*ಇಂದಿರಾ ಗಾಂಧಿ ಅವರ ಹೆಸರು ಈ ದೇಶದ ಪ್ರತಿಯೊಬ್ಬ ಬಡ ಜನತೆಯ ಉಸಿರು: ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಇಂದಿರಾಗಾಂಧಿ ಅವರ ಹೆಸರು ಈ ದೇಶದ ಪ್ರತಿಯೊಬ್ಬ ಬಡ ಜನತೆಯ ಉಸಿರು. ಇಂದಿರಾಗಾಂಧಿ ಅವರು ಈ ದೇಶದ ಐಕ್ಯತೆ, ಸಮಗ್ರತೆ ಮತ್ತು ಶಾಂತಿಗೆ ದೊಡ್ಡ ಕೊಡುಗೆ ನೀಡಿ ಹುತಾತ್ಮರಾದವರು. ಅವರು ಪ್ರಧಾನಿಗಳಾಗಿದ್ದಾಗ ಈ ದೇಶಕ್ಕೆ ನೀಡಿದ ಕಾರ್ಯಕ್ರಮಗಳು ಇಂದಿಗೂ ಜೀವಂತವಾಗಿವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬೆಂಗಳೂರಿನ ಜೆ ಪಿ ನಗರದ ಸಾರಕ್ಕಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡಿದರು.
“ಬಡತನ ನಿವಾರಣೆಗೆ ದಿಟ್ಟ ನಿರ್ಧಾರ ತೆಗೆದುಕೊಂಡರು. ಇಂದಿರಾ ಗಾಂಧಿಯವರ ಉಳುವವನೇ ಭೂಮಿಯ ಒಡೆಯ ಯೋಜನೆಯನ್ನು ರಾಜ್ಯದಲ್ಲಿ ದೇವರಾಜ ಅರಸು ಅವರು ಜಾರಿಗೆ ತಂದು ಬಡವರಿಗೆ ಭೂಮಿ ಹಂಚಿದರು. ಇದರಿಂದ ಲಕ್ಷಾಂತರ ಜನ ಭೂಮಿ ಪಡೆಯುವಂತಾಯಿತು. ಪ್ರತಿಯೊಂದು ತಾಲ್ಲೂಕಿನಲ್ಲಿ 10-15 ಸಾವಿರ ರೈತರು ಇದರ ಫಲಾನುಭವಿಗಳಾದರು. ಇಡೀ ದೇಶದಲ್ಲಿಯೇ ಇಂತಹ ಭೂಕ್ರಾಂತಿ ಎಲ್ಲಿಯೂ ಆಗಿಲ್ಲ” ಎಂದರು.
“ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಿ ಜನಸಾಮಾನ್ಯರ ಬದುಕಿಗೆ ನೆರವಾದರು. ಸಣ್ಣ ಆರ್ಥಿಕ ಬೆಂಬಲಕ್ಕೂ ಕಷ್ಟ ಪಡುತ್ತಿದ್ದ ಜನರಿಗೆ ಸಾಲ ದೊರೆಯುವಂತಾಯಿತು. ಆರ್ಥಿಕ ಸಂಕಷ್ಟ ಶಮನಕ್ಕೆ ಈ ನಿರ್ಧಾರ ನಾಂದಿಯಾಯಿತು. ಇದರಿಂದ ಕೇಂದ್ರ ಸಚಿವರಾಗಿದ್ದ ಜನಾರ್ಧನ ಪೂಜಾರಿಯವರು ಸಾಲ ಮೇಳ ಏರ್ಪಡಿಸಿ ರಸ್ತೆಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲರಿಗೂ 5 ರಿಂದ 10 ಸಾವಿರದ ತನಕ ಸಾಲ ನೀಡಿ ದೊಡ್ಡ ಕ್ರಾಂತಿಕಾರಕ ನಡೆಗೆ ಕಾರಣರಾದರು. ವಿಧಾನಸಭೆ ಚುನಾವಣೆ ಸೋತಿದ್ದ ನಾನು ನನ್ನ ಕ್ಷೇತ್ರದಲ್ಲಿ ಸಾಲಮೇಳ ಏರ್ಪಡಿಸಿ ಜಿಲ್ಲಾ ಪಂಚಾಯತಿ ಚುನಾವಣೆ ಗೆದ್ದು ಬಂದೆನು” ಎಂದರು.
“ಭಾರತ್ ಜೋಡೋ ಯಾತ್ರೆ ವೇಳೆ ಮೊಣಕಾಲ್ಮೂರು ಬಳಿ ಅಜ್ಜಿಯೊಬ್ಬರು ಬಂದು ‘ನಿಮ್ಮ ಅಜ್ಜಿ ನೀಡಿದ ಭೂಮಿಯಲ್ಲಿ ಬೆಳೆದ ಬೆಳೆ’ ರಾಹುಲ್ ಗಾಂಧಿ ಅವರಿಗೆ ಸೌತೆಕಾಯಿ ನೀಡಿ ಆಶೀರ್ವಾದ ಮಾಡಿದ್ದರು. ಇದು ಸಾಧ್ಯವಾಗಿದ್ದು ಕಾಂಗ್ರೆಸ್ ಪಕ್ಷ ಹಾಗೂ ಇಂದಿರಾಗಾಂಧಿ ಅವರಿಂದ” ಎಂದರು.
“ಅಂಗನವಾಡಿ ಯೋಜನೆ 50 ವರ್ಷ ಪೂರೈಸಿದೆ. 50 ವರ್ಷದ ಹಿಂದೆ ದೇಶದ ಪುಟ್ಟ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು, ಉತ್ತಮ ಪ್ರಾಥಮಿಕ ಶಿಕ್ಷಣ ನೀಡಬೇಕು ಎಂದು ಪ್ರಾರಂಭ ಮಾಡಿದರು. ಇವುಗಳನ್ನು ಯಾವ ಸರ್ಕಾರವೂ ನಿಲ್ಲಿಸಲು ಆಗಿಲ್ಲ. ವಿಧವಾ, ವೃದ್ಧಾಪ್ಯ ಪಿಂಚಣಿ ನೀಡಿದ್ದು ಇಂದಿರಾಗಾಂಧಿ ಅವರು” ಎಂದರು.
ಟ್ರಂಪ್ ಅವರು ಹೇಳಿದ್ದೇ ಒಂದು ಮೋದಿಯವರು ಹೇಳಿದ್ದೇ ಒಂದು
“ಯುದ್ದ ವಿರಾಮದ ಬಗ್ಗೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಹೇಳಿದ್ದೇ ಒಂದು ಮೋದಿಯವರು ಹೇಳಿದ್ದೇ ಒಂದು. ಆದರೆ ಇಂದಿರಾಗಾಂಧಿ ಅವರು ‘ನನ್ನನ್ನು ಹಾಗೂ ಈ ದೇಶವನ್ನೂ ಯಾರೂ ಸಹ ಹೆದರಿಸಲು ಸಾಧ್ಯವಿಲ್ಲ’ ಎಂದು ಗುಡುಗಿದ್ದರು. ನನ್ನ ಕೊನೆಯ ರಕ್ತದ ಹನಿ ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿಗೆ ಮೀಸಲು ಎಂದಿದ್ದರು” ಎಂದರು.
“ಪ್ರಪಂಚದ ನೂರಾರು ದೇಶಗಳು ಇಂದಿರಾಗಾಂಧಿಯವರಿಗೆ ಗೌರವ ನೀಡುತ್ತಿದ್ದವು. ಉಕ್ಕಿನ ಮಹಿಳೆ ಎಂದು ಕರೆದವು. ಇವರು ಎಂದಿಗೂ ಸೋಲು ಗೆಲುವಿನ ಬಗ್ಗೆ ಚಿಂತೆ ಮಾಡಲಿಲ್ಲ. ಚಿಕ್ಕಮಗಳೂರಿನಲ್ಲಿ ಉಪಚುನಾವಣೆಯಗೆ ನಿಂತು ಗೆಲುವು ಸಾಧಿಸಿ ಮತ್ತೆ ದೇಶದಲ್ಲಿ ಪಕ್ಷ ಕಟ್ಟಿದರು. ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದ ಜನತಾದಳದವರಿಗೆ ದೇಶ ಮುನ್ನಡೆಸಲು ಆಗಲಿಲ್ಲ. ನಂತರ ಇಂದಿರಾಗಾಂಧಿ ಅವರು ಮತ್ತೆ ಚುನಾವಣೆ ಗೆದ್ದು ಈ ದೇಶದ ಚುಕ್ಕಾಣಿ ಹಿಡಿದರು” ಎಂದರು.
ಭಾವಚಿತ್ರ ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ
“ಕಾಂಗ್ರೆಸ್ ಪಕ್ಷಕ್ಕೆ ಇಂದಿರಾಗಾಂಧಿ ಅವರ ಹೆಸರೆಂದರೆ ಉಸಿರಿದ್ದಂತೆ. ಗ್ರಾಮೀಣ ಭಾಗದ ಹಲವಾರ ಮನೆಗಳಲ್ಲಿ ಈಗಲೂ ಇಂದಿರಾಗಾಂಧಿಯವರು ಭಾವಚಿತ್ರ ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ. ನಾನು ಸಹ ನನ್ನ ಹುಟ್ಟೂರು ದೊಡ್ಡ ಆಲಹಳ್ಳಿಯಲ್ಲಿ ಇಂದಿರಾಗಾಂಧಿ ಚಿತ್ರಮಂದಿರ ಪ್ರಾರಂಭ ಮಾಡಿದ್ದೆ. ಇವರ ನಿಧನದ ನಂತರ ರಾಜೀವ್ ಗಾಂಧಿಯವರು ಅಂದು ನನ್ನನ್ನು ಸೇರಿದಂತೆ ವಿನಯ್ ಕುಮಾರ್ ಸೊರಕೆಯಾಗಿದಾಗಿ ಸುಮಾರು 50 ಕ್ಕೂ ಹೆಚ್ಚು ಯುವಕರಿಗೆ ಅವಕಾಶ ನೀಡಿ ಬೆಳೆಸಿದರು” ಎಂದರು.
“ಯುವ ಕಾಂಗ್ರೆಸ್ ಸಮಾವೇಶಕ್ಕೆ ನಾವು ರೈಲಿನಲ್ಲಿ ಹೊರಟಿದ್ದೆವು. ಬೆಂಗಳೂರು ಬಿಟ್ಟು ಹದಿನೈದು ಕಿಲೋಮೀಟರ್ ದೂರ ಹೋಗಿದ್ದೆವು. ಆ ಸಮಯದಲ್ಲಿ ಇಂದಿರಾಗಾಂಧಿ ಅವರ ಮೇಲೆ ಗುಂಡಿನ ದಾಳಿಯಾಗಿದೆ ಎನ್ನುವ ಸುದ್ದಿ ಬಂದಿತು. ಈ ಘಟನೆಯಿಂದ ಇಡೀ ದೇಶ, ಪ್ರಪಂಚವೇ ದಿಗ್ಬ್ರಮೆಗೆ ಒಳಗಾಯಿತು. ನಂಬಿದ ಆರಕ್ಷಕರೇ ಹತ್ಯೆ ಮಾಡಿದಾಗ ಯಾರನ್ನು ನಂಬುವುದು ಎನ್ನುವ ಪ್ರಶ್ನೆ ಎದುರಾಯಿತು” ಎಂದರು.
“ನೆಹರು ಅವರ ಕುಟುಂಬದ ಇಂದಿರಾಗಾಂಧಿ ಹಾಗೂ ರಾಜೀವ್ ಯವರ ಜೀವಗಳು ದೇಶಕ್ಕಾಗಿ ಹುತಾತ್ಮವಾಗಿವೆ. ದೇಶದಲ್ಲಿಯೇ ಕಾಂಗ್ರೆಸ್ ಪಕ್ಷ ಮುಳುಗಿ ಹೋಗುತ್ತಿದೆ ಎನ್ನುವ ಸಂದರ್ಭದಲ್ಲಿ ಪಕ್ಷದ ಚುಕ್ಕಾಣಿ ಹಿಡಿದ ಸೋನಿಯಾ ಗಾಂಧಿಯವರು ಪ್ರಧಾನಿ ಪಟ್ಟ ನಿರಾಕರಿಸಿ ಪಕ್ಷ ಕಟ್ಟಿದರು. ಇಂದಿರಾಗಾಂಧಿಯವರ ಹಾದಿಯಲ್ಲಿಯೇ ನಡೆದರು” ಎಂದರು.
ಸೋಲನ್ನು ಒಪ್ಪಿಕೊಳ್ಳಲು ಬಿಜೆಪಿ ತಯಾರಿಲ್ಲ
“ಸೌಮ್ಯ ರೆಡ್ಡಿ ಅವರು ಈ ಭಾಗದಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಆದರೆ ಮೋಸದಿಂದ ಅವರಿಗೆ ಸೋಲಾಗಿದೆ. ಮತ್ತೊಮ್ಮೆ ಗೆದ್ದು ವಿಧಾನಸಭೆಗೆ ಬರುತ್ತಾರೆ ಎನ್ನುವ ವಿಶ್ವಾಸವಿದೆ. ಮಾಲೂರಿನಲ್ಲಿ ಮರು ಎಣಿಕೆ ಮಾಡಬೇಕು ಎಂದು ತೀರ್ಪು ನೀಡಿದೆ. ಚಿಕ್ಕಮಗಳೂರಿನ ವಿಧಾನ ಪರಿಷತ್ ಕ್ಷೇತ್ರದ ಮರು ಎಣಿಕೆ ನಡೆದಿದೆ. ಆದರೆ ಅದನ್ನು ಘೋಷಣೆ ಮಾಡಲು ಬಿಡುತ್ತಿಲ್ಲ. ಬಿಜೆಪಿಯವರು ಸೋಲನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಪ್ರಜಾಪ್ರಭುತ್ವಕ್ಕೆ ನ್ಯಾಯಾಲಯಗಳು ಗೌರವ ನೀಡುತ್ತವೆ ಎನ್ನುವ ವಿಶ್ವಾಸವಿದೆ” ಎಂದರು.
 
					 
				 
					 
					 
					 
					
 
					 
					 
					


