Karnataka NewsLatestPolitics

*ಶಾಸಕ ಸತೀಶ್ ಸೈಲ್ ಬಂಧನ ವಿಚಾರ: ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: “ಕೋಮು ಭಾವನೆ ಕೆರಳಿಸಿ, cಜನರನ್ನು ವಿಭಜಿಸಿ, ಬೆಂಕಿ ಹಚ್ಚುವುದೇ ಬಿಜೆಪಿ ನಾಯಕರ ಕೆಲಸ. ಅವರಿಗೆ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯಿಸಿದರು.

ಮದ್ದೂರು ಗಣೇಶ ವಿಸರ್ಜನೆ ವೇಳೆ ನಡೆದಿರುವ ಕಲ್ಲು ತೂರಾಟ ಹಾಗೂ ಅದರ ಬೆನ್ನಲ್ಲೇ ಬಿಜೆಪಿ ನಾಯಕರು ಮದ್ದೂರಿಗೆ ತೆರಳಿರುವ ಬಗ್ಗೆ ಕೇಳಿದಾಗ, “ಈ ಪ್ರಕರಣದ ಬಗ್ಗೆ ಈಗಾಗಲೇ ಸಿಎಂ, ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಕ್ರಿಯೆ ನಡಿದ್ದಾರೆ. ಹೊರ ರಾಜ್ಯಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ನನಗೆ ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನನಗೆ ಸಂಪೂರ್ಣ ಮಾಹಿತಿ ಸಿಗದೇ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ತಿಳಿಸಿದರು.

“ಬಿಜೆಪಿಯವರಿಗೆ ರಾಜಕಾರಣ ಮಾಡುವುದು ಬಿಟ್ಟು ಬೇರೆ ಕೆಲಸ ಏನಿದೆ? ಅವರು ದೆಹಲಿಗೆ ಹೋಗಿ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು, ನರೇಗಾ ಅನುದಾನ, ಮೇಕೆದಾಟು, ಮಹದಾಯಿ ನೀರಾವರಿ ಯೋಜನೆಗಳಿಗೆ ಅನುಮತಿ ತೆಗೆದುಕೊಂಡು ಬರಲಿ” ಎಂದು ಸವಾಲೆಸೆದರು.

Home add -Advt

ಬೆಂಗಳೂರು ನಗರ ಶಾಸಕರ ಜೊತೆಗೆ ಸಿಎಂ ಸಭೆ ಬಗ್ಗೆ ಕೇಳಿದಾಗ, “ಈ ಸಭೆ ಮಂಗಳವಾರ ನಿಗದಿಯಾಗಿತ್ತು. ನಾನು ಕೊಯಮತ್ತೂರಿಗೆ ಹೋಗಬೇಕಿದ್ದ ಹಿನ್ನೆಲೆಯಲ್ಲಿ ಮುಂದೂಡುವಂತೆ ತಿಳಿಸಿದ್ದೆ. ಬುಧವಾರ ಸಂಜೆ ಈ ಸಭೆ ನಡೆದಿದೆ” ಎಂದು ತಿಳಿಸಿದರು.

ಜಿಬಿಎ ಅಡಿಯಲ್ಲಿ ರಚನೆಯಾಗಿರುವ ನೂತನ ಪಾಲಿಕೆಗಳಿಗೆ ಉಸ್ತುವಾರಿ ಸಚಿವರ ನೇಮಕದ ಬಗ್ಗೆ ಕೇಳಿದಾಗ, “ಮಂತ್ರಿಗಳು ಎಂದ ಮೇಲೆ ಕೇವಲ ತಮ್ಮ ಕ್ಷೇತ್ರಗಳ ಕೆಲಸ ಮಾತ್ರ ನೋಡುವುದಷ್ಟೇ ಅಲ್ಲ. ಇಡೀ ಜಿಲ್ಲೆ ಕಡೆ ಗಮನಹರಿಸಬೇಕು. ಕೆಲವು ಕಡೆ ನಾವು ಸೋತಿರುವ ಕ್ಷೇತ್ರಗಳಿವೆ. ಆ ಕ್ಷೇತ್ರಗಳಲ್ಲಿ ಸಮನ್ವಯತೆ ಸಾಧಿಸಬೇಕು. ಹೀಗಾಗಿ ಸಚಿವರಿಗೆ ಜವಾಬ್ದಾರಿ ವಹಿಸಲಾಗಿದೆ. ಇದರ ಜೊತೆಗೆ ಪಕ್ಷದ ವತಿಯಿಂದಲೂ ಸಂಘಟನೆ ವಿಚಾರವಾಗಿ ಜವಾಬ್ದಾರಿ ನೀಡಲಾಗುವುದು” ಎಂದು ತಿಳಿಸಿದರು.

ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರ ಬಂಧನದ ವಿಚಾರವಾಗಿ ಕೇಳಿದಾಗ, “ಸತೀಶ್ ಸೈಲ್ ಅವರ ಬಂಧನದ ಅವಶ್ಯಕತೆ ಇರಲಿಲ್ಲ. ಈ ಪ್ರಕರಣದ ವಿಚಾರಣೆ 2010ರಿಂದಲೇ ನಡೆಯುತ್ತಿದೆ. ಕಾಂಗ್ರೆಸ್ ಶಾಸಕರ ಮೇಲೆ ಮಾತ್ರ ಗುರಿಯಾಗಿಸಿ ಇಂತಹ ದಾಳಿಗಳು ನಡೆಯುತ್ತಿವೆ. ಆಮೂಲಕ ಕಾಂಗ್ರೆಸ್ ನಾಯಕರಿಗೆ ತೊಂದರೆ ನೀಡುವ ಕೆಲಸ ನಡೆಯುತ್ತಿದೆ” ಎಂದು ತಿಳಿಸಿದರು.

“ಜವಾಹರ್ ಬಾಲ ಮಂಚ್ ವತಿಯಿಂದ ಸುಮಾರು 24 ಮಕ್ಕಳನ್ನು ರಾಜಸ್ಥಾನದಲ್ಲಿ ನಡೆಯಲಿರುವ ರಾಷ್ಟ್ರೀಯ ಶಿಬಿರಕ್ಕೆ ಕಳುಹಿಸಲಾಗುತ್ತಿದೆ. ಅವರಿಗೆ ಶುಭ ಹಾರೈಸುತ್ತಿದ್ದೇನೆ. ನಾನೇ ಈ ಮಕ್ಕಳ ಪ್ರಯಾಣ ವೆಚ್ಚವನ್ನು ಭರಿಸಿ ಕಳುಹಿಸುತ್ತಿದ್ದೇನೆ” ಎಂದು ತಿಳಿಸಿದರು.

Related Articles

Back to top button