*BJPಗೆ ತನ್ನ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ; ಷಡ್ಯಂತ್ರದಿಂದ ರಾಹುಲ್ ಗಾಂಧಿ ವಜಾ ಮಾಡಿದ್ದಾರೆ; ಡಿ.ಕೆ.ಶಿವಕುಮಾರ್ ಕಿಡಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ನಾಯಕರು ಷಡ್ಯಂತ್ರ ನಡೆಸಿ ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ವಜಾ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ಸಂಸತ್ ಸ್ಥಾನ ಅನರ್ಹತೆಗೆ ಬಿಜೆಪಿ ಕುತಂತ್ರ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ನಾಯಕರು ಮೌನ ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಿ.ಕೆ.ಶಿವಕುಮಾರ್, ಕಳೆದ 9 ವರ್ಷಗಳಿಂದ ನೆಹರು ಕುಟುಂಬದ ಮೇಲೆ ಬಿಜೆಪಿ ನಿರಂತರವಾಗಿ ಗದಾಪ್ರಹಾರ ಮಾಡುತ್ತಿದೆ. ಈಗ ಕುತಂತ್ರದಿಂದಾಗಿ ರಾಹುಲ್ ಗಾಂಧಿಯವರ ಸಂಸತ್ ಸ್ಥಾನ ಅನರ್ಹಗೊಳಿಸಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿಗೆ ತನ್ನ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ. 7 ಲಕ್ಷ ಮತಗಳಿಂದ ಗೆದ್ದ ರಾಹುಲ್ ಗಾಂಧಿಯವರನ್ನು ಕುತಂತ್ರದಿಂದ ವಜಾ ಮಾಡಿದ್ದಾರೆ. ಭಾರತ್ ಜೋಡೋ ಯಾತ್ರೆಯಿಂದಾಗಿ ನಮಗೆ ಶಕ್ತಿ ಬಂದಿದೆ. ಇಡೀ ದೇಶದ ಜನ ರಾಹುಲ್ ಗಾಂಧಿ ಪರ ಇದ್ದಾರೆ ಎಂದು ಹೇಳಿದರು.
ಆರ್ ಎಸ್ ಎಸ್ ಹಾಗೂ ಬಿಜೆಪಿ ನಿರಂತರವಾಗಿ ನೆಹರು ಕುಟುಂಬದ ವಿರುದ್ಧ ಅಪಪ್ರಚಾರ ಮಾಡುತ್ತಲೇ ಬಂದಿದೆ. ಬಿಜೆಪಿ ಮುಖಂಡರು ಮಾಡಿದ ಅನೇಕ ಮಾನಹಾನಕಾರಿ ಭಾಷಣ, ಟೀಕೆಗಳಿಗೆ ಇಂದಿಗೂ ಶಿಕ್ಷೆ ಆಗಿಲ್ಲ. ಆದರೆ ರಾಹುಲ್ ಗಾಂಧಿ ಅವರು ಕೋಲಾರದಲ್ಲಿ ಮಾಡಿದ ಭಾಷಣ ಮುಂದಿಟ್ಟುಕೊಂಡು ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ.
2024ರ ಚುನಾವಣೆಯಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಕಷ್ಟವಾಗಲಿದೆ ಎಂದು ನಮ್ಮ ನಾಯಕರ ರಾಜಕೀಯ ಜೀವನ ಮುಗಿಸಲು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತ ಜೋಡೋ ಯಾತ್ರೆ ಬಳಿಕ ರಾಹುಲ್ ಗಾಂಧಿ ಅವರಿಗೆ ದೇಶದ ಜನರಿಂದ ವ್ಯಾಪಕ ವಿಶ್ವಾಸ ದೊರೆತಿದ್ದು, ಇದನ್ನು ಸಹಿಸಲಾಗದೆ ಈ ಕುತಂತ್ರ ಮಾಡುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಜನ ನೀಡಿದ ತೀರ್ಪು ಇದಕ್ಕೆ ಸಾಕ್ಷಿ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಜನ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ರಾಹುಲ್ ಗಾಂಧಿ ಅವರು ಮಾಡಿದ ಯಾತ್ರೆ ಪೈಕಿ ಅವರು ಎಲ್ಲೆಲ್ಲಿ ನಡೆದಿದ್ದಾರೆ ಅಲ್ಲೆಲ್ಲ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಶಾಸಕರು ಗೆದ್ದಿದ್ದಾರೆ. ಇದನ್ನು ಬಿಜೆಪಿಯಿಂದ ಸಹಿಸಲು ಆಗುತ್ತಿಲ್ಲ.
ರಾಹುಲ್ ಗಾಂಧಿ ಅವರಿಗೆ ಶಕ್ತಿ ತುಂಬಿ, ಅವರ ಜತೆ ದನಿಗೂಡಿಸಿ ನಾವು ಈ ಹೋರಾಟ ಮಾಡುತ್ತಿದ್ದೇವೆ. ರಾಹುಲ್ ಗಾಂಧಿ ದೇಶದ ಬಡವರ ಧ್ವನಿ. ಯುವಕರು, ಶ್ರಮಿಕರು, ಶೋಷಿತರ ಧ್ವನಿ. ಏನೇ ತೊಂದರೆ ಆದರೂ ನನ್ನ ಹೋರಾಟ ಅಂತ್ಯಗೊಳ್ಳುವುದಿಲ್ಲ. ಈ ಹೋರಾಟದಲ್ಲಿ ಎಂತಹುದೇ ಬೆಲೆ ತೆರಲು ಸಿದ್ಧ ಎಂದು ರಾಹುಲ್ ಗಾಂಧಿ ಅವರು ತಿಳಿಸಿದ್ದಾರೆ.
ಅವರ ವಿರುದ್ಧ ಅನಗತ್ಯವಾಗಿ ಮಾನನಷ್ಟ ಮೊಕದ್ದಮೆ ಹಾಕಿ ಶಿಕ್ಷೆ ಪ್ರಕಟ ಆದ 24 ಗಂಟೆಗಳಲ್ಲಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ. ಅವರ ಪರವಾಗಿ ಇಡೀ ರಾಜ್ಯದ ಜನತೆ ನಿಲ್ಲಲಿದೆ. ನಿಮ್ಮ ಹೋರಾಟ ಮುಂದುವರಿಯಬೇಕು. ನಿಮ್ಮ ಧ್ವನಿ ಹಾಗೂ ಶಕ್ತಿ ಈ ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿ ಕಾಪಾಡಲು ಮುಂದಾಗಿರುವ ರಾಹುಲ್ ಗಾಂಧಿ ಅವರ ಪರವಾಗಿ ಇರಬೇಕು.
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಗಾಂಧಿ ಕುಟುಂಬ ಮಾತ್ರ ಕಾಂಗ್ರೆಸ್ ಪಕ್ಷವನ್ನು ಒಗ್ಗಟ್ಟಗಿಡಲು ಸಾಧ್ಯ. 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ