Latest

*ಪ್ರಣಾಳಿಕೆ ಪವಿತ್ರ ಗ್ರಂಥವಿದ್ದಂತೆ; ಜಾರಿಗೆ ತರಲು ಸಾಧ್ಯವಾಗುವ ಘೋಷಣೆಗಳನ್ನು ಮಾತ್ರ ಪ್ರಕಟಿಸಿದ್ದೇವೆ: ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದ ಬದಲಾವಣೆ, ಅಭಿವೃದ್ಧಿ, ಪ್ರಗತಿಗೆ ಸಂಬಂಧಿಸಿದಂತೆ ಇದೊಂದು ಪವಿತ್ರ ದಿನ. ಕಾಂಗ್ರೆಸ್ ಪಕ್ಷ ದಕ್ಷ ಆಡಳಿತಕ್ಕೆ ಬದ್ಧವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ಇಂದು ಸರ್ವಜನಾಂಗದ ಶಾಂತಿಯ ತೋಟ ಎಂಬ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಈ ಪವಿತ್ರವಾದ ಗ್ರಂಥವನ್ನು ಮಲ್ಲಿಕಾರ್ಜುನ ಖರ್ಗೆ ಅವರು ಬಿಡುಗಡೆ ಮಾಡಿದ್ದಾರೆ. ನಾನು ಸಿದ್ದರಾಮಯ್ಯ ಅವರು, ಪರಮೇಶ್ವರ್ ಅವರು ಸೇರಿ ರಾಜ್ಯವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು, ರಾಜ್ಯಕ್ಕೆ ಅಂಟಿರುವ ಕಳಂಕ ಹೇಗೆ ತೊಳೆಯಬೇಕು ಎಂದು ಚರ್ಚೆ ಮಾಡಿ ಈ ಪವಿತ್ರ ಗ್ರಂಥವನ್ನು ತಯಾರು ಮಾಡಿದ್ದೇವೆ.

ಈ ಗ್ರಂಥ ಕೇವಲ ಪ್ರಣಾಳಿಕೆ ಅಲ್ಲ, ಇದು ಜನರ ಧ್ವನಿ ಪ್ರಜಾಧ್ವನಿ. ರಾಜ್ಯದುದ್ದಗಲ ಪ್ರವಾಸ ಮಾಡಿ ಜನರ ಆಚಾರ ವಿಚಾರ, ಬಯಕೆಯಂತೆ ಅವರ ಬದುಕಿನಲ್ಲಿ ಕಾಂಗ್ರೆಸ್ ಯಾವ ರೀತಿ ಬದಲಾವಣೆ ತರಬಹುದು ಎಂದು ಈ ಪ್ರಣಾಳಿಕೆ ತಯಾರು ಮಾಡಲಾಗಿದೆ. ನಮ್ಮ ಪ್ರಣಾಳಿಕೆಯಲ್ಲಿ ಜಾರಿಗೆ ತರಲು ಸಾಧ್ಯವಾಗಿರುವ ಘೋಷಣೆಗಳನ್ನು ಮಾತ್ರ ಪ್ರಕಟಿಸಿದ್ದೇವೆ ಎಂದರು.

ಕಾಂಗ್ರೆಸ್ ತನ್ನ ಯೋಜನೆಗಳನ್ನು ಜಾರಿಗೆ ಬದ್ಧವಾಗಿದ್ದು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಪ್ರಣಾಳಿಕೆ ಪೂರಕವಾಗಿದೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ, ಮೈಸೂರು ಕರ್ನಾಟಕ ಹಾಗೂ ಗ್ಲೋಬಲ್ ಬೆಂಗಳೂರು ನಿರ್ಮಾಣಕ್ಕೆ ಈ ಪ್ರಣಾಳಿಕೆ ಅಡಿಪಾಯ ಹಾಕಿದೆ. ಬೆಂಗಳೂರು ನಗರ 32% ನಷ್ಟು ಜನಸಂಖ್ಯೆ ಇದೆ. ಬೆಂಗಳೂರಿನ ಹಳೆಯ ಭವ್ಯ ವೈಭವ ಮರು ಸ್ಥಾಪನೆಗೆ, ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು.

ಉದ್ಯೋಗ ಸೃಷ್ಟಿಸಲು 2, 3ನೇ ಹಂತದ ನಗರಗಳಲ್ಲಿ ಅಭಿವೃದ್ಧಿಗೆ ಆದ್ಯತೆ. ರೈತರ ಬದುಕಿನಲ್ಲಿ ಬದಲಾವಣೆ ತರಲು ಪ್ರಣಾಳಿಕೆ ಸಿದ್ಧ ಮಾಡಿದ್ದೇವೆ. ನಾವು ಬೆಲೆ ಏರಿಕೆಯ ನೋವನ್ನು ಅರಿತು ಜನರ ಬದುಕಿನ ಸಮಸ್ಯೆ ತಿಳಿದು ಜನರ ಜೀವನದಲ್ಲಿ ಸಹಾಯ ಮಾಡಲು ಕಾಂಗ್ರೆಸ್ ಬದ್ಧವಾಗಿದೆ. ಕಾಂಗ್ರೆಸ್ ಪಕ್ಷ ಎಲ್ಲಾ ವರ್ಗದ ಜನರಿಗೆ ಶಕ್ತಿ ತುಂಬಿ ಮಾನಸಿಕವಾಗಿ ಕುಗ್ಗಿರುವ ಜನರಿಗೆ ಸಾಮಾಜಿಕ, ಆರ್ಥಿಕವಾಗಿ ಶಕ್ತಿ ತುಂಬಿ ಉತ್ತಮ ಆಡಳಿತ ನೀಡಲಾಗುವುದು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟ ರಹಿತ ಸರ್ಕಾರವಾಗಲಿದೆ. ರಾಜ್ಯಕ್ಕೆ ಹೊಸ ರೂಪ ಕೊಟ್ಟು, ರೈತರು, ಹಿಂದುಳಿದವರ ಬದುಕಿನಲ್ಲಿ ಬದಲಾವಣೆ ತಂದು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಲಾಗುವುದು.

ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗಗಳು ಅಧಿಕಾರಕ್ಕೆ ಬಂದಂತೆ. ಈ ಸಂದರ್ಭದಲ್ಲಿ ನಿಮ್ಮ ಸಹಕಾರ ಬಹಳ ಮುಖ್ಯ. ನಾವು ಬಸವಣ್ಣನ ನಾಡಿನಲ್ಲಿದ್ದು, ನಾವು ನುಡಿದಂತೆ ನಡೆಯುತ್ತೇವೆ. ಬಸವಣ್ಣ, ಕುವೆಂಪು, ನಾರಾಯಣ ಗುರುಗಳ ಆಚಾರ ವಿಚಾರಗಳು ಕಾಂಗ್ರೆಸ್ ನ ಆಚಾರ ವಿಚಾರಗಳಾಗಿದೆ. ವಿಶ್ವ ಮಾನವ ತತ್ವದಲ್ಲಿ ಕಾಂಗ್ರೆಸ್ ಹೆಜ್ಜೆ ಇಡುತ್ತಿದೆ. ರಾಜ್ಯದ ಜನರಿಗೆ ಸೇವೆ ಮಾಡುವ ಅವಕಾಶವನ್ನು ನಮಗೆ ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದರು.

https://pragati.taskdun.com/vijayapuraelection-training-busaccident/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button