ರಾಜಕಾರಣದಲ್ಲಿ ಚಪ್ಪಾಳೆ ಹೊಡೆಯುವವರೂ ಇರ್ತಾರೆ, ಚಪ್ಪಲಿ ಎಸೆಯುವವರೂ ಇರ್ತಾರೆ; ಸಲೀಂ, ಉಗ್ರಪ್ಪಗೆ ಡಿಕೆಶಿ ತಿರುಗೇಟು
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಲೆಕ್ಷನ್ ಗಿರಾಕಿ, ಪರ್ಸಂಟೇಜ್ ಹೆಚ್ಚಿಸಿದ್ದಾರೆ ಎಂಬ ವಿ.ಎಸ್.ಉಗ್ರಪ್ಪ, ಸಲೀಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ.ಶಿವಕುಮಾರ್, ಅವರ ಹೇಳಿಕೆಗೂ, ನನಗೂ ಯಾವುದೇ ಸಂಬಂಧವಿಲ್ಲ, ನಾನು ಯಾವುದೇ ಪರ್ಸಂಟೇಜ್ ವಿಚಾರದಲ್ಲೂ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಉಗ್ರಪ್ಪ ಹಾಗೂ ಸಲೀಂ ವಿರುದ್ಧ ಈಗಾಗಲೇ ಕಾಂಗ್ರೆಸ್ ಶಿಸ್ತು ಪಾಲನಾ ಸಮಿತಿ ಕ್ರಮ ಕೈಗೊಂಡಿದೆ. ಇಬ್ಬರು ನಾಯಕರು ಆಡಿರುವ ಮಾತುಗಳು ಪಕ್ಷದ ಹೇಳಿಕೆಯಲ್ಲ, ಅದು ಅವರಿಬ್ಬರ ಆಂತರಿಕ ಸಂಭಾಷಣೆಗಳು. ಹಾಗಾಗಿ ಅವರ ಹೇಳಿಕೆಗೂ ಪಕ್ಷಕ್ಕೂ, ನನಗೂ ಯಾವುದೇ ಸಂಬಂಧವಿಲ್ಲ. ಇಬ್ಬರ ಮಾತುಗಳನ್ನು ಮಾಧ್ಯಗಳಲ್ಲಿ ಗಮನಿಸಿದ್ದೇನೆ. ಖಂಡಿತ ಅವರ ಮಾತುಗಳು ಮುಜುಗರವನ್ನುಂಟುಮಾಡಿದೆ. ಇಬ್ಬರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದರು.
ನಾನು ಯಾವುದೇ ಪರ್ಸಂಟೇಜ್ ತೆಗೆದುಕೊಳ್ಳುವವನೂ ಅಲ್ಲ, ಆ ವಿಚಾರಕ್ಕೂ ನನಗೂ ಸಂಬಂಧವೂ ಇಲ್ಲ. ಇನ್ನು ನನ್ನ ಬಾಡಿ ಲಾಂಗ್ವೆಜ್ ಬಗ್ಗೆಯೂ ಮಾತನಾಡಿದ್ದಾರೆ. ನಾನು ಹಳ್ಳಿಯಿಂದ ಬಂದವನು. ನನಗೆ ನನ್ನದೇ ಆದ ಬಾಡಿ ಲಾಂಗ್ವೆಜ್ ಇದೆ ಅದನ್ನು ಯಾರೂ ಬದಲಿಸಲು ಆಗಲ್ಲ. ನನಗೆ ನನ್ನದೇ ಆದ ವ್ಯಕ್ತಿತ್ವ, ಮಾತಿನ ಶೈಲಿ, ನಡೆತೆ ಇದೆ. ನನ್ನ ಬಾಡಿ ಲಾಂಗ್ವೆಜ್ ನ್ನು ಬದಲಿಸಿಕೊಳ್ಳಬೇಕಿಲ್ಲ, ಇಲ್ಲಿ ಯಾವುದೇ ಷಡ್ಯಂತ್ರ ನಡೆಸಬೇಕಿಲ್ಲ, ನಡೆಸುವ ಅಗತ್ಯವೂ ಇಲ್ಲ ಎಂದು ಹೇಳಿದರು.
ರಾಜಕೀಯ ಪಕ್ಷ, ರಾಜಕಾರಣ ಎಂದ ಮೇಲೆ ಚಪ್ಪಾಳೆ ಹೊಡೆಯುವವರೂ ಇರುತ್ತಾರೆ, ಚಪ್ಪಲಿ ಹೊಡೆಯುವವರೂ ಇರುತ್ತಾರೆ. ಮೊಟ್ಟೆ, ಕಲ್ಲು ಎಸೆಯುವವರೂ ಇರುತ್ತಾರೆ, ಜೈಕಾರ ಹಾಕುವವರು, ಘೋಷಣೆ ಕೂಗುವವರೂ ಇರುತ್ತಾರೆ. ಎಲ್ಲವನ್ನೂ ಸಮಾನವಾಗಿ ತೆಗೆದುಕೊಳ್ಳಬೇಕು. ಎಲ್ಲವರೂ ರಾಜಕೀಯದ ಒಂದು ಭಾಗ ಎಂದು ಹೇಳಿದರು.
ಕೋಲಾಹಲಕ್ಕೆ ಕಾರಣವಾದ ‘ಕೈ’ ನಾಯಕರ ಹೇಳಿಕೆ; ವಿ.ಎಸ್.ಉಗ್ರಪ್ಪ ಅಮಾನತು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ