರ RTGS ಮಾಡಿದ್ದೆಲ್ಲಿಗೆ?*

10 ತಿಂಗಳಲ್ಲ, 10 ವರ್ಷ ನಮ್ಮ ಸರ್ಕಾರ ಮುಟ್ಟಲು ಆಗುವುದಿಲ್ಲ: ವಿಪಕ್ಷಗಳಿಗೆ ಡಿಸಿಎಂ ಸವಾಲು
ಪ್ರಗತಿವಾಹಿನಿ ಸುದ್ದಿ: ಕುಮಾರಸ್ವಾಮಿ ಬಹಳ ಕ್ಲೀನ್ ಸ್ವಾಮಿಯಂತೆ. ನನಗೆ ಅವರ ವಿಚಾರ ಗೊತ್ತಿರಲಿಲ್ಲ. ಅವರ ವಿರುದ್ಧ ಸುಮಾರು 50 ಡಿನೋಟಿಫಿಕೇಶನ್ ಪ್ರಕರಣಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲವನ್ನು ಹೊರಗೆ ತರುತ್ತೇನೆ. ಕುಮಾರಸ್ವಾಮಿ ಅವರ ಪ್ರಕರಣದಲ್ಲಿ ವಿಚಾರಣೆ ನಡೆಸಲು ಲೋಕಾಯುಕ್ತದವರು ರಾಜ್ಯಪಾಲರಿಗೂ ಪತ್ರ ಬರೆದಿದ್ದಾರಂತೆ. ಆದರೆ ಕುಮಾರಸ್ವಾಮಿ ಯೂಟರ್ನ್ ಮಾಡಿಕೊಂಡು ಈಗ ಬಿಜೆಪಿ ಮೊರೆ ಹೋಗಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನ ಮಹಾರಾಜಾ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ, ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು. ವಿಜಯೇಂದ್ರ ನಿಮ್ಮ ತಂದೆ ಎರಡು ಸಾರಿ ರಾಜೀನಾಮೆ ಕೊಟ್ಟಿದ್ದೇಕೆ? ಎಂದು ಲೆಕ್ಕ ಕೊಡು. ನಾಳೆ ನೀನು ಮೈಸೂರಿಗೆ ಬಂದು ಸಭೆ ಮಾಡುವಾಗ ಲಕ್ಷ್ಮಿ ವಿಲಾಸ್ ಬ್ಯಾಂಕ್ ನಿಂದ ವಿದೇಶಕ್ಕೆ ಆರ್ಟಿಜಿಎಸ್ ಮಾಡಿದ್ದೀಯಲ್ಲಾ, ಅದು ಯಾಕೆ? ನಿಮ್ಮ ತಂದೆ ಕಣ್ಣೀರು ಹಾಕಿದ್ದು ಏಕೆ? ಎಂದು ವಿವರಿಸು. ಇಲ್ಲಿ ಯಾರು ರಾಜೀನಾಮೆ ನೀಡಬೇಕು ಎಂದು ಕಾಲ ತೀರ್ಮಾನ ಮಾಡುತ್ತದೆ.
ನಾನು ಮಂಡ್ಯದಲ್ಲಿ ನಮ್ಮ ನಾಯಕರ ಮಾತನ್ನು ನಂಬಬೇಡಿ, ಕೇವಲ ಯಡಿಯೂರಪ್ಪ, ಕುಮಾರಸ್ವಾಮಿ, ವಿಜಯೇಂದ್ರ, ಅಸ್ವತ್ಥ್ ನಾರಾಯಣ, ಯೋಗೇಶ್ವರ್, ಯತ್ನಾಳ್ ಅವರ ಮಾತಿನ ಮೇಲೆ ನಂಬಿಕೆ ಇಡಿ ಎಂದು ಹೇಳಿದ್ದೆ. ಈಗ ನೀವೇ ಅವರ ನುಡಿಮುತ್ತುಗಳನ್ನು ನೀವೇ ಕೇಳಿ ಎಂದು ಮೈತ್ರಿ ನಾಯಕರ ಹಳೇ ಹೇಳಿಕೆಗಳ ವಿಡಿಯೋಗಳನ್ನು ಪ್ರಸಾರ ಮಾಡಿಸಿದರು.
ಕುಮಾರಸ್ವಾಮಿ ಅವರು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಮೊದಲು ನನ್ನ ಮೇಲೆ ಆರೋಪ ಮಾಡಿದರು. ನಂತರ ಪ್ರೀತಂ ಗೌಡನ ಮೇಲೆ ಆರೋಪ ಮಾಡಿದ್ದಾರೆ. ಈ ಹಿಂದೆ ಯಡಿಯೂರಪ್ಪನವರಿಗೆ ಅಧಿಕಾರ ನೀಡದೇ ಬೆನ್ನಿಗೆ ಚೂರಿ ಹಾಕಿದವರು ಯಾರು? ಕುಮಾರಸ್ವಾಮಿಯೇ ಹೊರತು ಕಾಂಗ್ರೆಸಿಗರಲ್ಲ.
ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷದಲ್ಲಿ ಯಾರನ್ನೂ ಬೆಳೆಯಲು ಬಿಡಲಿಲ್ಲ. ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಅವರನ್ನು ಬಿಡಲಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರ ಪಕ್ಷದಲ್ಲಿ 17 ಸಂಸದರಿದ್ದರು. ಅವರಲ್ಲಿ ಯಾರೊಬ್ಬರೂ ಈಗ ಜೆಡಿಎಸ್ ಪಕ್ಷದಲ್ಲಿ ಇಲ್ಲ. ತಮ್ಮ ಮಕ್ಕಳಿಗೆ ರಾಜಕೀಯ ದಾರಿ ಮಾಡಿಕೊಡಲು ಕುಮಾರಸ್ವಾಮಿ ಅವರು ಜೆಡಿಎಸ್ ನಾಯಕರನ್ನು ಪಕ್ಷದಿಂದ ಹೊರಹಾಕಿದ್ದಾರೆ. ಇದು ಜನತಾದಳದ ಇತಿಹಾಸ. ಕೊನೆಗೆ ತನ್ನ ಮಗನಿಗೆ ರಾಜಕೀಯ ಸ್ಥಾನಮಾನ ಸಿಗುತ್ತಿಲ್ಲ ಎಂದು ಅಣ್ಣನ ಮಗನ ವಿರುದ್ಧವೇ ಪಿತೂರಿ ಮಾಡಿ ಅವನ ಮೇಲೂ ಕೇಸ್ ದಾಖಲಾಗುವಂತೆ ಮಾಡಿದ್ದಾರೆ. ಅಂತಹವರು ಸಿದ್ದರಾಮಯ್ಯ ಹಾಗೂ ನನ್ನನ್ನು ಬಿಡುತ್ತಾರಾ?ಎಂದು ವಾಗ್ದಾಳಿ ನಡೆಸಿದರು.
ಚಲುವರಾಯಸ್ವಾಮಿ, ಬಿ.ಎಲ್ ಶಂಕರ್ ಸೇರಿದಂತೆ ಅನೇಕರು ಜೆಡಿಎಸ್ ಪಕ್ಷದಲ್ಲಿದ್ದವರು. ಈಗ ಆ ಪಕ್ಷ ತೊರೆದಿದ್ದಾರೆ. ಹೀಗೆ ಎಲ್ಲರನ್ನು ಮುಗಿಸಿಕೊಂಡು ಅವರು ಅಧಿಕಾರಕ್ಕೆ ಬಂದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಎರಡನೇ ಬಾರಿಗೆ ಹಿಂದುಳಿದ ವರ್ಗದ ನಾಯಕ ಮುಖ್ಯಮಂತ್ರಿಯಾಗಿರುವುದನ್ನು ಸಹಿಸಲಾಗದೇ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಅವರ ವಿರುದ್ಧ ಸಂಚು ರೂಪಿಸುತ್ತಿದ್ದಾರೆ. ಇದು ಅವರಿಂದ ಸಾಧ್ಯವಿಲ್ಲ.
ಕುಮಾರಸ್ವಾಮಿ ನಿನ್ನಿಂದ ಕಾಂಗ್ರೆಸ್ ಪಕ್ಷ ಅಲುಗಾಡಿಸಲು ಆಗುವುದಿಲ್ಲ:
ಮಿಸ್ಟರ್ ಅಶೋಕ್, ಮಿಸ್ಟರ್ ವಿಜಯೇಂದ್ರ ನೀವು ಆಪರೇಶನ್ ಕಮಲದ ಮೂಲಕ ಈ ಹಿಂದೆ ಅನೇಕ ಸರ್ಕಾರ ತೆಗೆದಿದ್ದೀರಿ. ಮಿಸ್ಟರ್ ಕುಮಾರಸ್ವಾಮಿ, ನಿನ್ನ ಮುಖಂಡತ್ವದಲ್ಲಿ ಕೇವಲ 19 ಸೀಟುಗಳನ್ನು ಮಾತ್ರ ಗೆದ್ದಿದ್ದೀರಿ. ಈ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ 136 ಸೀಟು ಗೆದ್ದಿದೆ. ಬ್ರಿಟಿಷರು 200 ವರ್ಷ ಆಳಿದರೂ ಈ ಕಾಂಗ್ರೆಸ್ ಅಳಿಸಲು ಆಗಲಿಲ್ಲ. ಬಡವರ ಶಕ್ತಿಯಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷವನ್ನು ನೀನು ಎರಡು ಜನ್ಮ ಎತ್ತಿ ಬಂದರೂ ಅಳಿಸಲು ಸಾಧ್ಯವಿಲ್ಲ. ನೀನು ಏನೇ ಕುತಂತ್ರ ಮಾಡಿದರೂ ಕಾಂಗ್ರೆಸ್ ಅಳಿಸಲು ಸಾಧ್ಯವಿಲ್ಲ.
ವಿಜಯೇಂದ್ರ, ಅಶೋಕ, ಕುಮಾರಸ್ವಾಮಿ ನಿಮಗೆ ಸಿದ್ದರಾಮಯ್ಯನವರ ರಾಜೀನಾಮೆ ಬೇಕಾ? ಮಾಧ್ಯಮಗಳು ನನ್ನನ್ನು ಬಂಡೆ ಎಂದರು. ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಈ ಬಂಡೆ ಸಿದ್ದರಾಮಯ್ಯನ ಜತೆ ಇದೆ. ಈ ಬಂಡೆ ಜತೆ 135 ಶಾಸಕರೂ ಇದ್ದಾರೆ. ಕೋಟ್ಯಂತರ ಜನ ಸಿದ್ದರಾಮಯ್ಯನವರ ಜತೆಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಳ್ಳಿ. ಹೀಗಾಗಿ ನಿಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ.

10 ತಿಂಗಳಲ್ಲ, 10 ವರ್ಷ ನಮ್ಮ ಸರ್ಕಾರ ಮುಟ್ಟಲು ಆಗುವುದಿಲ್ಲ:
2023ರಲ್ಲಿ ರಾಜ್ಯದ ಜನರು ನಮಗೆ ಶೇ. 43 ರಷ್ಟು ಮತ ನೀಡಿದ್ದಾರೆ, ಲೋಕಸಭೆಯಲ್ಲಿ ಶೇ. 45 ರಷ್ಟು ಮತ ನೀಡಿದ್ದಾರೆ. 1 ಸೀಟು ಹೊಂದಿದ್ದ ನಾವು 9 ಸೀಟು ಗೆದ್ದಿದ್ದೇವೆ. ಜನರ ತೀರ್ಪನ್ನು ನಾವು ಒಪ್ಪುತ್ತೇವೆ. ಈ ಸರ್ಕಾರವನ್ನು ಮುಂದಿನ 10 ತಿಂಗಳಲ್ಲಿ ಅಲ್ಲಾಡಿಸಬಹುದು ಎಂಬುದು ನಿಮ್ಮ ಭ್ರಮೆ. ಯಾವುದೇ ಕಾರಣಕ್ಕೂ ಇದು ಸಾಧ್ಯವಿಲ್ಲ. ಮುಂದಿನ 10 ತಿಂಗಳಲ್ಲ, ಮುಂದಿನ 10 ವರ್ಷ ಈ ಸರ್ಕಾರವನ್ನು ಮುಟ್ಟಲು ಸಾಧ್ಯವಿಲ್ಲ. ಮುಡಾ ಹಗರಣ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಸಿಎಂ ರಾಜೀನಾಮೆ ಕೇಳುತ್ತರುವುದು ಅನೈತಿಕವಾದುದು.
ಮೂಡಾ ಅಕ್ರಮದಲ್ಲಿ ಶ್ರೀಮತಿ ಪಾರ್ವತಿ ಹಾಗೂ ಸಿದ್ದರಾಮಯ್ಯ ಅವರ ತಪ್ಪೇನಿದೆ?
ಇಲ್ಲಿ ಅಕ್ರಮ ಏನು ನಡೆದಿದೆ? ಸಿದ್ದರಾಮಯ್ಯ ಅವರ ಧರ್ಮಪತ್ನಿ ಪಾರ್ವತಿ ಅವರಿಗೆ ಅವರ ಸಹೋದರ ಖರೀದಿ ಮಾಡಿದ ಜಮೀನನ್ನು ಅರಿಶಿನ ಕುಂಕುಮಕ್ಕೆ ಉಡುಗೊರೆಯಾಗಿ ನೀಡಿದ್ದರು. ಆ ಜಮೀನನ್ನು ಮುಡಾದವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡ ಪರಿಣಾಮ ಅವರು ಪರಿಹಾರ ಅರ್ಜಿ ಹಾಕಿದರು. ನನ್ನಂತಹವನಾಗಿದ್ದರೆ ಶೇ.100ರಷ್ಟು ಪರಿಹಾರ ನೀಡಿ ಎಂದು ಹೋರಾಟ ಮಾಡುತ್ತಿದ್ದೆ. ಆದರೆ ಪಾರ್ವತಿ ಅವರು ಮುಡಾದವರು 50:50 ಅನುಪಾತದಲ್ಲಿ ಪರಿಹಾರ ಪಡೆಯಲು ಒಪ್ಪಿದರು. ಅವರು ಪರಿಹಾರದ ಅರ್ಜಿ ಹಾಕುವಾಗ ಇಂತಹುದೇ ಜಾಗದಲ್ಲಿ ಪರಿಹಾರ ನೀಡಿ ಎಂದು ಕೇಳಿಲ್ಲ. ಮೂಡಾದವರು ತಮ್ಮ ತಪ್ಪಿನ ಅರಿವಾಗಿ ಒಂದು ನಿರ್ಣಯಕ್ಕೆ ಬಂದು ಪಾರ್ವತಿ ಅವರಿಗೆ 14 ನಿವೇಶನ ಹಂಚಿಕೆ ಮಾಡಿದ್ದಾರೆ. ಇದರಲ್ಲಿ ತಪ್ಪೇನಿದೆ? ಸಿದ್ದರಾಮಯ್ಯ ಅವರು ನನ್ನ ಪತ್ನಿಗೆ ನಿವೇಶನ ನೀಡಿ ಎಂದು ಒತ್ತಡ ಹಾಕಿದ್ದಾರಾ? ಆದೇಶ ಮಾಡಿದ್ದಾರಾ? ಅಧಿಕಾರ ದುರುಪಯೋಗ ಮಾಡಿದ್ದಾರಾ? ಇಲ್ಲ. ಆದರೂ ಇದನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಏಕೆ ಅಕ್ರಮ ಎಂದು ಕರೆಯುತ್ತಿದ್ದಾರೆ.
ಇದು ತಪ್ಪಾಗಿದ್ದರೆ, ಈ ನಿವೇಶನಗಳನ್ನು ಯಾರ ಕಾಲದಲ್ಲಿ ಕೊಟ್ಟರು? ಬಿಜೆಪಿ ಸರ್ಕಾರದಲ್ಲಿ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಪರಿಹಾರ ನಿವೇಶನ ನೀಡಲಾಗಿದೆಯೇ ಹೊರತು, ಸಿದ್ದರಾಮಯ್ಯ ಹಾಗೂ ಭೈರತಿ ಸುರೇಶ್ ಅವರು ಅಧಿಕಾರದಲ್ಲಿ ಇದ್ದಾಗ ಆಗಿರುವುದಲ್ಲ. ಬಿಜೆಪಿ ನಾಯಕರ ತಟ್ಟೆಯಲ್ಲಿ ಹೆಗ್ಗಣಗಳಿವೆ. ಸಿದ್ದರಾಮಯ್ಯ ಅವರು ಬಿಜೆಪಿ ಆಡಳಿತ ಅವಧಿಯಲ್ಲಿ ನಡೆದ 25 ಹಗರಣಗಳ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಬೋವಿ ನಿಗಮ, ಬಿಟ್ ಕಾಯಿನ್, ಯಡಿಯೂರಪ್ಪ ಹಗರಣ, ಪಿಎಸ್ ಐ ನೇಮಕಾತಿ ಹಗರಣ ಸೇರಿದಂತೆ ಅನೇಕ ಹಗರಣಗಳಿವೆ.
ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುತ್ತೇವೆ. ರಾಜ್ಯದ ಜನ ಅವರ ಪರವಾಗಿದ್ದಾರೆ.ನೀವು ಅವರನ್ನು ಏನೂ ಮಾಡಲು ಸಾಧ್ಯವಿಲ್ಲ. ನಾವು ನುಡಿದಂತೆ ನಡೆದು ಐದು ಗ್ಯಾರಂಟಿ ಯೋಜನೆ ನೀಡಿದ್ದೇವೆ. ಮುಂದೆಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಪಕ್ಷದ ಹಳೆ ಯೋಜನೆಗಳನ್ನು ಹೇಗೆ ತೆಗೆದುಹೊಕಲು ಸಾಧ್ಯವಾಗಿಲ್ಲವೋ, ಅದೇ ರೀತಿ ಗ್ಯಾರಂಟಿ ಯೋಜನೆಗಳನ್ನು ತೆಗೆಯಲು ಸಾಧ್ಯವಿಲ್ಲ.
ಮುಖ್ಯಮಂತ್ರಿಗಳ ಧರ್ಮಪತ್ನಿ ಪಾರ್ವತಿ ಅವರು ಎಂದೂ ಅಧಿಕಾರ ದುರ್ಬಳಕೆ ಮಾಡಿಕೊಂಡವರಲ್ಲ. ದೇವಾಲಯಕ್ಕೆ ಹೋದರೂ ಸರದಿ ಸಾಲಿನಲ್ಲಿ ನಿಂತವರು. ನಮ್ಮ ಕುಟುಂಬದವರು ನಮ್ಮ ಜತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ಧರ್ಮಪತ್ನಿ ಎಂದಿಗೂ ಸಾರ್ವಜನಿಕವಾಗಿ ಕಾಣಿಸಿಕೊಂಡವರಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದಾಗಲೂ ಅವರು ಕಾಣಿಸಿಕೊಳ್ಳಲಿಲ್ಲ. ಅಂತಹ ಹೆಣ್ಣಿನ ಬಗ್ಗೆ ಅಧಿಕಾರ ದುರುಪಯೋಗದ ಆರೋಪ ಮಾಡುತ್ತೀರಲ್ಲಾ ಇದು ಸಾಧ್ಯವಿಲ್ಲ. ನಿಮ್ಮ ಈ ಪಾಪವನ್ನು ಮುಖ್ಯಮಂತ್ರಿಗಳು ಹಾಗೂ ಪಾರ್ವತಿ ಅವರು ಕ್ಷಮಿಸಿದರೂ ಬೆಟ್ಟದ ಮೇಲಿರುವ ತಾಯಿ ಚಾಮುಂಡೇಶ್ವರಿ ಕ್ಷಮಿಸುವುದಿಲ್ಲ.
ಆ.9ರಂದು ಐತಿಹಾಸಿಕ ಯಾತ್ರೆಗಳು:
1942ರಲ್ಲಿ ಈ ದಿನ ಆಗಸ್ಟ್ 9ರಂದು ಮಹಾತ್ಮಾ ಗಾಂಧಿ ಅವರ ನಾಯಕತ್ವದಲ್ಲಿ ಬ್ರಿಟಿಷರ ವಿರುದ್ಧ ಭಾರತ ಬಿಟ್ಟು ತೊಲಗಿ ಎಂಬ ಹೋರಾಟ ನಡೆದಿತ್ತು. 2010ರಲ್ಲಿ ಇದೇ ದಿನ ಬಳ್ಳಾರಿ ಪಾದಯಾತ್ರೆ ಮಾಡಿ ದೇಶದ ಸಂಪತ್ತು ಲೂಟಿ ಹೊಡೆಯುತ್ತಿರುವ ಬಳ್ಳಾರಿ ಗಣಿಲೂಟಿಕೋರರ ವಿರುದ್ಧ ಹೋರಾಟ ಮಾಡಿದ್ದೆವು. ಪ್ರಸ್ತುತ ನಾವು ಸಂವಿಧಾನ ವಿರೋಧಿ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿದ್ದೇವೆ.
ಬಿಜೆಪಿ ಹಾಗೂ ಜೆಡಿಎಸ್ ಮಾಡುತ್ತಿರುವುದು ಪಾದಯಾತ್ರೆಯಲ್ಲ ಪಾಪ ವಿಮೋಚನಾ ಯಾತ್ರೆ. ನಮ್ಮದು ಅಧರ್ಮಿಗಳ ವಿರುದ್ಧದ ಧರ್ಮ ಯುದ್ಧ. ಅನ್ಯಾಯದ ವಿರುದ್ಧ ನ್ಯಾಯದ ಯುದ್ಧ, ನಮ್ಮದು ಅಸತ್ಯದ ವಿರುದ್ಧ ಸತ್ಯದ ಯುದ್ಧ.
ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದ ಜನ ಅಧಿಕಾರಕ್ಕೆ ಬಂದಂತೆ. ಈ ಜನಾಂದೋಲನ ಕಾರ್ಯಕ್ರಮ ರಾಜ್ಯದ ಜನರ ರಕ್ಷಣೆ, ಸಂವಿಧಾನ ರಕ್ಷಣೆಗಾಗಿ. ನಿಮ್ಮ ಆಶೀರ್ವಾದದಿಂದ 135 ಸೀಟುಗಳಿಂದ ಆಯ್ಕೆಯಾಗಿರುವ ಈ ಸರ್ಕಾರವನ್ನು 10 ತಿಂಗಳಲ್ಲಿ ತೆಗೆಯುತ್ತೇವೆ ಎಂದು ಹುನ್ನಾರ ಮಾಡುತ್ತಿರುವವರ ವಿರುದ್ಧ ಹಾಗೂ ಐದು ಗ್ಯಾರಂಟಿ ಯೋಜನೆ ಹಾಗೂ ಜನರ ಬದುಕು ರಕ್ಷಣೆ ಮಾಡಲು ಈ ಹೋರಾಟ.
ಇತಿಹಾಸ ಗೊತ್ತಿಲ್ಲದೇ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ಇನ್ನು ಇಂದಿರಾ ಗಾಂಧಿ ಅವರು, “ಅವಕಾಶ ನಿಮ್ಮನ್ನು ಹುಡುಕಿಕೊಂಡು ಬರುವುದಿಲ್ಲ, ನೀವೇ ಅವಕಾಶ ಹುಡುಕಿಕೊಂಡು ಹೋಗಬೇಕು” ಎಂದು ಹೇಳಿದ್ದಾರೆ. ನಿಮ್ಮ ಪಾಪದಯಾತ್ರೆ ಮೂಲಕ ನಮ್ಮ ಹಾಗೂ ಪಕ್ಷದ ಬಲವರ್ಧನೆಗೆ ಅವಕಾಶ ಮಾಡಿರುವುದಕ್ಕೆ ಧನ್ಯವಾದ ತಿಳಿಸುತ್ತೇವೆ.
ಗಾಂಧಿ ಅವರು ಸ್ವಾತಂತ್ರ್ಯಕ್ಕಾಗಿ ದಂಡಿ ಯಾತ್ರೆ ಮಾಡಿದರು. ಎಸ್.ಎಂ ಕೃಷ್ಣ ಅವರು ಕಾವೇರಿ ನೀರಿಗಾಗಿ ಪಾದಯಾತ್ರೆ ಮಾಡಿದ್ದರು. ಭಾರತವನ್ನು ಒಂದುಗೂಡಿಸಲು, ಬೆಲೆ ಏರಿಕೆ, ನಿರುದ್ಯೋಗ ಖಂಡಿಸಿ, ಭ್ರಷ್ಟಾಚಾರ ವಿರುದ್ಧ ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡಿದ್ದರು. ನಾವು ಗಣಿ ಲೂಟಿ ಖಂಡಿಸಿ ರಾಜ್ಯ ಹಾಗೂ ದೇಶದ ಸಂಪತ್ತು ರಕ್ಷಣೆಗೆ ಬಳ್ಳಾರಿ ಪಾದಯಾತ್ರೆ ಮಾಡಿದೆವು. ಕಾವೇರಿ ಜಲಾನಯನದ 10 ಜಿಲ್ಲೆಗಳಿಗೆ ನೀರು ಒದಗಿಸುವ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಮಾಡಿದ್ದೆವು. ನಮ್ಮ ಯಾತ್ರೆಗೆ ನೀವು ತಡೆ ಒಡ್ಡಿದಿರಿ, ಕೇಸು ದಾಖಲಿಸಿದಿರಿ. ನಿಮ್ಮ ಕೇಸಿಗೆ ನಾವು ಹೆದರಲಿಲ್ಲ. ಈ ನಾಡಿನ ರೈತರು, ನೀರಿನ ರಕ್ಷಣೆಗೆ ಹೋರಾಟ ಮಾಡಿ ಹೆಜ್ಜೆ ಹಾಕಿದ್ದೇವೆ. ಆದರೆ ನಿಮ್ಮ ಯಾತ್ರೆ ಯಾವ ಕಾರಣಕ್ಕೆ? ಎಂದು ಪ್ರಶ್ನಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ