Kannada NewsKarnataka NewsLatestPolitics

*ನಮ್ಮ ಆಣೆಕಟ್ಟುಗಳಿಗೆ ಭೇಟಿ ನೀಡಿ ವಾಸ್ತವಾಂಶ ಪರಿಶೀಲಿಸಲು ಪ್ರಾಧಿಕಾರದವರಿಗೆ ಮನವಿ ಮಾಡಿದ್ದೇವೆ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದವರು ಕರ್ನಾಟಕದ ಕಾವೇರಿ ನದಿಯ ಆಣೆಕಟ್ಟುಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವಾಂಶವನ್ನು ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದೇವೆ. ಆಗಲಾದರೂ ನಮ್ಮ ಪರಿಸ್ಥಿತಿ ಅವರಿಗೆ ಅರ್ಥವಾಗಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ನವದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕಾವೇರಿ ನೀರಿನ ವಿಚಾರವಾಗಿ ನಮ್ಮ ಅಧಿಕಾರಿಗಳ ಹೋರಾಟದ ಪರಿಣಾಮವಾಗಿ ಕಡಿಮೆ ನೀರು ಹರಿಸುವ ಆದೇಶ ಸಿಕ್ಕಿದೆ. ಆದರೂ ಕರ್ನಾಟಕದಲ್ಲಿ ಮಳೆಯ ಕೊರತೆಯಿಂದಾಗಿ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸುವುದು ಸಾವಾಲಿನ ವಿಚಾರ. ಹೀಗಾಗಿ ಕಾವೇರಿ ನೀರಿನ ವಿಚಾರವಾಗಿ ರಾಜ್ಯದ ಪರ ವಾದ ಮಾಡುತ್ತಿರುವ ಅಡ್ವಕೇಟ್ ಜೆನರಲ್ ಹಾಗೂ ಅವರ ಕಾನೂನು ತಜ್ಞರ ತಂಡ, ಅಧಿಕಾರಿಗಳು, ಕರ್ನಾಟಕ ಪ್ರತಿನಿಧಿಗಳು ಸೇರಿ ಚರ್ಚೆ ಮಾಡುತ್ತಿದ್ದೇವೆ ಎಂದರು.

ತಮಿಳುನಾಡಿನವರು 24 ಸಾವಿರ ಕ್ಯೂಸೆಕ್ ನೀರು ಕೇಳಿದ್ದರು. ನಮ್ಮ ಅಧಿಕಾರಿಗಳು ವಾಸ್ತವಾಂಶಗಳ ದಾಖಲೆ ಮಂಡಿಸಿದ ಪರಿಣಾಮ ತಮಿಳುನಾಡಿಗೆ ಹರಿಸುವ ನೀರಿನ ಪ್ರಮಾಣ 5 ಸಾವಿರ ಕ್ಯೂಸೆಕ್ ಗೆ ಇಳಿಸಲಾಗಿದೆ. ರಾಜ್ಯದಲ್ಲಿ ಮಳೆಯ ಕೊರತೆ, ಆಣೆಕಟ್ಟುಗಳಿಗೆ ಒಳಹರಿವಿನ ಪ್ರಮಾಣ ಕುಸಿದಿರುವ ಕಾರಣ, ಈ ಪ್ರಮಾಣದ ನೀರನ್ನು ಬಿಡುವುದು ಕಷ್ಟಕರವಾಗಿದೆ. ನಾವು ತಮಿಳುನಾಡಿನ ಹಕ್ಕಿನ ನೀರಿನ ಬಳಕೆ ಬಗ್ಗೆ ನಾವು ಪ್ರಶ್ನಿಸಲು ಸಾಧ್ಯವಿಲ್ಲ. ನಾವು ಎಷ್ಟು ನೀರು ಬಿಟ್ಟಿದ್ದೇವೆ ಎಂಬುದಕ್ಕೆ ಬಿಳಿಗುಂಡ್ಲುವಿನಲ್ಲಿ ಲೆಕ್ಕ ಇದೆ.

Home add -Advt

ಸರಿಯಾದ ಪ್ರಮಾಣದಲ್ಲಿ ಮಳೆಯಾಗಿ, ನೀರು ಇದಿದ್ದರೆ ನೀರು ಹರಿಸಲು ಯಾವುದೇ ಅಭ್ಯಂತರ ಇರುತ್ತಿರಲಿಲ್ಲ. ಈ ಹಿಂದೆ ಕೈಗೊಂಡ ನಿರ್ಧಾರಗಳನ್ನು ಗೌರವಿಸಿ ನೀರು ಹರಿಸಿದ್ದೇವೆ. ಪ್ರಾಧಿಕಾರದ ಅಧಿಕಾರಿಗಳು ನಮ್ಮ ಆಣೆಕಟ್ಟುಗಳಿಗೆ ಭೇಟಿ ನೀಡಿ ವಾಸ್ತವಾಂಶವನ್ನು ಕಣ್ಣಾರೆ ನೋಡಿ ಪರಿಶೀಲನೆ ನಡೆಸಲಿ ಎಂದು ಆಹ್ವಾನ ನೀಡಿದ್ದೇವೆ. ಆಗ ಕರ್ನಾಟಕದಲ್ಲಿ ನೀರಿನ ಸಮಸ್ಯೆಯ ತೀವ್ರತೆ ಅರಿವಾಗಲಿದೆ. ಪ್ರಾಧಿಕಾರದವರು ನಮ್ಮ ಮನವಿ ಪುರಸ್ಕರಿಸಿ, ನಮ್ಮ ರಾಜ್ಯ ಹಾಗೂ ರೈತರ ಹಿತ ಕಾಯುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ.

ಕರ್ನಾಟಕ ರೈತರ ಹಿತ ಕಾಯುವುದು ನಮ್ಮ ಮೊದಲ ಆದ್ಯತೆ. ನಾಳೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಯಲಿದ್ದು, ಈ ವಿಚಾರಣೆ ಮುಂದೂಕ್ಕೆ ಹೋಗುವ ಸಾಧ್ಯತೆ ಇದೆ. ಹೀಗಾಗಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವ ಬಗ್ಗೆ ನಮ್ಮ ಕಾನೂನು ಪ್ರತಿನಿಧಿಗಳ ಜತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಈ ಎಲ್ಲಾ ಯೋಜನೆಗಳಿಗೆ ಮೇಕೆದಾಟು ಯೋಜನೆಯೊಂದೇ ಪರಿಹಾರ. ಮೇಕೆದಾಟು ಆಣೆಕಟ್ಟು ಇದ್ದಿದ್ದರೆ ಸಂಕಷ್ಟದ ಸೂತ್ರದ ಮೂಲಕ ತಮಿಳುನಾಡಿಗೆ ನೀರು ಬಿಡಬಹುದಾಗಿತ್ತು. ಮೇಕೆದಾಟು ಯೋಜನೆ ತಮಿಳುನಾಡಿನ ಹಿತವನ್ನು ಕಾಯಲಿದೆ. ಹೀಗಾಗಿ ನಾವು ಈ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button