Kannada NewsKarnataka NewsLatestPolitics

*ಕರ್ನಾಟಕದ ಪ್ರತಿ ಮನೆಯೂ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿದೆ: ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್‌ ಪಕ್ಷ ಬಡತನದ ವಿರುದ್ಧ ಯುದ್ಧ ಮಾಡುತ್ತದೆಯೇ ಹೊರತು ಬಡವರ ವಿರುದ್ಧವಲ್ಲ. ಬೆಂಗಳೂರು ಗ್ರಾಮಾಂತರ ಭಾಗದ ಜನರು 3 ಕ್ಷೇತ್ರಗಳನ್ನು ಗೆಲ್ಲಿಸಿ ನಮಗೆ ಶಕ್ತಿ ನೀಡಿದ ಪರಿಣಾಮ ಕರ್ನಾಟಕ ಮಾದರಿ ಸೃಷ್ಟಿಯಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಹೊಸಕೋಟೆಯಲ್ಲಿ ನಡೆದ ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌, ಹೆಣ್ಣು ಕುಟುಂಬದ ಕಣ್ಣು ಅದರಂತೆ ನಮ್ಮ ಸರ್ಕಾರ ರಾಜ್ಯದ ಎಲ್ಲಾ ಮಹಿಳೆಯರ ಅಭಿವೃದ್ಧಿಗೆ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಸರ್ವರ ಏಳಿಗೆಯೇ ಕಾಂಗ್ರೆಸ್‌ ಪಕ್ಷದ ಮುಖ್ಯ ಗುರಿ.

ದೀಪ ಮಾತನಾಡುವುದಿಲ್ಲ ಆದರೆ ಬೆಳಕು ಕೊಡುತ್ತದೆ. ಅದರಂತೆ 1.47 ಕೋಟಿ ಜನರಿಗೆ ಜಾರ್ಜ್‌ ಅವರ ನೇತೃತ್ವದಲ್ಲಿ ಉಚಿತ ವಿದ್ಯುತ್‌ ನೀಡುತ್ತಿದ್ದೇವೆ. ಕರ್ನಾಟಕದ ಪ್ರತಿ ಮನೆಯೂ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿದೆ ಎಂದರು.

ಬಿಜೆಪಿ ಸರ್ಕಾರ ತಾನು ಕೊಟ್ಟ ಒಂದೇ ಒಂದು ಮಾತನ್ನು ಉಳಿಸಿಕೊಂಡಿಲ್ಲ. ಆದಾಯ ಡಬಲ್‌ ಮಾಡುತ್ತೇವೆ ಎಂದರು, ಮಾಡಲಿಲ್ಲ. ಬ್ಯಾಂಕ್‌ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು ಕೊಡಲಿಲ್ಲ. ಜನ್‌ ಧನ್‌ ಖಾತೆಯನ್ನು ಬಿಜೆಪಿಯವರು ತೆರೆಸಿದರು, ಜನಾನೂ ಇಲ್ಲ, ಧನವೂ ಇಲ್ಲ. ಬಿಜೆಪಿಯವರು ಕೇವಲ ಬ್ಯಾಂಕ್‌ ಖಾತೆ ತೆರೆಸಿದರು ಆ ಖಾತೆಗೆ ನಾವು 2 ಸಾವಿರ ಹಣ ಹಾಕಿದ್ದೇವೆ. ಉದ್ಯೋಗ ಮೇಳ ನಡೆಸಿ 10 ಸಾವಿರ ಉದ್ಯೋಗ ನೀಡಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ಮೋದಿಯವರು ಮೋದಿ ಗ್ಯಾರಂಟಿ ಎಂದು ನಕಲು ಮಾಡಿದ್ದಾರೆ. ಇಡೀ ದೇಶಕ್ಕೆ ಮಾದರಿಯಾದ ಯೋಜನೆಗಳನ್ನು ನಾವು ನೀಡಿದ್ದೇವೆ.

ಬಿಜೆಪಿ- ದಳದವರು ಗ್ಯಾರಂಟಿ ಯೋಜನೆಗಳನ್ನು ಗೇಲಿ ಮಾಡುತ್ತಿದ್ದರು. ಅತ್ತೆ- ಸೊಸೆ, ಅಣ್ಣ- ತಮ್ಮ ಮಧ್ಯೆ ತಂದು ಹಾಕಿದರು ಎಂದು ಹೇಳುತ್ತಿದ್ದರು. ಆದರೆ ನಾವು ಗ್ಯಾರಂಟಿಯನ್ನೂ ನೀಡಿ ₹1.26 ಲಕ್ಷ ಕೋಟಿ ಹಣವನ್ನು ಅಭಿವೃದ್ಧಿ ಯೋಜನೆಗಳಿಗೆ ನೀಡಿದ್ದೇವೆ. ಅನ್ನಭಾಗ್ಯ, ಬಿಸಿಯೂಟ ಉಳುವವನೆ ಭೂಮಿಯ ಒಡೆಯ ಸೇರಿದಂತೆ ಜನಕಲ್ಯಾಣ ಯೋಜನೆಗಳನ್ನು ನಾವು ನೀಡಿದ್ದೇವೆ.

ವೆಂಕಟೇಶ್ವರನ ಹೆಸರು ಹೇಳುವಾಗ ಲಕ್ಷ್ಮೀ ವೆಂಕಟೇಶ್ವರ, ಪಾರ್ವತಿ ಪರಮೇಶ್ವರ, ಗೌರಿ- ಗಣೇಶ ಎಂದು ಕರೆಯುತ್ತಾರೆ. ಅಂದರೆ ನಮ್ಮ ಸಂಸ್ಕೃತಿಯಲ್ಲಿ ಹೆಣ್ಣೇ ಮೊದಲು. ಯಾವುದೇ ಊರಿಗೆ ಹೋದರು ಅಲ್ಲಿ ಗ್ರಾಮ ದೇವತೆಯೇ ಮೊದಲು. ಮೊದಲು ಹೆಣ್ಣು ಆನಂತರ ಗಂಡು ಅದಕ್ಕೆ ನಮ್ಮ ಸರ್ಕಾರ ಮಹಿಳೆಯರ ಅಭಿವೃದ್ದಿಗೆ ಒತ್ತು ನೀಡಿದೆ. ಗ್ಯಾರಂಟಿ ಯೋಜನೆಗಳು ಮನೆಯನ್ನು ಬೆಳಗುವ ಯೋಜನೆಗಳು. ಮನಗಳನ್ನು ಬೆಳಗುವ ಯೋಜನೆಗಳು.

ಶರತ್‌ ಬಚ್ಚೇಗೌಡರ ಹಿರಿಕರು ಕಳೆದ 70 ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದಿರುವ ವಂಶ ಅವರದು. ಚೆನ್ನಬೈರೇಗೌಡರಿಂದ ಹಿಡಿದು ಬಚ್ಚೇಗೌಡರು, ಅವರ ಮಗ ಶರತ್‌ ಈಗ ಪರಂಪರೆ ಮುಂದುವರೆಸಿಕೊಂಡು ಹೋಗಿದ್ದಾರೆ. ನಾನು ಬಚ್ಚೇಗೌಡರ, ಚಿಕ್ಕೇಗೌಡರ ಜೊತೆ ಶಾಸಕನಾಗಿ ಕೆಲಸ ಮಾಡಿದ್ದೇನೆ.

ಬಚ್ಚೇಗೌಡರಿಗೆ ಆಗ ದಳಕ್ಕೆ ಹೋಗುವುದು ಬೇಡ ಎಂದು ಸಲಹೆ ನೀಡಿದ್ದೆವು. ಆದರೆ ಅವರು ಮಾತು ಕೇಳಲಿಲ್ಲ. ನಾನು, ಸಿ.ಎಂ.ಲಿಂಗಪ್ಪ, ಕೃಷ್ಣಪ್ಪ ಅವರು ಸೇರಿ ಎಂಟಿಬಿ ನಾಗರಾಜ್‌ ಅವರನ್ನು ನೆಟ್ಟೆವು. ಆದರೆ ಅದು ಸರಿಯಾಗಿ ಫಲ ನೀಡಲಿಲ್ಲ. ಆನಂತರ ನಾನು “ನನ್ನ ಮುಂದಿನ ರಣರಂಗ ಹೊಸಕೋಟೆ” ಎಂದು ಹೇಳಿದೆ. ನಾನು 8 ಬಾರಿ ಶಾಸಕನಾಗಿದ್ದೇನೆ. ಶರತ್‌ ಅವರು ಕನಿಷ್ಠ 10 ಬಾರಿ ಶಾಸಕನಾಗುವಂತೆ ತಾವು ಆಶೀರ್ವಾದ ಮಾಡಬೇಕು.

ಸಂಪಾದನೆ ಎಂದರೆ ಕೇವಲ ಹಣ ಮಾತ್ರವಲ್ಲ. ಅನುಭವ, ಗೌರವ, ಸಂಬಂಧ, ಪ್ರೀತಿ ಇದನ್ನು ಸಂಪಾದನೆ ಎನ್ನಬಹುದು. ಶರತ್‌ ಬಚ್ಚೇಗೌಡ ಚಿಕ್ಕ ವಯಸ್ಸಿನಲ್ಲಿಯೇ ಎಲ್ಲರ ಪ್ರೀತಿ ಗಳಿಸಿದ್ದಾರೆ. ಆದ ಕಾರಣಕ್ಕೆ ಅನೇಕ ಸಚಿವರು ಇವರ ಆಹ್ವಾನಕ್ಕೆ ಬಂದಿದ್ದಾರೆ. ಎಲ್ಲರನ್ನು ಹೃದಯದಿಂದ ಗೆದ್ದಿದ್ದಾರೆ. ಹೊಸಕೋಟೆ ರಾಜಕಾರಣವನ್ನ ಕಳೆದ 40 ವರ್ಷಗಳಿಂದ ನೋಡುತ್ತಿದ್ದೇನೆ. ಅಂದಿನ ಹೊಸಕೋಟೆ ಬೇರೆ, ಇಂದಿನ ಹೊಸಕೋಟೆ ಬೇರೆ. ಶಾಂತಿಯ ತೋಟವಾಗಿ ಹೊಸಕೋಟೆ ಬದಲಾಗಿದೆ. ಇದಕ್ಕೆ ಶರತ್‌ ಬಚ್ಚೇಗೌಡರು ಕಾರಣ.

ಹೊಸಕೋಟೆಯಿಂದ ಸಿಲ್ಕ್‌, ಮಿಲ್ಕ್‌, ತರಕಾರಿ ಬೆಂಗಳೂರು ಸೇರಿದಂತೆ ದೇಶದ ನಾನಾ ಭಾಗಗಳಿಗೆ ಹೋಗುತ್ತಿದೆ. ಇಲ್ಲಿನ ಭೂಮಿಯ ಬೆಲೆಯೂ ಹೆಚ್ಚಾಗಿದೆ. 30 ಕೋಟಿ ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಾಣವಾಗುತ್ತಿದೆ. ಹೊಸಕೋಟೆ ಬೆಂಗಳೂರಿನ ಹೆಬ್ಬಾಗಿಲು. ಕನಕಪುರ, ಚನ್ನಪಟ್ಟಣ, ರಾಮನಗರ, ನೆಲಮಂಗಲ, ಹೊಸಕೋಟೆ ಎಲ್ಲವೂ ಬೆಂಗಳೂರಿಗೆ ಸೇರಿವೆ. ಬೆಂಗಳೂರಿನಲ್ಲಿ ಸಿಗುವ ಸೌಲಭ್ಯಗಳು ಇಲ್ಲೂ ಸಿಗಲಿವೆ. ಮೆಟ್ರೋ, ಕುಡಿಯುವ ನೀರು ಸೇರಿದಂತೆ ಎಲ್ಲಾ ಮೂಲಸೌಕರ್ಯಗಳು ನಿಮಗೆ ಸಿಕ್ಕೆಸಿಗುತ್ತವೆ. ಹೊಸಕೋಟೆಗೆ ಎತ್ತಿನಹೊಳೆ ನೀರನ್ನು ಸ್ವಲ್ಪ ದಿನದಲ್ಲೇ ನೀಡುತ್ತೇವೆ.

ಹೊಸಕೋಟೆಯ ಜನ ನಮ್ಮ ಕೈ ಬಿಡುವುದಿಲ್ಲ ಎಂಬ ನಂಬಿಕೆ ಇದೆ. ಹೊಸಕೋಟೆ ಕ್ಷೇತ್ರವನ್ನು ಶರತ್‌ ಬಚ್ಚೇಗೌಡ ಅವರು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತಿದ್ದಾರೆ. ಶರತ್‌ ಅವರು ಕಾಂಗ್ರೆಸ್‌ ಸರ್ಕಾರಕ್ಕೆ ಶಕ್ತಿ, ಆಸ್ತಿಯಾಗಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಶರತ್‌ ಬಚ್ಚೇಗೌಡರಿಗೆ ನೀಡಿದ್ದಕ್ಕಿಂತ ಹೆಚ್ಚು ಮತವನ್ನು ನೀಡಿ ಕಾಂಗ್ರೆಸ್‌ ಅಭ್ಯರ್ಥಿಗೆ ನೀಡಿ ಗೆಲ್ಲಿಸಬೇಕು.

ನಾವು ನಿಮ್ಮನ್ನು ನಂಬಿದ್ದೇವೆ. ನೀವು ನಮ್ಮ ಕೈ ಬಿಡಬಾರದು. ನಮ್ಮನ್ನು ಮರೆತರೇ ನಿಮಗೆ ನಷ್ಟ. ಶರತ್‌ ಅವರಿಗೆ, ನಮಗೆ ಅವಮಾನ ಮಾಡಬೇಡಿ, ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

Related Articles

Back to top button