Latest

*ನೀರಾವರಿ ಸೌಲಭ್ಯಕ್ಕೆ 2 ಲಕ್ಷ ಕೋಟಿ ಮೀಸಲು; ವಚನ ನೀಡಿದ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಇಂದು ನನಗೆ ಬಹಳ ಸಂತೋಷದ ದಿನ. 20 ವರ್ಷಗಳ ಹಿಂದೆ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಬಿಜಾಪುರ ಹಾಗೂ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಕಚೇರಿಗೆ ಜಾಗ ಮಂಜೂರಾತಿ ಮಾಡುವ ಭಾಗ್ಯ ಸಿಕ್ಕಿತ್ತು. ಪಕ್ಷದ ಕಚೇರಿಗಳು ನಮ್ಮ ಪಾಲಿಗೆ ದೇವಾಲಯಗಳು. ಇಂದು ನಾನು ಅಧ್ಯಕ್ಷನಾಗಿ ಆ ದೇವಾಲಯವನ್ನು ಉದ್ಘಾಟನೆ ಮಾಡುತ್ತಿರುವುದು ನನ್ನ ಭಾಗ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಬಾಗಲಕೋಟೆ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಜಿಲ್ಲಾಧ್ಯಕ್ಷರಾದ ನಂಜಯ್ಯನಮಠ್ ಅವರು ನನ್ನ ಆತ್ಮೀಯರು. ಅವರು ರಾಜ್ಯ ಯೂಥ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ನಾನು ಯೂತ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷನಾಗಿದ್ದೆ. ಇಂದು ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದು, ಅವರು ಜಿಲ್ಲಾಧ್ಯಕ್ಷರಾಗಿದ್ದಾರೆ. ನಾನು ಅಧ್ಯಕ್ಷನಾದಾಗ ನನ್ನ ಕೈಕೆಳಗೆ ನೀವು ಜಿಲ್ಲಾಧ್ಯಕ್ಷರಾಗಿರುವುದು ಬೇಡ ರಾಜೀನಾಮೆ ನೀಡಿ, ನಾನು ನಿಮ್ಮನ್ನು ಸೇವಾದಳದ ರಾಜ್ಯಾಧ್ಯಕ್ಷರಾಗಿ ಅಥವಾ ರಾಜ್ಯದ ಪದಾಧಿಕಾರಿಯಾಗಿ ಮಾಡುತ್ತೇನೆ ಎಂದೆ. ಆಗ ಅವರು ದೇವಸ್ಥಾನದಂತಹ ಕಾಂಗ್ರೆಸ್ ಕಚೇರಿ ಕಟ್ಟಿ ಉದ್ಘಾಟನೆ ಮಾಡುವವರೆಗೂ ನಾನು ಈ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

ನಾವೆಲ್ಲ ಪವಿತ್ರ ಗಳಿಗೆಯಲ್ಲಿ ಬಾಗಲಕೋಟೆಗೆ ಬಂದಿದ್ದೇವೆ. ಬಸವಣ್ಣ, ಕುವೆಂಪು, ಕನಕದಾಸ, ಸಂತ ಶಿಶುನಾಳ ಶರೀಫರ ಕರ್ನಾಟಕದಲ್ಲಿ ಐಕ್ಯತೆ, ಸಮಗ್ರತೆ, ಶಾಂತಿ ಕಾಪಾಡಲು ಈ ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದೇವೆ. ಒಂದು ಕಾಲದಲ್ಲಿ ಕರ್ನಾಟಕ ದೇಶದಲ್ಲಿಯೇ ಅತ್ಯಂತ ಗೌರವ ಪಡೆದಿದ್ದ ರಾಜ್ಯವಾಗಿತ್ತು. ಆದರೆ ಇಂದು ರಾಜ್ಯದ ಗೌರವ ಏನಾಗಿದೆ? ಎಂದು ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ರಾಜ್ಯದ ಜನರ ಸಮಸ್ಯೆ, ನೋವುಗಳ ಧ್ವನಿಯಾಗಿ ಪ್ರಜಾಧ್ವನಿ ಯಾತ್ರೆ ನಡೆಸಲಾಗುತ್ತಿದೆ. ಈ ಯಾತ್ರೆಯನ್ನು ಜನಸಾಮಾನ್ಯರ ಸಂಕಷ್ಟ ಪರಿಹಾರಕ್ಕಾಗಿ ಮಾಡುತ್ತಿದ್ದೇವೆ.

ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಇರಲಿಲ್ಲ. ಆದರೆ ಆಪರೇಷನ್ ಕಮಲದ ಮೂಲಕ ಈ ಸರ್ಕಾರ ಅಧಿಕಾರಕ್ಕೆ ಬಂದಿತು. ಕಳೆದ ಮೂರುವರೆ ವರ್ಷಗಳಲ್ಲಿ ಈ ಸರ್ಕಾರದಿಂದ ಏನಾದರೂ ಬದಲಾವಣೆ ಆಗಿದೆಯಾ? ಮೋದಿ ಅವರು ನಿಮಗೆಲ್ಲ ಅಚ್ಛೇ ದಿನ ಬರಲಿದೆ, ಕಪ್ಪು ಹಣ ತಂದು ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇನೆ, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದಿದ್ದರು. ಇದ್ಯಾವುದಾದರೂ ನಿಮಗೆ ಸಿಕ್ಕಿದೆಯಾ? ಖಾಸಗಿ, ಸರ್ಕಾರಿ ನೌಕರಿ ನಿಮ್ಮ ಊರಿನ ಜನರಿಗೆ ಸಿಕ್ಕಿದೆಯಾ? ಕೋವಿಡ್ ಬಂದಾಗ, 18 ದಿನಗಳಲ್ಲಿ ಮಹಾಭಾರತ ಯುದ್ಧ ಮುಗಿದಿತ್ತು, ನಾನು ಈ ಕೋವಿಡ್ ವಿರುದ್ಧದ ಯುದ್ಧವನ್ನು 21 ದಿನಗಳಲ್ಲಿ ಅಂತ್ಯ ಮಾಡುತ್ತೇವೆ ಜಾಗಟೆ ಚಪ್ಪಾಳೆ ಹೊಡೆಯಿರಿ ಎಂದರು. ಇಡೀ ದೇಶದ ಜನ ಹೊಡೆದರು.

ಕೋವಿಡ್ ನಿಂದ ಆಸ್ಪತ್ರೆ ಸೇರಿದವರಿಗೆ ಹಣ ನೀಡುತ್ತೇವೆ, ಚಿಕಿತ್ಸಾ ವೆಚ್ಚ ಭರಿಸುತ್ತೇವೆ, ಕೋವಿಡ್ ನಿಂದ ಸತ್ತವರಿಗೆ ಪರಿಹಾರ ನೀಡುತ್ತೇವೆ ಎಂದು ಹೇಳಿದ್ದರು. ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 36 ಮಂದಿ ಸತ್ತಿದ್ದರು. ಅವರ ಕಡೆ ಸರ್ಕಾರ ತಿರುಗಿಯೂ ನೋಡಲಿಲ್ಲ. ನಾನು, ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆವು. ಕೋರ್ಟ್ ಮಧ್ಯಪ್ರವೇಶ ಮಾಡಿ ತನಿಖೆ ನಡೆಸಿ 36 ಜನ ಸತ್ತಿದ್ದಾರೆ ಎಂದು ತಿಳಿಸಿತು. ಬಿಜೆಪಿ ಅವರ ನೆರವಿಗೆ ಧಾವಿಸಲಿಲ್ಲ. ನಾನು ಪಕ್ಷದ ಪರವಾಗಿ ಅವರ ಮನೆಗಳಿಗೆ ಹೋಗಿ, ತಲಾ 1 ಲಕ್ಷ ಆರ್ಥಿಕ ನೆರವು ನೀಡಿ ಬಂದಿದ್ದೇವೆ. ರಾಜ್ಯದಲ್ಲಿ 4.5 ಲಕ್ಷ ಜನ ಕೋವಿಡ್ ನಿಂದ ಸತ್ತಿದ್ದಾರೆ. ನ್ಯಾಯಾಲಯ ಇವರಿಗೆ ಪರಿಹಾರ ನೀಡಿ ಎಂದು ಹೇಳಿದ್ದರೂ ಬಿಜೆಪಿ ಸರ್ಕಾರ ಅವರಿಗೆ ಪರಿಹಾರ ನೀಡಿಲ್ಲ. ಈ ಎಲ್ಲ ಅನಾಹುತಗಳಿಗೆ ಬಿಜೆಪಿ ಕಾರಣ ಎಂದರು.

ನಾವೆಲ್ಲ ನಾಯಕರು ಈ ಬಗ್ಗೆ ಚರ್ಚೆ ಮಾಡಿ ಇದನ್ನು ಜನರ ಮುಂದೆ ಇಟ್ಟು ಚರ್ಚೆ ಮಾಡಬೇಕು ಎಂದು ತೀರ್ಮಾನಿಸಿದೆವು. ಚುನಾವಣೆ ನಮಗೆ ಪರೀಕ್ಷೆ ಇದ್ದಂತೆ, ನಾವು ಜನರಿಗಾಗಿ ಏನು ಮಾಡಿದ್ದೇವೆ, ಆಡಳಿತ ಪಕ್ಷ ಏನು ಮಾಡಿದೆ ಎಂದು ತೀರ್ಮಾನ ಮಾಡುವವರು ಜನರು. ಹೀಗಾಗಿ ಜನರ ಮಧ್ಯೆ ಈ ವಿಚಾರ ತಿಳಿಸಲು ಇಲ್ಲಿಗೆ ಬಂದಿದ್ದೇವೆ. ಇಲ್ಲಿಗೆ ಬರುವ ಮುನ್ನ ಬಿಜೆಪಿ ಪಾಪದ ಪುರಾಣವನ್ನು ಬಿಡುಗಡೆ ಮಾಡಿದ್ದೇವೆ.

ಬಿಜೆಪಿ ಮಾಡಿರುವ ಲೂಟಿ ಬಗ್ಗೆ ಪ್ರಸ್ತಾಪಿಸಿದ್ದೇವೆ. ಕೋವಿಡ್ ಸಲಕರಣೆ, ಹಾಸಿಗೆ ಸೇರಿದಂತೆ ಪ್ರತಿಯೊಂದರಲ್ಲೂ 200, 300ರಷ್ಟು ಕಮಿಷನ್ ಲೂಟಿ ಮಾಡಿದ್ದಾರೆ. ಹೀಗಾಗಿ ಈ ಸರ್ಕಾರಕ್ಕೆ 40% ಸರ್ಕಾರ ಎಂದು ಹೆಸರು ಬಂದಿದೆ. ಯುವಕರು ಉದ್ಯೋಗ ಪಡೆಯಲು ಕಷ್ಟಪಡುತ್ತಿದ್ದಾರೆ. ಸರ್ಕಾರ ಪಿಎಸ್ಐ, ಜೆಇಇ, ಸಹಾಯಕ ಪ್ರಾಧ್ಯಾಪಕ ಸೇರಿದಂತೆ ಎಲ್ಲ ಇಲಾಖೆ ನೇಮಕಾತಿಯಲ್ಲಿ ಅಕ್ರಮ ಎಸಗಿದ್ದಾರೆ. ವಿಶ್ವವಿದ್ಯಾಲಯದ ಕುಲಪತಿ ನೇಮಕಕ್ಕೆ 4-5 ಕೋಟಿ ಹಣ ನೀಡಬೇಕು ಎಂದು ಬಿಜೆಪಿ ಸಂಸದ ಬಹಿರಂಗ ಹೇಳಿಕೆ ನೀಡಿದ್ದಾರೆ. ನಿಮ್ಮ ಪಕ್ಕದ ಕ್ಷೇತ್ರದ ಶಾಸಕರು ಈ ಸರ್ಕಾರದಲ್ಲಿ ಮಂತ್ರಿಯಾಗಬೇಕಾದರೆ 100 ಕೋಟಿ, ಮುಖ್ಯಮಂತ್ರಿ ಆಗಬೇಕಾದರೆ 2500 ಕೋಟಿ ನೀಡಬೇಕು ಎಂದು ಹೇಳಿದರು. ಒಬ್ಬ ಮಂತ್ರಿಯನ್ನು ಪಿಂಪ್ ಎಂದು ಕರೆದರು. ಆದರೂ ಈ ಸರ್ಕಾರಕ್ಕೆ ಯಾವ ಪ್ರಕರಣವನ್ನು ತನಿಖೆ ಮಾಡುವ ಧೈರ್ಯವಿಲ್ಲ. ವಿಶ್ವನಾಥ್ ಅವರು ನೀರಾವರಿ ಇಲಾಖೆ ಟೆಂಡರ್ ನಲ್ಲಿ 20% ಕಮಿಷನ್ ಪಡೆಯಲಾಗಿದೆ ಎಂದರು. ಇನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಈ ಸರ್ಕಾರದಲ್ಲಿ 40% ಕಮಿಷನ್ ಪಡೆಯುತ್ತಿದೆ ಎಂದು ಪ್ರಧಾನಮಂತ್ರಿಗಳಿಗೆ ಪತ್ರ ಬರೆದರು. ಆದರೂ ಅದನ್ನು ತನಿಖೆ ಮಾಡಲು ಈ ಸರ್ಕಾರದಿಂದ ಸಾಧ್ಯವಾಗಿಲ್ಲ. ಪಿಡಬ್ಲ್ಯೂಡಿ, ಸಹಾಯಕ ಪ್ರಾಧ್ಯಪಕ ಹುದ್ದೆಗಳಿಗೆ 40-60 ಲಕ್ಷ ನೀಡಬೇಕು ಎಂದು ಪತ್ರಿಕೆಗಳು ವರದಿ ಮಾಡುತ್ತಿವೆ.

ನಿಮ್ಮ ಸಮಸ್ಯೆಗೆ ಸಹಾಯಮಾಡಿ, ನಿಮ್ಮ ನೋವನ್ನು ಪರಿಹರಿಸಬೇಕು. ಅದಕ್ಕೆ ಕಾಂಗ್ರೆಸ್ ಪಕ್ಷ ಸಿದ್ಧವಾಗಿದೆ. ಕಳೆದ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದಾಗ ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಕಲ್ಯಾಣ ಕರ್ನಾಟಕ್ಕೆ 5 ಸಾವಿರ ಕೋಟಿ ಅನುದಾನ, ಆ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಆರ್ಥಿಕ ನೀತಿ ನೀಡುವ ವಚನ ನೀಡಿದ್ದೇವೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರಿಗೆ ಜನಸಂಖ್ಯೆ ಅನುಗುಣವಾಗಿ ಅವರಿಗೆ ನ್ಯಾಯ ಸಿಗಬೇಕು ಎಂದು 10 ಕಾರ್ಯಕ್ರಮ ಘೋಷಣೆ ಮಾಡಿದ್ದೇವೆ. ವಿಜಯಪುರದಲ್ಲಿ ಎಂ.ಬಿ ಪಾಟೀಲ್ ಅವರ ನೇತೃತ್ವದಲ್ಲಿ, ಹುಬ್ಬಳ್ಳಿ ಧಾರವಾಡದಲ್ಲಿ ಹೆಚ್.ಕೆ ಪಾಟೀಲ್ ಅವರ ನೇತೃತ್ವದಲ್ಲಿ ಸಭೆ ಮಾಡಿ ಅಲ್ಲಿ ಈ ಭಾಗದ ಭೂಮಿಯನ್ನು ಹಸನಾಗಿಸಲು, ನೀರಾವರಿ ಸೌಲಭ್ಯ ನೀಡಲು ಐದು ವರ್ಷಗಳಲ್ಲಿ 2 ಲಕ್ಷ ಕೋಟಿ ಮೀಸಲಿಡಲು ತೀರ್ಮಾನಿಸಿದ್ದೇವೆ. ಇದು ಕಾಂಗ್ರೆಸ್ ಪಕ್ಷದ ವಚನ ಎಂದು ಹೇಳಿದರು.

ಮಹಾತ್ಮಾಗಾಂಧಿ ಅವರು ಕಾಂಗ್ರೆಸ್ ನಾಯಕತ್ವ ವಹಿಸಿದ ಬೆಳಗಾವಿಯಲ್ಲಿ ಪ್ರಜಾಧ್ವನಿ ಆರಂಭಿಸಿ, ಅಲ್ಲಿ ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಪ್ರತಿ ತಿಂಗಳು 200 ಯುನಿಟ್ ಉಚಿತ ಎಂಬ ಗೃಹಜ್ಯೋತಿ ಕಾಂಗ್ರೆಸ್ ನ ಮೊದಲ ಗ್ಯಾರೆಂಟಿ ಯೋಜನೆಯನ್ನು ಘೋಷಣೆ ಮಾಡಿದೆವು. ಆಮೂಲಕ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 1500 ರೂ. ಉಳಿತಾಯವಾಗುತ್ತದೆ. ನಾ ನಾಯಕಿ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ ಅವರ ಸಮ್ಮುಖದಲ್ಲಿ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಭತ್ಯೆಯಂತೆ ವರ್ಷಕ್ಕೆ 24 ಸಾವಿರ ನೀಡುವುದಾಗಿ ಗೃಹಲಕ್ಷ್ಮಿ ಎಂಬ ಕಾಂಗ್ರೆಸ್ ನ ಎರಡನೇ ಗ್ಯಾರೆಂಟಿ ಯೋಜನೆ ಘೋಷಿಸಿದ್ದೇವೆ.

ಹೆಣ್ಣು ಕುಟುಂಬದ ಕಣ್ಣು, ಹೆಣ್ಣಿನ ಶಕ್ತಿ ದೇಶದ ಶಕ್ತಿ, ಆಕೆಯ ನಾಯಕತ್ವ ಬೆಳೆಸಲು ನಾವು ನಾ ನಾಯಕಿ ಕಾರ್ಯಕ್ರಮ ಮಾಡಿದ್ದೇವೆ. ವೆಂಕಟೇಶ್ವರನನ್ನು ಲಕ್ಷ್ಮೀವೆಂಕಟೇಶ್ವರ, ಶಿವನನ್ನು ಪಾರ್ವತಿ ಪರಮೇಶ್ವರ, ಗಣೆಶನಿಗೆ ಗೌರಿಪುತ್ರ ಎಂದು ಕರೆಯುತ್ತೇವೆ. ಭೂಮಿಯನ್ನು ಭೂತಾಯಿ ಎಂದು ಕರೆಯುತ್ತೇವೆ, ಪೂಜಿಸುತ್ತೇವೆ. ಹೀಗಾಗಿ ಮಹಿಳೆಯರಿಗೆ ಶಕ್ತಿ ತುಂಬಬೇಕು. ಇದು ಕಾಂಗ್ರೆಸ್ ಪಕ್ಷದ ಸಂಕಲ್ಪ. ಸೋನಿಯಾ ಗಾಂಧಿ ಅವರು ದೇಶದ ಹಿತಕ್ಕಾಗಿ 2 ಬಾರಿ ದೇಶದ ಪ್ರಧಾನಮಂತ್ರಿ ಹುದ್ದೆಯನ್ನು ಒಬ್ಬ ಆರ್ಥಿಕ ತಜ್ಞನಿಗೆ ಬಿಟ್ಟುಕೊಟ್ಟರು. ಗ್ರಾಮಪಂಚಾಯ್ತಿ ಸ್ಥಾನವನ್ನೇ ಹಂಚಿಕೊಳ್ಳದ ಕಾಲದಲ್ಲಿ ಆ ತಾಯಿ ಪ್ರಧಾನಮಂತ್ರಿ ಹುದ್ದೆಯನ್ನು ಬಿಟ್ಟುಕೊಟ್ಟರು.

ಈ ಸಭೆ ಬಳಿಕ ನಾನು ಅರ್ಜಿ ಕಳುಹಿಸಿ ಕೊಡುತ್ತೇವೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಅಭ್ಯರ್ಥಿಗಳು ಈ ಅರ್ಜಿಯನ್ನು ಮನೆ ಮನೆಗೂ ಹೋಗಿ, ಮಹಿಳೆಯರರಿಂದ ಸಹಿ ಹಾಕಿಸಿ, ಎಷ್ಟು ಜನರಿಗೆ ನಮ್ಮ ಯೋಜನೆ ಬೇಕು ಎಂದು ಮಾಹಿತಿ ಕಲೆಹಾಕಬೇಕು. ಆಮೂಲಕ ನಮ್ಮ ಕಾರ್ಯಕ್ರಮವನ್ನು ಎಲ್ಲ ಮನೆಗಳಿಗೆ ತಲುಪಿಸಬೇಕು. ಈ ಕಾರ್ಯಕ್ರಮಗಳನ್ನು ನೀಡುವುದು ನಮ್ಮ ಪ್ರತಿಜ್ಞೆ.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಪೊಲೀಸರು ನಮಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಅವರಿಗೊಂದು ಸಲಾಂ. ಮುಂದೆ ನಮ್ಮ ಸರ್ಕಾರದಲ್ಲಿ ಅವರ ವರ್ಗಾವಣೆಗೆ, ಪೋಸ್ಟಿಂಗ್ ಗೆ ಲಂಚ ಪಡೆಯುವುದಿಲ್ಲ. ಅದೇನಿದ್ದರೂ ಬಿಜೆಪಿ ಸರ್ಕಾರದ ಕೆಲಸ. ಇನ್ನು ಅತ್ಯುತ್ತಮ ಕೆಲಸ ನಿರ್ವಹಿಸುತ್ತಿರುವ ಮಾಧ್ಯಮಗಳಿಗೂ ಒಂದು ನಮಸ್ಕಾರ ತಿಳಿಸುತ್ತೇನೆ ಎಂದರು.

*ನಾರಾಯಣಪುರ ಎಡದಂಡೆ ಕಾಲುವೆಯ ಆಧುನೀಕರಣ; ರಾಜ್ಯದ ನೀರಾವರಿ ಕ್ಷೇತ್ರದಲ್ಲಿ ಮೈಲಿಗಲ್ಲು ಯೋಜನೆ*

https://pragati.taskdun.com/narayanapura-edadande-kaluvepm-modicm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button