Karnataka NewsLatestPolitics

*ಸಂವಿಧಾನದ ಪ್ರತಿ ಹಿಡಿದು, ವೀರ ಗಂಗಾಧರ ಅಜ್ಜಯ್ಯ ಹೆಸರಲ್ಲಿ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ*

ಪ್ರಗತಿವಾಹಿನಿ ಸುದ್ದಿ: ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಭಾರತದ ಸಂವಿಧಾನ ಪ್ರತಿ ಹಿಡಿದು ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು.

ಲೋಕಭವನದ ಗಾಜಿನ ಮನೆಯಲ್ಲಿ ಬುಧವಾರ ನಡೆದ ಸರಳ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರಚಂದ್ ಗೆಹಲೋಟ್ ಅವರು ಬೋಧಿಸಿದ ಗೌಪ್ಯತಾ ಪ್ರಮಾಣ ವಚನವನ್ನು ಶಿವಕುಮಾರ್ ಅವರು ಬುಧವಾರ ಸ್ವೀಕರಿಸಿದರು.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾದ ಸಿದ್ದರಾಮಯ್ಯ, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಕೇರಳಂ ಸಿಎಂ ವಿ.ಡಿ. ಸತೀಶನ್, ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ಸಿಗ್ ಸುಖು, ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರು ಉಪಸ್ಥಿತರಿದ್ದರು.

Home add -Advt

ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸುವ ಮುನ್ನ, ವೀರ ಗಂಗಾಧರಯ್ಯ ಅಜ್ಜಯ್ಯನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ನೆರೆದಿದ್ದ ಸಭಿಕರಿಗೆ ಅಡ್ಡಬಿದ್ದು ಸಾಷ್ಟಾಂಗ ನಮಸ್ಕಾರ ಅರ್ಪಿಸಿದರು. ಸಿಎಂ ಡಿ.ಕೆ. ಶಿವಕುಮಾರ್ ಅವರ ಜೊತೆಗೆ ಅವರ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿ ಡಾ.ಜಿ. ಪರಮೇಶ್ವರ್ ಅವರು, ಸಚಿವರಾಗಿ ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ ಪಾಟೀಲ್, ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಯು.ಟಿ ಖಾದರ್, ಈಶ್ವರ್ ಖಂಡ್ರೆ, ಯತೀಂದ್ರ ಸಿದ್ದರಾಮಯ್ಯ, ಬೈರತಿ ಸುರೇಶ್, ಶರಣಪ್ರಕಾಶ್ ಪಾಟೀಲ್ ಅವರು ಪ್ರಮಾಣವಚನ ಸ್ವೀಕರಿಸಿದರು.

ಗಾಜಿನ ಮನೆಯಲ್ಲಿ ಮಾರ್ದನಿಸಿದ ಡಿ.ಕೆ, ಡಿ.ಕೆ ಘೋಷಣೆ

ಅಭಿಮಾನಿಗಳ ಡಿ.ಕೆ, ಡಿ.ಕೆ ಉದ್ಘಾರವು ಲೋಕಭವನದ ಗಾಜಿನ ಮನೆಯಲ್ಲಿ ಮಾರ್ದನಿಸಿತು. ಎಐಸಿಸಿ ಅಧ್ಯಕ್ಷರಾದ‌ ಮಲ್ಲಿಕಾರ್ಜುನ ಖರ್ಗೆ ಅವರು, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ವಿವಿಧ ರಾಜ್ಯಗಳ ಕಾಂಗ್ರೆಸ್ ಸಂಸದರು, ಮುಖಂಡರು ಹಾಗೂ ಸರ್ವಧರ್ಮಗಳ ಗುರುಗಳು, ಸಮುದಾಯಗಳ ಸ್ವಾಮೀಜಿಗಳು ಪ್ರಮಾಣ ವಚನ ಸಮಾರಂಭಕ್ಕೆ ಸಾಕ್ಷಿಯಾದರು.

ಭೈರವ ಮಾಲೆ ಹಾಕಿದ ನಿರ್ಮಾಲಾನಂದನಾಥ ಸ್ವಾಮೀಜಿ

ಲೋಕಭವನಕ್ಕೆ ಪ್ರವೇಶ ಮಾಡಿದ ಡಿ.ಕೆ.ಶಿವಕುಮಾರ್ ಅವರು ನೇರವಾಗಿ ಧರ್ಮಗುರುಗಳ, ವಿವಿಧ ಮಠಗಳ ಸ್ವಾಮೀಜಿಗಳು ಆಸೀನರಾಗಿದ್ದ ಕಡೆ ತೆರಳಿ ಆಶೀರ್ವಾದ ಪಡೆದರು. ಆದಿ ಚುಂಚನಗಿರಿ ಮಠದ ನಿರ್ಮಾಲಾನಂದನಾಥ ಸ್ವಾಮೀಜಿ ಅವರು ಬೈರವ ಮಾಲೆಯನ್ನು ಹಾಕಿ ಅಭಿನಂದಿಸಿದರು. ಕನಕಪೀಠದ ಸ್ವಾಮೀಜಿ ನಿರಂಜನಾನಂದಪುರಿ ಕರಿ ಕಂಬಳಿ ಹೊದೆಸಿ ನಿಮ್ಮ ಹಾದಿ ಸುಗಮವಾಗಿರಲಿ ಎಂದು ಶುಭಕೋರಿದರು. ಇತರೇ ಸ್ವಾಮೀಜಿಗಳು ರುದ್ರಾಕ್ಷಿ ಸರ, ಕ್ರೈಸ್ತ ಧರ್ಮಗುರುಗಳು ಶಿಲುಬೆಯ ದಾರವನ್ನು ಕೊರಳಿಗೆ ಹಾಕಿ “ನಿಮ್ಮ ಆಡಳಿತ ಅವಧಿಯಲ್ಲಿ ಕರ್ನಾಟಕದ ಅಭಿವೃದ್ಧಿ ಇನ್ನೂ ಉತ್ತುಂಗಕ್ಕೆ ಏರಲಿ” ಎಂದು ಹಾರೈಸಿದರು. ಸಂತ ಸೇವಾಲಾಲ್ ಸ್ವಾಮೀಜಿ ಲಂಬಾಣಿ ಕುಸುರಿ ಕಲೆ ಹೊಂದಿರುವ ಶಲ್ಯವನ್ನು ನೀಡಿದರು. ಸುಬ್ರಮಣ್ಯ ಕ್ಷೇತ್ರದ ವಿದ್ಯಾಪ್ರಸನ್ನ ತೀರ್ಥರು ಸೇರಿದಂತೆ ಅನೇಕರು ಆಶೀರ್ವಾದ ಮಾಡಿದರು.

ಹಸ್ತಾಲಾಘವ ಮಾಡಲು ಮುಗಿಬಿದ್ದ ಅಭಿಮಾನಿಗಳು

ಸಭಾಂಗಣದ ಇಕ್ಕೆಲಗಳಲ್ಲಿ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನೂತನ ಮುಖ್ಯಮಂತ್ರಿಗಳಿಗೆ ಹಸ್ತಾಲಾಘವ ಮಾಡಲು ಮುಗಿಬಿದ್ದರು. ಎಲ್ಲರಿಗೂ ನಗುಮುಖದಿಂದಲೇ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಅವರು ಪ್ರತಿಯೊಬ್ಬರಿಗೂ ಹಸ್ತಲಾಘವ ಮಾಡಿ ಹುರಿದುಂಬಿಸಿದರು.

ಕಾರ್ಯಕ್ರಮಕ್ಕೆ ಸಾಕ್ಷಿಯಾದ ಗಣ್ಯರು:

ಈ ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಮಠದ ನಿರ್ಮಾಲಾನಂದನಾಥ ಸ್ವಾಮೀಜಿ, ಕನಕಪೀಠದ ಸ್ವಾಮೀಜಿ ನಿರಂಜನಾನಂದಪುರಿ, ಸಂತ ಸೇವಾಲಾಲ್ ಸ್ವಾಮೀಜಿ, ಮಾದರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದರ ಚನ್ನಯ್ಯ ಮಹಾಸ್ವಾಮಿ, ಅರ್ಚ್ ಬಿಷಪ್ ರೆವರೆಂಡ್ ಡಾ. ಪೀಟರ್ ಮಚಾಡೋ, ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಭೋವಿ ಮಠದ ಹಿಮ್ಮಡಿ ಸಿದ್ದೇಶ್ವರ ಸ್ವಾಮೀಜಿ, ದ್ವಾರಕನಾಥ ಗುರೂಜಿ, ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಸ್ವಾಮೀಜಿ, ಗದುಗಿನ ತೋಂಟದಾರ್ಯ ಸ್ವಾಮೀಜಿ, ಸುಬ್ರಮಣ್ಯ ಕ್ಷೇತ್ರದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ವಿನಯ್ ಗುರೂಜಿ ಹಾಗೂ ಶಿವಕುಮಾರ್ ಅವರ ಧರ್ಮಪತ್ನಿ ಉಷಾ ಶಿವಕುಮಾರ್, ಪುತ್ರಿ ಐಶ್ವರ್ಯ ಡಿಕೆಎಸ್ ಹೆಗಡೆ, ಬಮೂಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್, ಸಿನಿಮಾ ತಾರೆ ಹಾಗೂ ಮಾಜಿ ಸಂಸದೆ ರಮ್ಯಾ ಹಾಗೂ ಮತ್ತಿತರ ಶಾಸಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

Related Articles

Back to top button