Latest

*ವಿದ್ಯಾರ್ಥಿ ನಾಯಕನಾಗಿದ್ದಾಗಿನ ದಿನಗಳನ್ನು ನೆನೆದ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾನು ಅಧಿಕಾರ ತೆಗೆದುಕೊಂಡಾಗ ಪ್ರತಿ ಪಂಚಾಯ್ತಿಯಲ್ಲಿ ಪ್ರತಿಜ್ಞಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆಗ ಒಂದು ಮಾತು ಹೇಳಿದ್ದೆ. ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು ಹೇಳಿದ್ದೆ. ಈ ದೇವನಹಳ್ಳಿ ಐತಿಹಾಸಿಕ ಭೂಮಿಯಲ್ಲಿ ನೀವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮತ್ತೆ ಇಲ್ಲಿ ಕಾಂಗ್ರೆಸ್ ಶಾಸಕರ ಆಯ್ಕೆ ಸಾಧ್ಯವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ದೇವನಹಳ್ಳಿ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಈ ಸಭೆಯಲ್ಲಿ ರಾಮಯ್ಯ, ಆಹುತಿ ವೆಂಕಟೇಗೌಡರು, ಬಚ್ಚೆಗೌಡರನ್ನು ನೆನೆಸಿಕೊಳ್ಳಬೇಕು. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದರು. ಇಲ್ಲಿ ನಾನು ಜಿಲ್ಲೆಯ ಯೂಥ್ ಕಾಂಗ್ರೆಸ್ ಅಧ್ಯಕ್ಷನಾಗಿ ಕೆಲಸ ಮಾಡಿಕೊಂಡಿದ್ದೆ. ಅಲ್ಲಿಂದ ಇಂದು ರಾಜ್ಯ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಈ ಕ್ಷೇತ್ರದ ಕಾರ್ಯಕರ್ತರು ಪಕ್ಷದ ಕಾರ್ಯಕ್ರಮಕ್ಕೆ ಹೆಚ್ಚಿನ ಶಕ್ತಿ ನೀಡುತ್ತಾರೆ ಎಂದರು.

15-16 ಮಂದಿ ಇಲ್ಲಿ ಅರ್ಜಿ ಹಾಕಿದ್ದೀರಿ. ಕಾಂಗ್ರೆಸ್ ನಿಂದ ಯಾರಿಗೆ ಟಿಕೆಟ್ ನೀಡಿದರೂ ನಾನು ಅಭ್ಯರ್ಥಿ ಎಂದು ಭಾವಿಸಿ ಕಾಂಗ್ರೆಸ್ ಬಾವುಟ ಹಾರಿಸಬೇಕು. ನೀವು ನನ್ನನ್ನು ಸಾಕಿ ಬೆಳೆಸಿದ್ದೀರಿ. ಇಲ್ಲಿ ವಿಮಾನ ನಿಲ್ದಾಣ ಮಾಡಲು ನಿರ್ಧರಿಸಿದಾಗ ನಾನು ನಗರಾಭಿವೃದ್ಧಿ ಸಚಿವನಾಗಿದ್ದೆ, ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷನಾಗಿದ್ದೆ. ಆಗ ಇಲ್ಲಿನ ನಾಯಕರನ್ನು ಕರೆಸಿದೆ. 2 ಸಾವಿರ ಎಕರೆ ಸರ್ಕಾರಿ ಜಮೀನು, 2500 ಎಕರೆ ರೈತರ ಜಮೀನು ಪಡೆದೆವು. ನಾನು ಎಲ್ಲ ನಾಯಕರು, ಜನರ ಜತೆ ಚರ್ಚೆ ಮಾಡಿದೆ. ಈ ವಿಮಾನ ನಿಲ್ದಾಣದಿಂದ ಈ ಭಾಗದ ರೈತರ ಜಮೀನಿನ ಮೌಲ್ಯ ಕೋಟಿಗಟ್ಟಲೆ ಹೆಚ್ಚಾಗಿದೆ. ಇದು ನಿಮ್ಮ ಬದುಕಿನಲ್ಲಿ ಕಾಂಗ್ರೆಸ್ ತಂದಿರುವ ಬದಲಾವಣೆ. ಆದರೆ ಬಿಜೆಪಿ ಸರ್ಕಾರದವರು ಅವರ ಸಂಸ್ಥೆಗಳಿಗೆ ಕೇವಲ 50 ಲಕ್ಷ ಬೆಲೆಗೆ ನೂರಾರು ಎಕರೆ ಬರೆದುಕೊಂಡಿದ್ದಾರೆ.

ಜನರ ನೋವು, ಸಂಕಷ್ಟ ಅರಿತು ಅದಕ್ಕೆ ಪರಿಹಾರ ನೀಡಲು ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದೇವೆ. ಬೆಳಗಾವಿಯಲ್ಲಿನ ವೀರಸೌಧದಿಂದ ಈ ಯಾತ್ರೆ ಆರಂಭಿಸಿದ್ದೇವೆ. 28 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇವೆ. ಈಗ ತಾಲೂಕು ಮಟ್ಟದಲ್ಲಿ ಪ್ರವಾಸ ಮಾಡುತ್ತಿದ್ದೇವೆ. ಉತ್ತರ ಭಾಗದಲ್ಲಿ ಸಿದ್ದರಾಮಯ್ಯ, ದಕ್ಷಿಣದಲ್ಲಿ ನಾವು ಯಾತ್ರೆ ಮಾಡುತ್ತಿದ್ದೇವೆ.

60 ದಿನಗಳ ನಂತರ ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದು ನಿಶ್ಚಿತ. ರಾಜ್ಯದುದ್ದಗಲಕ್ಕೆ ಎಲ್ಲ ಸಮಾಜ, ಜಾತಿ, ವರ್ಗದವರು ಸರ್ಕಾರದ ವಿರುದ್ಧ ಹೋರಾಡುತ್ತಿದ್ದಾರೆ. ಸ್ವಾಮೀಜಿಗಳು, ಗುತ್ತಿಗೆದಾರರು, ರೈತರು, ಯುವಕರು, ಅಂಗನವಾಡಿ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಎಲ್ಲ ಮಹನೀಯರ ಇತಿಹಾಸ ತಿರುಚಲು ಮುಂದಾಗಿದೆ. ಕೆಂಪೇಗೌಡ, ಬಸವಣ್ಣ, ಅಂಬೇಡ್ಕರ್ ಅವರ ಇತಿಹಾಸ ತಿರುಚಲು ಮುಂದಾಗಿದ್ದಾರೆ. ಹಿಂದೆ ಬ್ರಿಟೀಷರ ವಿರುದ್ಧ ಹೋರಾಟ ಮಾಡುವಾಗ ಬ್ರಿಟೀಷರ ಬುಲೆಟ್ ಹಾಗೂ ಜನರ ಮಧ್ಯೆ ಯುದ್ಧ ಇತ್ತು. ಈಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬ್ಯಾಲೆಟ್ ಗಾಗಿ ಯುದ್ಧ ಮಾಡಬೇಕಿದೆ ಎಂದರು.

ಕಾಂಗ್ರೆಸ್ ಪಕ್ಷ ಸಂವಿಧಾನಕ್ಕೆ ತಿದ್ದುಪಡಿ ತಂದು ಸ್ಥಳೀಯ ನಾಯಕತ್ವ ಬೆಳೆಸಲು ಪಂಚಾಯ್ತಿ ಚುನಾವಣೆ ಆರಂಭಿಸಿದೆವು. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಇದ್ದರೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡುತ್ತಿಲ್ಲ. ಕಾರಣ ಬಿಜೆಪಿಗೆ ಸೋಲಿನ ಭೀತಿ ಇದೆ. ನಮ್ಮ ಪಕ್ಷದ ಸಮೀಕ್ಷೆ ಪ್ರಕಾರ ಬೆಂಗಳೂರು ನಗರದಲ್ಲಿ 28 ರಲ್ಲಿ 20 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ಈ ಜಿಲ್ಲೆಯ 4 ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ.

ಬಿಜೆಪಿ ಧರ್ಮದ ಹೆಸರಿನಲ್ಲಿ ಯುದ್ಧ ಮಾಡುತ್ತಿದೆ. ಅವರು ಭಾವನೆ ಮೇಲೆ ರಾಜಕೀಯ ಮಾಡಿದರೆ ನಾವು ಬದುಕಿನ ಮೇಲೆ ಗಮನ ಹರಿಸುತ್ತಿದ್ದೇವೆ. ಇಲ್ಲಿರುವ ದಳದ ಶಾಸಕರು ಯಾವಾಗಲಾದರೂ ನಿಮ್ಮ ಸಂಕಷ್ಟಕ್ಕೆ ಸ್ಪಂದಿಸಲು ಬಂದಿದ್ದರಾ? ನಿಮ್ಮ ಬದುಕಿನಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡಿದರಾ? ಬಿಜೆಪಿ ನುಡಿದಂತೆ ನಡೆಯಲಿಲ್ಲ. ಈ ಭಾಗದಲ್ಲಿ ಬದಲಾವಣೆ ತಂದು ನಿಮ್ಮ ಬದುಕಿನಲ್ಲಿ ನಿಮ್ಮ ಜತೆ ನಿಂತಿದ್ದರೆ ಅದು ಕಾಂಗ್ರೆಸ್ ಮಾತ್ರ.

ಎಲ್ಲ ಜಾತಿ ವರ್ಗದವರಿಗೆ ರಕ್ಷಣೆ ಮಾಡುತ್ತಾ ನಾವು ಬಂದಿದ್ದೇವೆ. ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನ ನರಳುತ್ತಿದ್ದಾರೆ. ಬಿಜೆಪಿ 600 ಭರವಸೆ ನೀಡಿ ಕೇವಲ 50 ಮಾತ್ರ ಈಡೇರಿಸಿದೆ. ಈ ಸರ್ಕಾರ 40% ಕಮಿಷನ್ ಸರ್ಕಾರ ಎಂಬ ಹೆಸರು ಪಡೆದಿದೆ. ಈ ಭಾಗದ ಕೆಂಪಣ್ಣ ಗುತ್ತಿಗೆದಾರರ ಸಂಘದ ಅದ್ಯಕ್ಷರು. ಈ ಸರ್ಕಾರದಲ್ಲಿ ಯಾವುದೇ ಕೆಲಸ ಮಾಡಬೇಕಾದರೂ 40% ಕಮಿಷನ್ ನೀಡಬೇಕು ಎಂದು ಅವರು ದೂರಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಪರಿಸ್ಥಿತಿ ಇತ್ತಾ?

ಮೋದಿ ಅವರು ಅಚ್ಛೇ ದಿನ ಅಂತಾರೆ. ಇದೇನಾ ಅಚ್ಛೇದಿನ? ಯುವಕರು ಪೊಲೀಸ್ ಹುದ್ದೆಗೆ, ಸಹಾಯಕ ಪ್ರಾದ್ಯಾಪಕ ಹುದ್ದೆ, ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಹಾಕಿದರೆ ಅವುಗಳನ್ನು ಮಾರಾಟ ಮಾಡಿ ಅಕ್ರಮ ಮಾಡಿದ್ದಾರೆ. 100ಕ್ಕೂ ಹೆಚ್ಚು ಮಂದಿ ಜೈಲು ಪಾಲಾಗಿದ್ದಾರೆ. ನಮ್ಮ ಕಾಲದಲ್ಲಿ ಇಂತಹ ಪ್ರಕರಣ ನಡೆದಿತ್ತಾ? ಇಲ್ಲ. ನಾನು ಇಂಧನ ಸಚಿವನಾಗಿದ್ದಾಗ 25 ಸಾವಿರ ಜನರಿಗೆ ಕೆಲಸ ನೀಡಿದ್ದೆ. ಆಗ ಯಾವುದಾದರೂ ಒಬ್ಬನಿಂದ ಲಂಚ ಪಡೆದಿದ್ದರೆ ನಾನು ರಾಜಕಾರಣದಿಂದ ನೀವೃತ್ತಿಯಾಗಲು ಸಿದ್ಧ ಎಂದರು.

*ಅದೆಂಗೆ ಸಾಧ್ಯ ಎಂದು ಕೇಳುತ್ತಿರುವ ಮಿನಿಸ್ಟರ್ ಅಶೋಕ್… ನಮಗೂ ಆಡಳಿತ ಮಾಡುವುದು ಗೊತ್ತಿದೆ ಎಂದು ಟಾಂಗ್ ನೀಡಿದ ಡಿ.ಕೆ.ಶಿವಕುಮಾರ್*

https://pragati.taskdun.com/d-k-shivakumarmaluruprajadhwani/

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button