ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮೀಸಲಾತಿ ಹೆಚ್ಚಳ ವಿಚಾರವಾಗಿ ರಾಜ್ಯ ಬಿಜೆಪಿ ಸರ್ಕಾರ ಕರ್ನಾಟಕದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಗಳಿಗೆ ಮಾಡುತ್ತಿರುವ ದ್ರೋಹವನ್ನು ಖಂಡಿಸಿ ಕಾಂಗ್ರೆಸ ಪಕ್ಷ ರಾಜಭವನ ಚಲೋ ಪ್ರತಿಭಟನೆ ನಡೆಸಿತು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಯಾತ್ರೆ ಬಾಳೆಕುಂದ್ರಿ ವೃತ್ತದ ಬಳಿ ತಲುಪಿದ ನಂತರ ಪೊಲೀಸರು ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದರು.
ನಂತರ ರಾಜ್ಯಪಾಲರ ಭೇಟಿಗೆ ಸಮಯಾಲಕಾಶ ಪಡೆದಿದ್ದ ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಶೋಷಿತ ಸಮುದಾಯಗಳಿಗೆ ಮೋಸ ಮಾಡಿರುವ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು ಎಂಬ ಮನವಿ ಸಲ್ಲಿಸಿದರು.
ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಹೊರಬಂದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯದ ಎಲ್ಲ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಗಳ ಮೀಸಲಾತಿ ಹಾಗೂ ಸಮಸ್ಯೆಗಳ ಅಧ್ಯಯನ ಮಾಡಲು ಕಾಂಗ್ರೆಸ್ ಸರ್ಕಾರ ನಾಗಮೋಹನ್ ದಾಸ್ ಅವರ ಸಮಿತಿ ರಚನೆ ಮಾಡಿತ್ತು. ಈ ಸಮಿತಿ ಶಿಫಾರಸ್ಸು ಬಂದ ನಂತರ ಇದು ಜಾರಿ ಆಗಬೇಕು ಪರಿಶಿಷ್ಟ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು ನಾವು ಆಗ್ರಹ ಮಾಡಿದೆವು.
ನಮ್ಮ ಒತ್ತಡಕ್ಕೆ ಮಣಿದ ಸರ್ಕಾರ ಸಂಪುಟದಲ್ಲಿ ತೀರ್ಮಾನ ಮಾಡಿ ಸುಗ್ರೀವಾಜ್ಞೆ ಹೊರಡಿಸಿ ಅದನ್ನು ರಾಜ್ಯಪಾಲರಿಗೆ ಕಳುಹಿಸಿತ್ತು. ನಂತರ ವಿಧಾನ ಮಂಡಲ ಅಧಿವೇಶನದಲ್ಲಿ ಈ ವಿಚಾರವಾಗಿ ಕಾನೂನು ತಂದಾಗ ನಾವು ಒಮ್ಮತದ ಬೆಲ ನೀಡಿ ಅನುಮೋದನೆ ನೀಡಿದೆವು. ನಂತರ ರಾಜ್ಯ ಸರ್ಕಾರ ಇದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕಿತ್ತು. ಕಳೆದ ನಾಲ್ಕದು ತಿಂಗಳಿಂದ ಕೇಂದ್ರ ಸರ್ಕಾರಕ್ಕೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲಿಲ್ಲ.
ಈ ವಿಚಾರವಾಗಿ ಸಂಸತ್ತಿನಲ್ಲಿ ಪ್ರಶ್ನಿಸಿದಾಗ, ಕೇಂದ್ರ ಮಂತ್ರಿಗಳೇ ರಾಜ್ಯ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂಬ ಸತ್ಯಾಂಶ ಹೊರಬಂದಿತು. ಪರಿಶಿಷ್ಟ ಜನರಿಗೆ ದೊಡ್ಡ ಸಹಾಯ ಮಾಡಿದ್ದೇವೆ ಎಂದು ಸುಳ್ಳು ಹೇಳುವ ಮೂಲಕ ಬಿಜೆಪಿ ಸರ್ಕಾರ ಅವರಿಗೆ ದ್ರೋಹ ಮಾಡಿದೆ. ಈ ವಿಚಾರದಲ್ಲಿ ಈ ಸಮುದಾಯಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಹೋರಾಟಕ್ಕೆ ಸಜ್ಜಾಗಿ ರಾಜ್ಯಪಾಲರನ್ನು ಭೇಟಿ ಮಾಡಿ ಈ ಸರ್ಕಾರದ ಸುಳ್ಳುನ್ನು ತಿಳಿಸಿ ನಮ್ಮ ಮನವಿ ಸಲ್ಲಿಸಿದ್ದೇವೆ. ಈಗ ಕಾಂಗ್ರೆಸ್ ಪಕ್ಷ ಹೋರಾಟ ಮಾಡಲು ಅವಕಾಶ ನೀಡದೇ ಬಂಧಿಸಿದೆ. ನಂತರ ನಾವು ನಮ್ಮ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ.
ಕಾಂಗ್ರೆಸ್ ಪಕ್ಷ ಹೋರಾಟಕ್ಕೆ ಮುಂದಾದ ನಂತರ ನಿನ್ನೆ ರಾತ್ರಿ ಮುಖ್ಯ ಕಾರ್ಯದರ್ಶಿಗಳ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಪತ್ರ ಬರೆಯಲಾಗಿದೆ ಎಂದು ವಾಟ್ಸಪ್ ನಲ್ಲಿ ಮಾಹಿತಿ ನೀಡಿದ್ದಾರೆ. ಈ ಸರ್ಕಾರಕ್ಕೆ ಚುನಾವಣೆಗಿಂತ ಈ ದಲಿತ ಸಮುದಾಯದವರ ಬಗ್ಗೆ ಕಾಳಜಿ ಇದ್ದರೆ, ಕೂಡಲೇ ರಾಜ್ಯಪಾಲರ ಸಹಿ ಹಾಕಿದ ತಕ್ಷಣವೇ 26 ಸಂಸತರನ್ನು ಕರೆದುಕೊಂಡು ಡಬಲ್ ಇಂಜಿನ್ ಸರ್ಕಾರದ ಮೂಲಕ ಒತ್ತಡ ಹಾಕಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ನೀಡಿ ಸಂವಿಧಾನ 9ನೇ ಶೆಡ್ಯುಲ್ ನಲ್ಲಿ ಸೇರಿಸಬೇಕಿತ್ತು. ಆದರೆ ಈಗ ನಮ್ಮ ಹೋರಾಟಕ್ಕೆ ಹೆದರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದ್ದಾರೆ.
ರಾಜ್ಯದ ಜನರಿಗೆ ದ್ರೋಹ ಬಗೆದಿರುವ ಹಿನ್ನೆಲೆಯಲ್ಲಿ ಈ ಸರ್ಕಾರ ಅಧಿಕಾರದಲ್ಲಿ ಮುಂದುವರಿಯಬಾರದು. ಕೂಡಲೇ ಈ ಸರ್ಕಾರವನ್ನು ವಜಾಗೊಳಿಸಬೇಕು ಎಂದು ರಾಜ್ಯಪಾಲರನ್ನು ಕೇಳಿದ್ದು, ಈ ವಿಚಾರವಾಗಿ ಪರಿಶೀಲನೆ ನಡೆಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.
ಪ್ರಶ್ನೋತ್ತರ
ರಾಜ್ಯ ಸರ್ಕಾರ ತರಾತುರಿಯಲ್ಲಿ ಪ್ರಸ್ತಾವನೆ ಸಲ್ಲಿಸಿರುವುದು ಚುನಾವಣೆ ಗಿಮಿಕ್ ಆಗಿದೆಯಾ ಎಂದು ಕೇಳಿದ ಪ್ರಶ್ನೆಗೆ, ‘ಈ ಮೀಸಲಾತಿ ವಿಚಾರವಾಗಿ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿ ರಾಜ್ಯಪಾಲರ ಸಹಿ ಹಾಕಿ 5 ತಿಂಗಳಾಗಿದೆ. ಇಷ್ಟು ದಿನಗಳ ಕಾಲ ಸುಮ್ಮನಿದ್ದು ಈಗ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನ ರೊಚ್ಚಿಗೆದ್ದು ಸರ್ಕಾರ ಕಿತ್ತೊಗೆಯಲು ಮುಂದಾಗಿರುವಾಗ, ಅನೇಕ ದಲಿತ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವಾಗ ಈ ಪ್ರಸ್ತಾವನೆ ಸಲ್ಲಿಸಿದ್ದಾರೆ. ನಿನ್ನೆ ರಾತ್ರಿ ಅವರು ಪ್ರಸ್ತಾವನೆ ಸಲ್ಲಿಸಿರುವುದೇ ಅವರು ನಮ್ಮ ಹೋರಾಟಕ್ಕೆ ಹೆದರಿದ್ದಾರೆ ಎಂಬುದಕ್ಕೆ ಸಾಕ್ಷಿ’ಎಂದರು.
ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಅವರು ಈ ವಿಚಾರವಾಗಿ ಮೊದಲು ತೀರ್ಮಾನ ಮಾಡಲಿ. ಮಗು ಹುಟ್ಟುವುದಕ್ಕೂ ಮುನ್ನ ಕುಲಾವಿ ಒಲೆಯುವುದು ಬೇಡ. ಅವರು ಮೊದಲು ತೀರ್ಮಾನ ಮಾಡಲಿ. ಅವರು ಈ ಹಿಂದೆ ತೆಗೆದುಕೊಂಡ ತೀರ್ಮಾನವನ್ನು ಸ್ವಾಮೀಜಿಗಳು ತಲೆಗೆ ತುಪ್ಪ ಸವರುವ ಪ್ರಯತ್ನ ಎಂದು ವ್ಯಾಖ್ಯಾನಿಸಿರಲಿಲ್ಲವೇ? ಹೀಗಾಗಿ ಅವರು ಮೊದಲು ತೀರ್ಮಾನ ಪ್ರಕಟಿಸಲಿ. ಬಿಜೆಪಿಯವರು ಯಾರಿಗೂ ನ್ಯಾಯ ಒದಗಿಸಿಕೊಡುವುದಿಲ್ಲ. ಇಷ್ಟು ವರ್ಷಗಳ ರಾಜಕಾರಣದ ಇತಿಹಾಸದಲ್ಲಿ ಇಷ್ಟು ಸಮುದಾಯಗಳು ಬೀದಿಗಿಳಿದು ಹೋರಾಟ ಮಾಡಿದ್ದು, ಇದೇ ಮೊದಲ ಬಾರಿ’ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ