*ಖರ್ಗೆ ಬಗ್ಗೆ ಪ್ರಧಾನಿ ಮೋದಿ ಟೀಕೆ ವಿಚಾರ; ಡಿ.ಕೆ.ಶಿವಕುಮಾರ್ ಕೆಂಡಾಮಂಡಲ; ಬಿಜೆಪಿ ಅಧ್ಯಕ್ಷರಿಗೂ ಟಾಂಗ್ ನೀಡಿದ ಕೆಪಿಸಿಸಿ ಅಧ್ಯಕ್ಷ*
ಪ್ರಗತಿವಾಹಿನಿ ಸುದ್ದಿ; ಹಾಸನ: ಪ್ರಧಾನಿ ನರೇಂದ್ರ ಮೋದಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ರಬ್ಬರ್ ಸ್ಟಾಂಪ್ ಅಧ್ಯಕ್ಷರು ಎನ್ನುವ ರೀತಿಯಲ್ಲಿ ಬಿಂಬಿಸಿ, ಅವಹೇಳನ ಮಾಡಿದ್ದಾರೆ. ಪ್ರಧಾನಮಂತ್ರಿ ಸ್ಥಾನಕ್ಕೆ ನಾವು ಗೌರವ ನೀಡುತ್ತೇವೆ. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ಬಾಬು ಜಗಜೀವನ್ ರಾಮ್, ರಾಜೀವ್ ಗಾಂಧಿ ಅವರು ಕೂತ ಜಾಗದಲ್ಲಿ ಖರ್ಗೆ ಅವರು ಕೂತಿದ್ದಾರೆ ಅವರ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗೌರವ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಹಾಸನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಖರ್ಗೆ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೆಳೆದು ನಿಂತಿದ್ದಾರೆ. ಒಬ್ಬ ದಲಿತ ನಾಯಕ ಗುಲ್ಬರ್ಗ ಪಟ್ಟಣ ಪಾಲಿಕೆ ಸದಸ್ಯ ಸ್ಥಾನದಿಂದ ಹಿಡಿದು 50 ವರ್ಷಗಳ ಕಾಲ ನಿರಂತರವಾಗಿ ಸಂಸದೀಯ ಜವಾಬ್ದಾರಿಯನ್ನು ನಿಭಾಯಿಸಿ ಸ್ವಂತ ಸಾಮರ್ಥ್ಯದ ಮೇಲೆ ಬೆಳೆದಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿ ಆಯ್ಕೆಯಾಗಿರುವವರ ವಿರುದ್ಧ ಈ ರೀತಿ ಮಾತನಾಡುವುದು ಸರಿಯಲ್ಲ. ಬಿಜೆಪಿಯ ಅಧ್ಯಕ್ಷರ ಬಗ್ಗೆ ನಾವು ಮಾತನಾಡುವುದಿಲ್ಲ. ಅವರು ಹೇಗೆ ಅಧ್ಯಕ್ಷರಾದರೂ, ಅವರ ಕಾರ್ಯವೈಖರಿ ಹೇಗಿದೆ ಎಂದು ನಾನು ಚರ್ಚೆ ಮಾಡುವುದಿಲ್ಲ. ಆದರೆ ನಮ್ಮ ಪಕ್ಷದಲ್ಲಿ ಸ್ವತಂತ್ರ್ಯವಾಗಿ ಕೆಲಸ ಮಾಡುತ್ತಿರುವ ಖರ್ಗೆ ಅವರ ಬಗ್ಗೆ ಪ್ರಧಾನಮಂತ್ರಿಗಳ ಮಾತು ಖಂಡನೀಯ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗೌರವ ತರುವ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಗಾಂಧಿ ಕುಟುಂಬ ಕಷ್ಟ ಕಾಲದಲ್ಲಿ ಪಕ್ಷವನ್ನು ಒಗ್ಗಟ್ಟಾಗಿ ಕಾಪಾಡಿಕೊಂಡು ಬಂದಿದೆ. ಕೇಸರಿ ಅವರು ಅಧ್ಯಕ್ಷ ಸ್ಥಾನದಿಂದ ಇಳಿದ ನಂತರ ಸೋನಿಯಾ ಗಾಂಧಿ ಅವರು ಪಕ್ಷದ ಜವಾಬ್ದಾರಿ ಹೊತ್ತುಕೊಂಡರು. ಯಪಿಎ 1 ಮತ್ತು 2ನೇ ಸರ್ಕಾರದ ಅವಧಿಯಲ್ಲಿ ಅವರಿಗೆ ಪ್ರಧಾನಮಂತ್ರಿಯಾಗುವ ಅವಕಾಶ ಸಿಕ್ಕಿತ್ತಾದರೂ ಅದನ್ನು ದೇಶದ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೆ ತ್ಯಾಗ ಮಾಡಿದರು. ಆ ಸಮಯದಲ್ಲಿ ಅವರಾಗಲಿ ಹಾಗೂ ರಾಹುಲ್ ಗಾಂಧಿ ಅವರಾಗಲಿ ಯಾವುದೇ ಹುದ್ದೆ ಪಡೆಯಬಹುದಾಗಿತ್ತು. ಆದರೆ ಪಡೆಯಲಿಲ್ಲ. ವಯಸ್ಸಾದ ಮಹಿಳೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಬಿಸಿಲಲ್ಲಿ ಛತ್ರಿ ಹಿಡಿದ ವಿಚಾರವನ್ನು ಇಟ್ಟುಕೊಂಡು ಪ್ರಧಾನಮಂತ್ರಿಗಳು ಹೀಗೆ ಟೀಕೆ ಮಾಡಿರುವುದು ಖಂಡನೀಯ.
ಹಿಂದೆ ನಮ್ಮ ಸರ್ಕಾರ 6ನೇ ವೇತನ ಆಯೋಗದ ವರದಿಯನ್ನು ಜಾರಿ ಮಾಡಿತ್ತು. ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇಂದು ಕೂಡ ಅಡುಗೆ ಅನಿಲ ಸಿಲಿಂಡರ್ ಬೆಲೆ 50 ರೂ. ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು 7ನೇ ವೇತನ ಆಯೋಗದ ವರದಿ ಜಾರಿಗೆ ಅರ್ಹರಾಗಿದ್ದಾರೆ. ಈ ಹಿಂದೆ ಈ ವಿಚಾರವಾಗಿ ಮಾತು ನೀಡಿದ್ದರು. ಆದರೆ ಅವರು ನುಡಿದಂತೆ ನಡೆಯಲಿಲ್ಲ. ಈ ಹಿಂದೆ ಅವರು ತಮ್ಮ ಪ್ರಣಾಳಿಕೆಯಲ್ಲಿ 600 ಭರವೆಸೆ ನೀಡಿದ್ದು 550 ಅನ್ನು ಈಡೇರಿಸಲು ವಿಫಲರಾಗಿದ್ದಾರೆ. ಈ ವಿಚಾರವಾಗಿ ನಾವು ಪ್ರಶ್ನೆ ಕೇಳುತ್ತಿದ್ದರೂ ಉತ್ತರ ನೀಡಲಾಗುತ್ತಿಲ್ಲ.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುವುದು ಖಚಿತ. ಅದರಲ್ಲಿ ಯಾವುದೇ ಅನುಮಾನ ಬೇಡ. ನಾವು ಅಧಿಕಾರಕ್ಕೆ ಬಂದ ನಂತರ ಈ 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸುತ್ತೇವೆ. ನಾವು ಸರ್ಕಾರಿ ನೌಕರರ ನೋವು, ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ. ಅವರು ತಮ್ಮ ಹಕ್ಕನ್ನು ಕೇಳುತ್ತಿದ್ದು, ಅದನ್ನು ನೀಡಲು ಕಾಂಗ್ರೆಸ್ ಬದ್ಧವಾಗಿದೆ. ಅವರ ಹೋರಾಟ ಅವರ ಮೂಲಭೂತ ಹಕ್ಕು. ಈ ಸರ್ಕಾರ ರಾಜ್ಯವನ್ನು ಭ್ರಷ್ಟಾಚಾರದಲ್ಲಿ ಮುಳುಗಿಸಿದೆ.
ಪ್ರಧಾನಿಗಳು ಯಡಿಯೂರಪ್ಪನವರಿಗೆ ತಲೆಬಾಗಿ ನಮಿಸಿದರೆ ಸಾಲದು. ಯಡಿಯೂರಪ್ಪ ಅವರ ಕಣ್ಣಲ್ಲಿ ನೀಕು ಹಾಕಿಸಿದ್ದು ಯಾಕೆ? ಎಂಬ ವಿಚಾರವಾಗಿ ಸ್ಪಷ್ಟತೆ ನೀಡಬೇಕು. ಅವರ ಕುಟುಂಬಕ್ಕೆ ತನಿಖೆ ಸಂಸ್ಥೆಗಳ ವಿಚಾರಣೆ ಹೆಸರಲ್ಲಿ ನೀಡಿದ ಕಿರುಕುಳದ ಬಗ್ಗೆ ಮಾತನಾಡಲಿ. ಅವರ ನಾಯಕತ್ವದಲ್ಲಿ ಚುನಾವಣೆ ನಡೆಸುವುದೇ ಆದರೆ, ಅವರನ್ನು ಇವತ್ತೇ ಮುಖ್ಯಮಂತ್ರಿಯನ್ನಾಗಿ ಮಾಡಲಿ.
ಆರಂಭದಲ್ಲಿ ಬೊಮ್ಮಾಯಿ ನಾಯಕತ್ವದಲ್ಲಿ ಚುನಾವಣೆ ಎಂದರು. ನಂತರ ಪ್ರಧಾನಿ ಮುಖ ನೋಡಿ ಮತ ಹಾಕಿ ಎಂದರು. ಈಗ ಯಡಿಯೂರಪ್ಪ ಅವರ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಬಿಜೆಪಿ ತನ್ನ ನಾಯಕರನ್ನು ಬಳಸಿ ಬಿಸಾಡುವ ಸಿದ್ಧಾಂತ ಹೊಂದಿದೆ. ಈ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಇಲ್ಲದ ಪಕ್ಷವಾಗಿದೆ. ಬೊಮ್ಮಾಯಿ ಅವರನ್ನು ಬಿಜೆಪಿಯವರೇ ನಾಯಕ ಎಂದು ಒಪ್ಪಿಕೊಳ್ಳುತ್ತಿಲ್ಲ. ಕೇಂದ್ರ ನಾಯಕರು ಇಲ್ಲಿ ಬಂದು ಚುನಾವಣೆ ಮಾಡಲು ಸಾಧ್ಯವಿಲ್ಲ. ಈ ಸರ್ಕಾರದ ಅವಧಿ ಇನ್ನು 30 ದಿನ ಮಾತ್ರ. ನಂತರ ನಿಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದ ಕಳಂಕ ತೊಡೆದು ಹಾಕಿ ನಾವು ಕೊಟ್ಟ ಮಾತು ಉಳಿಸಿಕೊಂಡು ದಕ್ಷ ಆಡಳಿತ ನೀಡಲಿದೆ.
ಪ್ರಶ್ನೋತ್ತರ;
ವೀರೇಂದ್ರ ಪಾಟೀಲ್ ಹಾಗೂ ನಿಜಲಿಂಗಪ್ಪ ಅವರಿಗೆ ಕಾಂಗ್ರೆಸ್ ಅಪಮಾನ ಮಾಡಿತ್ತು ಎಂಬ ಬಿಜೆಪಿ ಆಪಾದನೆ ಕುರಿತ ಪ್ರಶ್ನೆಗೆ, ‘ಮೋದಿ ಅವರು ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ವಿಚಾರ ಮಾತನಾಡುವ ಮುನ್ನ, ಅವರ ಪಕ್ಷದಲ್ಲಿ ಲಾಲ್ ಕೃಷ್ಣ ಆಡ್ವಾಣಿ, ಮುರಳಿ ಮನೋಹರ್ ಜೋಷಿ ಸೇರಿದಂತೆ ಅವರ ನಾಯಕರಿಗೆ ಏನು ಮಾಡಿದರು ಎಂದು ನೋಡಿಕೊಳ್ಳಲಿ. ನಾವು ನಿಜಲಿಂಗಪ್ಪ ಅವರಿಗೆ ಯಾವ ಅನ್ಯಾಯ ಮಾಡಿದ್ದೇವೆ? ವೀರೇಂದ್ರ ಪಾಟೀಲ್ ಅವರ ಕಾಲದಲ್ಲಿ ನಾನು ಶಾಸಕನಾಗಿದ್ದೆ. ವೀರೇಂದ್ರ ಪಾಟೀಲ್ ಅವರ ಆರೋಗ್ಯ ಏನಾಗಿತ್ತು ಎಂದು ನನಗೆ ಗೊತ್ತಿದೆ. ನಾನು ರಾಜೀವ್ ಗಾಂಧಿ ಅವರ ಜತೆ ಆಸ್ಪತ್ರೆಗೆ ಹೋಗಿದ್ದೆ. ಅವರ ಆರೋಗ್ಯ ಪರಿಸ್ಥಿತಿ ವಿಚಾರಿಸಿದರು. ಅವರು ಚೇತರಿಸಿಕೊಳ್ಳುವ ಸ್ಥಿತಿ ಇರಲಿಲ್ಲ. ಹೀಗಾಗಿ ಚರ್ಚೆ ಮಾಡಿ, ವೀರೇಂದ್ರ ಪಾಟೀಲ್ ಅವರನ್ನು ಬದಲಿಸುವ ತೀರ್ಮಾನ ಮಾಡಲಾಯಿತು. ಅವರ ಕುಟುಂಬದ ಸದಸ್ಯರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಪ್ರಧಾನಮಂತ್ರಿಗಳು ಯುವಕರಿಗೆ ಉದ್ಯೋಗ ನೀಡಿರುವ ಬಗ್ಗೆ, ರೈತರ ಆದಾಯ ಡಬಲ್ ಮಾಡುವ ಬಗ್ಗೆ, ಅಭಿವೃದ್ಧಿ ಬಗ್ಗೆ ಮಾತನಾಡಬೇಕು. ಭಾವನೆ ಬಗ್ಗೆ ಮಾತನಾಡುವ ಬದಲು ಬದುಕಿನ ಬಗ್ಗೆ ಮಾತನಾಡಬೇಕು’ ಎಂದರು.
ಹಾಸನದಲ್ಲಿ ನೀವು ಸ್ವರೂಪ್ ಅವರ ಜತೆ ಸಂಪರ್ಕದಲ್ಲಿದ್ದು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆಯೇ ಎಂದು ಕೇಳಿದಾಗ, ‘ರಾಜಕೀಯದಲ್ಲಿ ಎಲ್ಲ ಸಾಧ್ಯತೆಗಳ ಬಗ್ಗೆಯೂ ಚರ್ಚೆ ಆಗುತ್ತದೆ. ನಾನು ಎ. ಮಂಜು ಅವರ ಜತೆ ಮಾತನಾಡಿದ್ದು ನಿಜ. ಅವರು ಹೋರಾಟ ಮಾಡುತ್ತಿರುವುದು ನಿಜ. ರೇವಣ್ಣ ಅವರ ಜತೆ ಮಂಜು, ನಾವು ಮಂಜು ಅವರ ಜತೆ ಮಾತನಾಡುತ್ತಿರುವುದು ನಿಜ. ಸ್ವರೂಪ್ ಎಲ್ಲ ಪಕ್ಷದ ಜತೆ ಮಾತನಾಡುತ್ತಿದ್ದಾರೆ’ ಎಂದರು.
ಎ.ಟಿ ರಾಮಸ್ವಾಮಿ ಅವರು ನಿಮ್ಮ ಜತೆ ಮಾತನಾಡಿದ್ದಾರಾ ಎಂಬ ಪ್ರಶ್ನೆಗೆ, ‘ನಿಜ, ಅವರು ನನ್ನನ್ನು ಭೇಟಿ ಮಾಡಿ ಮಾತನಾಡಿ ಮನವಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಈ ಬಗ್ಗೆ ಇನ್ನು ತೀರ್ಮಾನ ಮಾಡಬೇಕಿದೆ’ ಎಂದರು.
ಅರಸೀಕೆರೆ ಶಾಸಕ ಶಿವಲಿಂಗೇಗೌಡರು ಯಾವಾಗ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಪ್ರಶ್ನೆಗೆ, ‘ಈ ವಿಚಾರವಾಗಿ ನೀವು ಅವರನ್ನೇ ಕೇಳಬೇಕು. ಅವರು ಈಗಾಗಲೇ ಹೇಳಿಕೊಂಡಿರುವಂತೆ ಮಾ.5 ರಂದು ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಕ್ಕೆ ಸಿದ್ದರಾಮಯ್ಯ ಅವರು ಹೋಗುತ್ತಿದ್ದಾರೆ’ ಎಂದರು.
ಎ.ಮಂಜು ಅವರನ್ನು ಕಾಂಗ್ರೆಸ್ ಗೆ ಮತ್ತೆ ಕರೆತರುತ್ತೀರಾ ಎಂಬ ಪ್ರಶ್ನೆಗೆ, ‘ರಾಜಕೀಯ ಎಂದರೆ ಸಾಧ್ಯತೆಗಳ ಕಲೆ. ರೇವಣ್ಣ, ಮಂಜು ಹಾಗೂ ಪ್ರಜ್ವಲ್ ಅವರೇ ಈಗ ಮಾತನಾಡುತ್ತಿದ್ದಾರೆ. ಈ ನಿರ್ಧಾರವನ್ನು ಅವರ ಕಾರ್ಯಕರ್ತರು ಒಪ್ಪುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ನಾಯಕರು ಒಪ್ಪಿದ್ದಾರೆ. ಅವರ ನಡುವಣ ಕಾನೂನು ಸಮರ ಈಗ ತೀರ್ಪಿನ ಹಂತಕ್ಕೆ ಬಂದಿದ್ದು, ನನ್ನ ಪ್ರಕಾರ ಈಗ ಆ ಕೇಸ್ ಹಿಂಪಡೆಯಲು ಸಾಧ್ಯವಿಲ್ಲ’ ಎಂದರು.
ಟಿಕೆಟ್ ಹಂಚಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈ ತಿಂಗಳು 7-8 ರಂದು ನಮ್ಮ ಪಕ್ಷದ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಲಿದೆ. ನಂತರ ನಾವು ಅಂತಿಮ ಪಟ್ಟಿ ಪ್ರಕಟಿಸುತ್ತೇವೆ’ ಎಂದರು.
ತನ್ವೀರ್ ಸೇಠ್ ಅವರು ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿರುವ ವಿಚಾರವಾಗಿ ಕೇಳಿದಾಗ, ‘ಅವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ತೀರ್ಮಾನಿಸಿದ್ದಾರೆ. ಅವರ ಆರೋಗ್ಯದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಪಕ್ಷದ ಆಧಾರಸ್ತಂಭ. ಅವರು ಈ ವಿಚಾರವಾಗಿ ನನ್ನ ಹಾಗೂ ಸಿದ್ದರಾಮಯ್ಯ ಅವರ ಬಳಿ ಮಾತನಾಡಿದ್ದಾರೆ. ಈಗ ಅವರು ಕಾರ್ಯಕರ್ತರ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ’ ಎಂದರು.
ಡಿಸೆಂಬರ್ ಅಂತ್ಯದಲ್ಲಿ ಮೊದಲ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದಿರಿ, ಈಗ ಪಟ್ಟಿ ಬಿಡುಗಡೆಗೆ ಗಡವು ಇಟ್ಟುಕೊಂಡಿದ್ದೀರಾ ಎಂಬ ಪ್ರಶ್ನೆಗೆ, ‘ಈಗ ನಾವು ಸುಮಾರು 150 ಕ್ಷೇತ್ರಗಳಲ್ಲಿನ ಟಿಕೆಟ್ ಪಟ್ಟಿ ಸಿದ್ಧ ಮಾಡಿದ್ದು, ಸ್ಕ್ರೀನಿಂಗ್ ಕಮಿಟಿ ಸಭೆ ನಂತರ ಪ್ರಕಟಿಸುತ್ತೇವೆ’ ಎಂದರು.
ನಾನು ಕಾಂಗ್ರೆಸ್ ಗೆ ಹೋಗಲು ಬಯಸಿದ್ದೆ, ಅವರು ಸ್ಪಂದಿಸದ ಕಾರಣ ಜೆಡಿಎಸ್ ಜತೆ ಮಾತನಾಡುತ್ತಿದ್ದೇನೆ ಎಂಬ ಮಂಜು ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಅವರು ನಮ್ಮ ಸ್ನೇಹಿತರು. ಅವರು ನಾವು ಏನು ಮಾತನಾಡಿದ್ದೇವೆ ಎಂದು ನಾನು ಬಹಿರಂಗಪಡಿಸಲು ಸಾಧ್ಯವಿಲ್ಲ. ಪಕ್ಷದ ಅಧ್ಯಕ್ಷನಾಗಿ ನಾನು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಮಾತನಾದಿದ್ದೇವೆ. ಬಾಂದವ್ಯ ಚೆನ್ನಾಗಿಲ್ಲವಾದರೆ ಮಾತನಾಡುತ್ತಿದ್ದೆವಾ?’ ಎಂದರು.
ಸರ್ಕಾರಿ ನೌಕರರ ಹೋರಾಟದ ಬಗ್ಗೆ ನೀವು ಏನು ಹೇಳುತ್ತೀರಿ ಎಂದು ಕಳಿದಾಗ, ‘ಈ ಸರ್ಕಾರ ಯಾವುದೇ ವರ್ಗದ ಜನರಿಗೂ ನೆರವು ನೀಡುವುದಿಲ್ಲ. ಅವರು 40% ಕಮಿನ್ ವಿಚಾರ ಬಿಟ್ಟರೆ ಬೇರೆ ಯಾವುದೇ ವಿಚಾರದ ಬಗ್ಗೆ ಆಸಕ್ತಿ ಇಲ್ಲ. ಈಗ ಹಳೆ ಪಿಂಚಣಿ ವಿಚಾರ ಚರ್ಚೆ ನಡೆಯುತ್ತಿದೆ. ಈ 7ನೇ ವೇತನ ಆಯೋಗ ಜಾರಿ ವಿಚಾರ ಬಂದಿದೆ. ಬೆಲೆ ಏರಿಕೆ ಹೆಚ್ಚಾಗಿದೆ. ಅವರು ಆದಾಯ ಡಬಲ್ ಮಾಡುತ್ತೇವೆ, ಬೆಂಬಲ ಬೆಲೆ ನೀಡುವುದಾಗಿ ಹೇಳಿದ್ದರು. ಅದನ್ನು ಜಾರಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಇವರು ಜಾತಿ ಧರ್ಮದ ವಿಚಾರವಾಗಿ ಚರ್ಚೆ ಮಾಡುತ್ತಾರೆ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಯಾಗಿದೆ ಸಂತೋಷ. ಆದರೆ ಶಿವಮೊಗ್ಗದಲ್ಲಿ ಕನಿಷ್ಠ 500 ಕೋಟಿ ಬಂಡಾಳ ಹೂಡಿಕೆ ಮಾಡಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಮಂಗಳೂರು, ಉಡುಪಿಯಲ್ಲಿ ಯಾಕೆ ಬಂಡವಾಳ ಹೂಡಿಕೆಯಾಗುತ್ತಿಲ್ಲ. ಹೂಡಿಕೆದಾರರಿಗೆ ಶಾಂತಿಯುತ ಪರಿಸರ ಬೇಕು. ಅದು ಸಿಗುತ್ತಿಲ್ಲ. ಬಂಡವಾಳ ಹೂಡಿಕೆ ಸಮಾವೇಶದಲ್ಲಿ 10 ಲಕ್ಷ ಕೋಟಿ ಬಂತು ಎನ್ನುತ್ತಾರೆ. ಎಲ್ಲೆಲ್ಲಿ ಹೂಡಿಕೆಯಾಗುತ್ತಿದೆ ಎಂಬ ಪಟ್ಟಿ ಬಿಡುಗಡೆ ಮಾಡಲಿ’ ಎಂದರು.
https://pragati.taskdun.com/d-k-shivakumarhasanaprajadhwani/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ