
ಪ್ರಗತಿವಾಹಿನಿ ಸುದ್ದಿ: “ನನ್ನನ್ನು ಭೇಟಿ ಮಾಡಲು ಪ್ರತಿದಿನವೂ ಶಾಸಕರು ಬರುತ್ತಿರುತ್ತಾರೆ. ಪ್ರತಿದಿನವನ್ನೂ ಶಾಸಕರಿಗೆ ಮೀಸಲಾಗಿ ಇಟ್ಟಿದ್ದೇನೆ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಶಾಸಕರ ಅಹವಾಲು ಸ್ವೀಕರಿಸಲು ಮುಖ್ಯಮಂತ್ರಿಯವರು ಎರಡು ದಿನ ಮೀಸಲಿಟ್ಟಿರುವ ಬಗ್ಗೆ ಮಾಧ್ಯಮದವರು ಕೇಳಿದಾಗ ಡಿಸಿಎಂ ಅವರು ಹೀಗೆ ಉತ್ತರಿಸಿದರು.
ಸದಾಶಿವನಗರದ ನಿವಾಸ ಹಾಗೂ ಹೊಸಕೋಟೆಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು.
ಬೆಂಗಳೂರನ್ನು ಐದು ಹೋಳು ಮಾಡಿ ಓಳು ಬಿಡುತ್ತಿದ್ದಾರೆ ಎನ್ನುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿಕೆ ಬಗ್ಗೆ ಕೇಳಿದಾಗ, “ಇದರ ಬಗ್ಗೆ ಈಗಾಗಲೇ ಸದನದಲ್ಲಿ ಮಾತನಾಡಿದ್ದೇವೆ. ಎಲ್ಲರ ಬಳಿಯೂ ಇದರ ಬಗ್ಗೆ ಮಾತನಾಡಿಯೇ ತೀರ್ಮಾನ ತೆಗೆದುಕೊಂಡಿದ್ದೇವೆ. ಆದರೂ ಅವರು ರಾಜಕೀಯ ಮಾಡಬೇಕಲ್ಲ ಎಂದು ಮಾತನಾಡುತ್ತಿದ್ದಾರೆ” ಎಂದರು.
“ಬಿಬಿಎಂಪಿ, ವಿದ್ಯುತ್ ಸಂಪರ್ಕ, ಬಿ ಖಾತಾ ವಿಚಾರಗಳ ಬಗ್ಗೆ ಒಂದಷ್ಟು ದಾಖಲೆಗಳನ್ನು ಇಟ್ಟುಕೊಂಡು ಮಾತನಾಡುತ್ತೇನೆ. ನಾನು ಯಾವುದಕ್ಕೂ ಉತ್ತರ ನೀಡದೆ ಓಡಿ ಹೋಗುವುದಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಒಂದಷ್ಟು ತೀರ್ಮಾನ ಮಾಡುತ್ತಿದ್ದೇವೆ. ಎಲ್ಲದಕ್ಕೂ ಉತ್ತರ ನೀಡುತ್ತೇವೆ” ಎಂದರು.
ಧರ್ಮಸ್ಥಳ ಸರಣಿ ಸಾವುಗಳ ಬಗ್ಗೆ ಎಸ್ ಐಟಿ ರಚನೆ ಮಾಡಿರುವ ಬಗ್ಗೆ ಕೇಳಿದಾಗ, “ಇದರ ಬಗ್ಗೆ ನನಗೆ ಇನ್ನೂ ಸರಿಯಾದ ಮಾಹಿತಿ ಲಭ್ಯವಿಲ್ಲ. ಗೃಹಸಚಿವರ ಬಳಿ ಇದರ ಬಗ್ಗೆ ಮಾತನಾಡಿ ಮಾಹಿತಿ ಪಡೆಯುತ್ತೇನೆ. ಎಲ್ಲ ವಿಚಾರಗಳಿಗೂ ಬಾಯಿ ಹಾಕುವುದು ಸೂಕ್ತವಲ್ಲ” ಎಂದರು.
ಸಿಎಂ ಅವರೇ ಸ್ಪಷ್ಟನೆ ನೀಡಿದ್ದಾರಲ್ಲ:
ಮೈಸೂರು ಕಾರ್ಯಕ್ರಮದಲ್ಲಿ ಸಿಎಂ ನಿಮಗೆ ಅಪಮಾನ ಮಾಡಿದರು ಎನ್ನುವ ವರದಿಗಳ ಬಗ್ಗೆ ಕೇಳಿದಾಗ, “ಈಗಾಗಲೇ ಇದರ ಬಗ್ಗೆ ಶನಿವಾರ ಹಾಗೂ ಭಾನುವಾರ ಬೆಳಿಗ್ಗೆ ಮುಖ್ಯಮಂತ್ರಿಗಳೇ ಸ್ವತಃ ಸ್ಪಷ್ಟನೆ ನೀಡಿದ್ದಾರೆ. ಇದರ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ” ಎಂದು ತಿಳಿಸಿದರು.
ಎರಡು ದಿನ ಕನಕಪುರದಲ್ಲಿ ಜನಸ್ಪಂದನ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಕ್ಷೇತ್ರದ ಜನರಿಗೆ ನಾನು ಸಮಯ ನೀಡಲು ಆಗುತ್ತಿಲ್ಲ. ಅದಕ್ಕೆ ಎರಡು ದಿನ ಅಲ್ಲಿಯೇ ಇದ್ದು ಅವರ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತೇನೆ” ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರ ಹುಟ್ಟುಹಬ್ಬದ ಬಗ್ಗೆ ಕೇಳಿದಾಗ, “ಅವರು ಬರೀ ಖರ್ಗೆಯವರಲ್ಲ, ಎಐಸಿಸಿ ಅಧ್ಯಕ್ಷರು. ಅವರ ಜನ್ಮದಿನಕ್ಕೆ ಕೆಪಿಸಿಸಿ ವತಿಯಿಂದ ಅವರಿಗೆ ತುಂಬು ಹೃದಯದ ಶುಭಾಶಯಗಳನ್ನು ತಿಳಿಸುತ್ತೇವೆ ಎಂದರು.