*ನರೇಗಾ ಯೋಜನೆಯಲ್ಲಿ ಮಾನವ ದಿನಗಳ ಹೆಚ್ಚಳಕ್ಕೆ ಕೇಂದ್ರಕ್ಕೆ ಮನವಿ: ಡಿಸಿಎಂ ಡಿ.ಕೆ.ಶಿವಕುಮಾರ್*
ಕೃಷಿಮೇಳ- 2023
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: “ಬರಗಾಲವಿರುವ ಕಾರಣ ನರೇಗಾ ಯೋಜನೆಯ ಮಾನವ ದಿನಗಳನ್ನು 100 ದಿನಗಳ ಬದಲು 150 ದಿನಗಳಿಗೆ ಏರಿಕೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ನಗರದ ಜಿಕೆವಿಕೆ ಆವರಣದಲ್ಲಿ ನಡೆದ ಕೃಷಿಮೇಳ- 2023 ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೇಳಿದ್ದಿಷ್ಟು;
“ಕನಕಪುರ ತಾಲ್ಲೂಕಿನಲ್ಲಿ ಪ್ರತಿ ರೈತರಿಗೂ ನರೇಗಾ ಯೋಜನೆಯ ಲಾಭ ದೊರೆಯುವಂತೆ ಮಾಡಿದ್ದೇನೆ. ಸಾಕಷ್ಟು ಜನ ರೈತರು ಕೊಟ್ಟಿಗೆ ಸೇರಿದಂತೆ ಸಾಕಷ್ಟು ಅನುಕೂಲ ಮಾಡಿಕೊಂಡಿದ್ದಾರೆ. ಇದರಿಂದ ಬಿಜೆಪಿ ಸರ್ಕಾರ ನಮ್ಮ ತಾಲ್ಲೂಕಿಗೆ ಉತ್ತಮವಾಗಿ ʼನರೇಗಾ ಯೋಜನೆ ಬಳಸಿಕೊಂಡ ತಾಲ್ಲೂಕುʼ ಎಂದು ವಿಧಿಯಿಲ್ಲದೆ ಪ್ರಶಸ್ತಿ ನೀಡಬೇಕಾಯಿತು.
ಹೊಸದಾಗಿ ಬಿಜೆಪಿ ಸೇರಿರುವ ʼರೈತರ ಮಕ್ಕಳುʼ ಹಾಗೂ ರಾಜ್ಯದ ಎಲ್ಲಾ ಸಂಸದರ ಬಳಿ ನಾವು ಕೈ ಮುಗಿದು ಕೇಳುವುದೇನೆಂದರೆ, ರಾಜ್ಯದ 200ಕ್ಕೂ ಹೆಚ್ಚು ತಾಲ್ಲೂಕುಗಳು ಬರಕ್ಕೆ ತುತ್ತಾಗಿವೆ. ನರೇಗಾ ಯೋಜನೆ ಪ್ರಕಾರ ಬರಗಾಲ ಬಂದಾಗ ಮಾನವ ದಿನಗಳನ್ನು ಹೆಚ್ಚು ಮಾಡಬೇಕು ಎನ್ನುವ ಕಾನೂನಿದೆ. ಇದನ್ನು ಕೇಂದ್ರ ಸರ್ಕಾರಕ್ಕೆ ನೆನಪಿಸಿ, ನಮ್ಮ ರೈತರ ಬದುಕನ್ನು ಹಸನು ಮಾಡಬೇಕು.
ಯುಪಿಎ ಸರ್ಕಾರ ಜಾರಿಗೆ ತಂದ ನರೇಗಾ ಯೋಜನೆಯ ಅಡಿ ಸರ್ಕಾರಿ ಜಮೀನುಗಳಲ್ಲಿ ಕೆಲಸ ಮಾಡುವ ಅವಕಾಶವಿತ್ತು. ನಾನು ಸೋನಿಯಾ ಗಾಂಧಿ ಮತ್ತು ಕೇಂದ್ರ ಗ್ರಾಮೀಣಾಭಿವೃದ್ದಿ ಸಚಿವರಾಗಿದ್ದ ಸಿ.ಪಿ.ಜೋಷಿ ಅವರನ್ನು ಭೇಟಿಯಾಗಿ, ರೈತರು ಸ್ವಾಭಿಮಾನಿಗಳು ಬೇರೆಯವರ ಜಮೀನುಗಳಿಗೆ ಹೋಗಿ ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ ಎಂದು ತಿಳಿಸಿದೆ. ಇದಾದ ನಂತರ ತಮ್ಮದೇ ಜಮೀನಿನಲ್ಲಿ ಕೆಲಸ ಮಾಡಿದರೇ ಸರ್ಕಾರವೇ ಕೂಲಿ ನೀಡುವಂತಹ ಅವಕಾಶ ಮಾಡಿಕೊಡಲಾಯಿತು.
ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ಸೇರಿದಂತೆ ಇತರೇ ಕೆಲಸಗಳನ್ನು ಕುಟುಂಬದವರೇ ಮಾಡಿಕೊಂಡು ಸರ್ಕಾರದಿಂದ ಹಣ ಪಡೆಯಬಹುದು. ರೈತರು ನರೇಗಾ ಯೋಜನೆಯ ಉಪಯೋಗ ಪಡೆದುಕೊಳ್ಳಬೇಕು.
ರೈತರು ಏನೇ ಒತ್ತಡ ಬಂದರೂ ತಮ್ಮ ಜಮೀನುಗಳನ್ನು ಮಾರಾಟ ಮಾಡಿಕೊಳ್ಳಲು ಹೋಗಬೇಡಿ. ಇದು ವೈಯಕ್ತಿಕವಾದ ಮನವಿಯಲ್ಲ, ಸರ್ಕಾರದ ಮನವಿ. ಕೊರೋನಾ ಸಮಯದಲ್ಲಿ ನಗರಗಳಿಂದ ಹಳ್ಳಿಗಳಿಗೆ ಬಂದಿರುವ ಜನರು ಜಮೀನು ಕೊಂಡು, ಫಾರ್ಮ್ಹೌಸ್ ಕಟ್ಟಿಕೊಳ್ಳುತ್ತಿರುವವರು ದಡ್ಡರೇ? ಒಳ್ಳೆಯ ಆರೋಗ್ಯ ಬೇಕು ಎಂದು ಹಳ್ಳಿಗಳಿಗೆ ಬರುತ್ತಿದ್ದಾರೆ.
ಕೃಷಿ ವಿಶ್ವವಿದ್ಯಾಲಯಗಳು ರೈತರಿಗೆ ಆದಾಯ ತರುವಂತಹ ತಳಿಗಳ ಕುರಿತು ಹೆಚ್ಚು ಅಧ್ಯಯನ ನಡೆಸಬೇಕು. ಇದರಿಂದ ಅವರ ಬಾಳು ಹಸನಾಗುತ್ತದೆ. ಯಾರೂ ಸಹ ಭೂಮಿ ಮಾರಾಟ ಮಾಡಲು ಹೋಗುವುದಿಲ್ಲ. ನಮ್ಮ ಕರ್ನಾಟಕದಲ್ಲಿ ಬೆಳೆದ ಹೂವು, ಹಣ್ಣು ತರಕಾರಿಗಳು ಹೊರದೇಶಗಳಿಗೆ ರಫ್ತಾಗುತ್ತಿರುವುದು ಹೆಮ್ಮೆಯ ಸಂಗತಿ.
ನಮ್ಮ ರೈತರು ಇಡೀ ದೇಶಕ್ಕೆ ಮಾದರಿ
ನೀರಿನ ಸದ್ಬಳಕೆ ಮತ್ತು ಭೂಮಿಯ ಫಲವತ್ತತೆಯನ್ನು ಕಾಪಾಡುವ ಬಗ್ಗೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ರೈತರು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ನಮ್ಮ ರಾಮನಗರದ ರೈತರಿಗಿಂತ ಈ ಭಾಗದ ರೈತರು ಚೆನ್ನಾಗಿ ಜೀವನ ಕಟ್ಟಿಕೊಂಡಿದ್ದಾರೆ.
ಈ ಭಾಗದ ರೈತರು ತರಕಾರಿ, ತೋಟಗಾರಿಕಾ ಬೆಳೆ ಸೇರಿದಂತೆ ಸಿಲ್ಕ್ ಮತ್ತು ಮಿಲ್ಕ್ ಕ್ರಾಂತಿಯನ್ನು ಮಾಡಿದ್ದಾರೆ. ರೇಷ್ಮೇ ಕೃಷಿಯಲ್ಲಿ ಶಿಡ್ಲಘಟ್ಟ ಮತ್ತು ರಾಮನಗರ ಸಾಕಷ್ಟು ಮುಂದುವರೆದಿವೆ. ಮಾಜಿ ಕೃಷಿ ಸಚಿವರಾಗಿದ್ದ ಎಂ.ವಿ.ಕೃಷ್ಣಪ್ಪ ಅವರು ಆಗಲೇ ರೇಷ್ಮೇ ಮತ್ತು ಕ್ಷೀರಕ್ರಾಂತಿಯ ಬಗ್ಗೆ ಯೋಚಿಸಿ, ಯೋಜನೆ ರೂಪಿಸಿದ್ದರು.
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸು ಎಂದು ಸರ್ವಜ್ಞ ಹೇಳುತ್ತಾನೆ. ವಿದ್ಯಾವಂತರು, ಬುದ್ಧಿವಂತರು ಇಲ್ಲದಿದ್ದರು ಈ ದೇಶ ಮುನ್ನಡೆಯುತ್ತದೆ, ಆದರೆ ಪ್ರಜ್ಞಾವಂತರು ಇಲ್ಲದಿದ್ದರೆ ದೇಶ ನಡೆಯುವುದು ಕಷ್ಟ. ನಮ್ಮ ರೈತರು ಕಷ್ಟದಲ್ಲಿ ಇದ್ದರೂ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಎಂಜಿನಿಯರ್ಗಳನ್ನೇ ನಾಚಿಸುವಂತೆ ನಮ್ಮ ರೈತರು ಭೂಮಿಯಲ್ಲಿ ಕೆಲಸ ಮಾಡುತ್ತಾರೆ. ದನಗಳಿಗೆ ಏರು ಕಟ್ಟಿ ಸಾಲು ಹೊಡೆಯುವುದು, ಗದ್ದೆಯಲ್ಲಿ ಮಹಿಳೆಯರು ಪೈರು ನಾಟಿ ಮಾಡುವಷ್ಟು ಅಚ್ಚುಕಟ್ಟಾಗಿ ಯಾವ ಎಂಜಿನಿಯರ್ಗಳೂ ಸಹ ಗೆರೆ ಹಾಕಲು ಸಾಧ್ಯವಿಲ್ಲ.
ಒಕ್ಕಲುತನಕ್ಕೆ ಯಾವುದೇ ಜಾತಿ ಧರ್ಮವಿಲ್ಲ
ಒಕ್ಕಲುತನಕ್ಕೆ ಯಾವುದೆ ಜಾತಿ, ಧರ್ಮವಿಲ್ಲ. ಯಾರು ಈ ಭೂಮಿಯನ್ನು ಕಾಪಾಡಿಕೊಂಡು ಹಸಿದವನಿಗೆ ಅನ್ನ ಹಾಕುತ್ತ ಇರುವುದೇ ದೊಡ್ಡ ದೇಶಸೇವೆ. ಜೈ ಜವಾನ್ ಜೈ ಕಿಸಾನ್ ಮಾತಿನಂತೆ ಈ ಭೂಮಿಯನ್ನು ಕಾಪಾಡಿಕೊಂಡು ಬರುತ್ತಿರುವುದೇ ಕೃಷಿಕ ಸಮುದಾಯ.
ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಮುಖ್ಯ. ರೈತರ ಮಕ್ಕಳು ಯಾರೂ ಕೆಟ್ಟಿಲ್ಲ. ಕೃಷಿ ಸಚಿವ ಚೆಲುವರಾಯಸ್ವಾಮಿ ಅವರಿಗೆ ಬೇರೆ ಖಾತೆ ನೀಡಬೇಕು ಎನ್ನುವ ಆಲೋಚನೆ ಇತ್ತು. ಅವರು ರೈತರ ಮಗನಾಗಿರುವ ಕಾರಣ ರೈತರ ಕಷ್ಟ ಬೇಗ ಅರ್ಥವಾಗುತ್ತದೆ ಎಂದು ಈ ಖಾತೆ ನೀಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ