*ಪ್ರಧಾನಿ ಮೋದಿ ಮಾತಿನಂತೆ ಮತದಾನಕ್ಕಿಂತ ಮೊದಲು ಈ ಕೆಲಸ ಮಾಡಿ ಎಂದು ಕರೆ ನೀಡಿದ ಡಿ.ಕೆ.ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಈ ದೇಶದ ಪ್ರಧಾನಮಂತ್ರಿಗಳ ಮಾರ್ಗದರ್ಶನದಂತೆ ನಾನು ಕೂಡ ನನ್ನ ರಾಜ್ಯದ ಕಾರ್ಯಕರ್ತರು ಹಾಗೂ ಜನರಿಗೆ ಸಂದೇಶ ರವಾನಿಸುತ್ತಿದ್ದೇನೆ. ಅಡುಗೆ ಸಿಲಿಂಡರ್ ಗೆ ನಮಸ್ಕರಿಸಿ ಮತದಾನ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಪ್ರಧಾನಮಂತ್ರಿಗಳ ಕೋವಿಡ್ ಸಮಯದಲ್ಲಿ ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿ ಎಂದು ಹೇಳಿದ್ದರು. ಎಲ್ಲರೂ ಅದನ್ನು ಪಾಲಿಸಿದ್ದರು. 2014 ರ ಚುನಾವಣೆ ಸಮಯದಲ್ಲಿ ಮೋದಿ ಅವರು ಮತದಾನ ಮಾಡಲು ಹೋಗುವ ಮುನ್ನ ಅಡುಗೆ ಸಿಲಿಂಡರ್ ಗೆ ನಮಿಸಿ ಮತದಾನ ಮಾಡಿ ಎಂದು ಕರೆ ನೀಡಿದ್ದರು. ಹೀಗಾಗಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನ ಪ್ರಧಾನಿ ಮಾತಿಗೆ ಬೆಲೆ ಕೊಟ್ಟು ಎಲ್ಲಾ ಬೂತ್ ಗಳ ಬಳಿ ಇರುವ ಪಕ್ಷದ ಕ್ಯಾಂಪ್ ಕೇಂದ್ರಗಳಲ್ಲಿ ಖಾಲಿ ಅಡುಗೆ ಸಿಲಿಂಡರ್ ಇಟ್ಟು ಅದಕ್ಕೆ ನಮಿಸಿ ಮತದಾನ ಮಾಡಿ ಎಂದು ನಮ್ಮ ಕಾರ್ಯಕರ್ತರಿಗೆ ಕರೆ ನೀಡುತ್ತೇನೆ.
ವೀರಶೈವ ಮಹಾಸಭೆ ಹಾಗೂ ಗುತ್ತಿಗೆದಾರರ ಸಂಘದ ವತಿಯಿಂದ ಕಾಂಗ್ರೆಸ್ ಪಕ್ಷದ ಪರವಾಗಿ ಬಂದಿರುವ ಪತ್ರಗಳ ಬಗ್ಗೆ ಕೇಳಿದಾಗ, ‘ಮಹಾಸಭಾ ಅವರ ಇಚ್ಛೆ ಅವರಿಗೆ, ಕಳೆದ ಬಾರಿ ಮಠಾಧೀಶರೂ ಕೆಲವು ತೀರ್ಮಾನ ಕೈಗೊಂಡಿದ್ದರು. ಈ ಬಾರಿ ಮಹಾಸಭಾ ಅವರು ತಮ್ಮ ತೀರ್ಮಾನ ಪ್ರಕಟಿಸಿದ್ದಾರೆ. ಗುತ್ತಿಗೆದಾರರ ಸಂಘದ ಪತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ಹೇಳಿದ್ದಾರಾ? ಸರ್ಕಾರ ನೌಕರರು ಹಳೆ ಪಿಂಚಣಿ ವ್ಯವಸ್ಥೆಗೆ ನಮ್ಮ ಮತ ಎಂದು ಹೇಳುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ ಬದುಕಿನ ಬಗ್ಗೆ ಬೆಂಬಲ ನೀಡುತ್ತಾರೆ. ಬಂಜಾರ ಹಾಗೂ ಕೆಲವು ಸಮಾಜ ಆಯಾ ಊರುಗಳಲ್ಲಿ ಒಂದೊಂದು ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ತೀರ್ಮಾನ ಪ್ರಜಾಪ್ರಭುತ್ವದಲ್ಲಿ ಇದನ್ನು ಗೌರವಿಸಬೇಕು’ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ಹೆಸರಲ್ಲಿ ನಕಲಿ ಪತ್ರದ ಬಗ್ಗೆ ದೂರು ನೀಡಿದ್ದೀರಾ ಎಂದು ಕೇಳಿದ ಪ್ರಶ್ನೆಗೆ, ‘ಬಿಜೆಪಿ ಅವರಿಗೆ ಕೆಲಸ ಇಲ್ಲ. ಬಿಜೆಪಿ ಸುಳ್ಳು ಸೃಷ್ಟಿಸುವ ಯೂನಿವರ್ಸಿಟಿ ಹೊಂದಿದೆ. ಜನರಿಗೆ ನೂರು ಸುಳ್ಳು ಹೇಳಿ ಅದನ್ನೆ ನಿಜ ಎಂದು ಜನರಿಗೆ ನಂಬಿಸಬೇಕು ಎಂದು ಈಶ್ವರಪ್ಪ ಅವರು ಹೇಳಿರಲಿಲ್ಲವೆ? ಸಿದ್ದರಾಮಯ್ಯ ಹಾಗೂ ನನಗೆ 5 ನಿಮಿಷ ವಿಶ್ರಾಂತಿಗೂ ಸಮಯ ಇಲ್ಲ ಮೊನ್ನೆಯಷ್ಟೇ ನಾವು ಜತೆಯಾಗಿ ಚರ್ಚೆ ಮಾಡಿದ್ದೇವೆ’ ಎಂದು ತಿಳಿಸಿದರು.
ಸೋನಿಯಾ ಗಾಂಧಿ ಅವರ ಹೇಳಿಕೆ ವಿಚಾರವಾಗಿ ಚುನಾವಣಾ ಆಯೋಗ ಸ್ಪಷ್ಟನೆ ಕೇಳಿರುವ ಬಗ್ಗೆ ಪ್ರಶ್ನೆ ಮಾಡಿದಾಗ, “ಕಾಂಗ್ರೆಸ್ ಪಕ್ಷಕ್ಕೆ ನೆಲದ ಕಾನೂನಿನ ಬಗ್ಗೆ ಅರಿವಿದೆ. ಚುನಾವಣಾ ಆಯೋಗದ ನೊಟೀಸ್ ಗೆ ಸ್ಪಷ್ಟನೆ ನೀಡುವುದು ನಮ್ಮ ಜವಾಬ್ದಾರಿ ಅದನ್ನು ಮಾಡುತ್ತೇವೆ. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿ ಗಲಭೆ ಆಗಲಿದೆ ಎಂದು ಜೆಪಿ ನಡ್ಡಾ ಅವರು ಕೇಂದ್ರದ ಅನುದಾನ ನೀಡುವುದಿಲ್ಲ ಎಂದು ರಾಜ್ಯದ ಜನರಿಗೆ ಬೆದರಿಕೆ ಹಾಕಿರುವ ಬಗ್ಗೆ ಯಾವುದೇ ಸ್ಪಷ್ಟನೆ ಇನ್ನು ಬಂದಿಲ್ಲ. ಅವರು ನಮಗೆ ಬೆದರಿಕೆ ಹಾಕುತ್ತಾರಾ? ನಮ್ಮಿಂದಲೇ ಕೇಂದ್ರಕ್ಕೆ ತೆರಿಗೆ ಕಟ್ಟಿ ನೆರವು ನೀಡುತ್ತಿದೆ. 25 ಸಂಸದರಿದ್ದರೂ ಬಿಜೆಪಿ ರಾಜ್ಯಕ್ಕೆ ನಯಾಪೈಸೆ ಸಹಾಯ ಮಾಡಿಲ್ಲ. ಹೀಗಾಗಿ ಪ್ರಧಾನಮಂತ್ರಿಗಳು ಬೀದಿ ಬೀದಿಯಲ್ಲಿ ಪ್ರಚಾರ ಮಾಡಿದ್ದಾರೆ. ಅವರು ಪ್ರಚಾರ ಮಾಡಲಿ ನಮ್ಮ ಅಭ್ಯಂತರವಿಲ್ಲ. ಆದರೆ ರಾಜ್ಯದ ನಾಯಕರನ್ನು ಅಭ್ಯರ್ಥಿಯನ್ನು ಜತೆಯಲ್ಲಿ ಇಟ್ಟುಕೊಂಡು ಪ್ರಚಾರ ಮಾಡಿಲ್ಲ. ತಾನೊಬ್ಬನೇ ಬೆಳೆಯಬೇಕು ಬೇರೆಯವರು ಬೆಳೆಯಬಾರದು ಎಂದು ಎಲ್ಲಾ ಕಡೆ ಒಬ್ಬರೇ ಹೋಗಿ ಪ್ರಚಾರ ಪಡೆಯುತ್ತಾರೆ. ಅವರಿಗೆ ಒಳ್ಳೆಯದಾಗಲಿ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ