*ಸುವರ್ಣಸೌಧದಲ್ಲಿ ಬೃಹತ್ ರಾಷ್ಟ್ರಧ್ವಜ ಅನಾವರಣ: ಮುಂದಿನ ಪೀಳಿಗೆಗೆ ದೇಶ ಭಕ್ತಿಯ ಸಂದೇಶ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಸುವರ್ಣಸೌಧದಲ್ಲಿ ಬೃಹತ್ ತ್ರಿವರ್ಣ ಧ್ವಜ ಪ್ರದರ್ಶಿಸುತ್ತಿರುವುದು ಮುಂದಿನ ಪೀಳಿಗೆಗೆ ದೇಶ ಭಕ್ತಿಯ ಸಂದೇಶ ರವಾನಿಸುವ ಕೆಲಸವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶ್ಲಾಘಿಸಿದರು.
ಬೆಳಗಾವಿ ಸುವರ್ಣಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಬೃಹತ್ ರಾಷ್ಟ್ರಧ್ವಜ ಅನಾವರಣ ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಂಗಳವಾರ ಮಾತನಾಡಿದರು.

“ಹೊಸ ದಾಖಲೆ ಬರೆಯುತ್ತಿರುವ ಸ್ಪೀಕರ್ ಖಾದರ್ ಅವರಿಗೆ ಅಭಿನಂದನೆಗಳು. ಕಳೆದ ವರ್ಷ ಮಹಾತ್ಮ ಗಾಂಧಿ ಅವರ ಸ್ವಾತಂತ್ರ್ಯ ಹೋರಾಟದ ನೇತೃತ್ವದ ಶತಮಾನೋತ್ಸವ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಸುವರ್ಣಸೌಧದಲ್ಲಿ ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಸ್ಥಾಪನೆ ಮಾಡಿದ್ದರು. ಈ ಸಂದರ್ಭದಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಂದು ನಮ್ಮ ಧಾರವಾಡದ ಖಾದಿ ಕೇಂದ್ರದಿಂದ ಬೃಹತ್ ತ್ರಿವರ್ಣ ಧ್ವಜ ತಯಾರಿಸಿ ಸುವರ್ಣಸೌಧದಲ್ಲಿ ಪ್ರದರ್ಶನ ಮಾಡಿದ್ದಾರೆ” ಎಂದರು.
“ರಾಜ್ಯದ ಜನರ ಪರವಾಗಿ ಸ್ಪೀಕರ್ ಹಾಗೂ ಅವರ ತಂಡಕ್ಕೆ ಅಭಿನಂದನೆ ತಿಳಿಸುತ್ತೇನೆ. ಇದು ಎಲ್ಲರಿಗೂ ಮಾದರಿಯಾಗುವ ಅತ್ಯುತ್ತಮ ಕೆಲಸ. ಇದನ್ನು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು. ಕಾಂಗ್ರೆಸ್ಸಿಗರ ಹೆಗಲ ಮೇಲೆ ರಾಷ್ಟ್ರಧ್ವಜ, ಎದೆಯ ಒಳಗೆ ರಾಷ್ಟ್ರಭಕ್ತಿ ಇದೆ” ಎಂದು ತಿಳಿಸಿದರು.



