Latest

*ನಾವೂ ಆಂಜನೇಯನ ಭಕ್ತರೇ; ಪ್ರಣಾಳಿಕೆಯಲ್ಲಿನ ಘೋಷಣೆಗಳಿಗೆ ಕಾಂಗ್ರೆಸ್ ಬದ್ಧ ಎಂದ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಜರಂಗದಳ ನಿಷೇಧ ಎಂಬ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ ವಿಚಾರ ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಕೈ ನಾಯಕರ ವಿರುದ್ಧ ಬಿಜೆಪಿ ಕೆಂಡಾಮಂಡಲವಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಯಾವುದೇ ಬದಲಾವಣೆಯಿಲ್ಲ, ಈ ವಿಚಾರದಲ್ಲಿ ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಾವೂ ಆಂಜನೇಯನ ಭಕ್ತರೇ. ಆಂಜನೇಯನಿಗೂ, ಬಜರಂಗದಳಕ್ಕೂ ಏನು ಸಂಬಂಧ? ಅವರು ಮಾತ್ರ ಆಂಜನೇಯನ ಭಕ್ತರಾ? ಇದು ಶಾಂತಿಯ ತೋಟ, ಶಾಂತಿ, ಸೌಹಾರ್ದತೆಯಿಂದ ಇರಬೇಕು. ಬಜರಂಗದಳ ಬ್ಯಾನ್ ಮಾಡ್ತೀವಿ ಎಂದರೆ ಅವರ್ಯಾಕೆ ಗಾಬರಿಯಾಗಬೇಕು? ಆಂಜನೇಯನಿಗೂ ಬಜರಂಗದಳಕ್ಕೂ ಯಾವುದೇ ಸಂಬಂಧವಿಲ್ಲ, ಎರಡೂ ಬೇರೆ ಬೇರೆ. ಆಂಜನೇಯನ ಹೆಸರಿಟ್ಟುಕೊಂಡ ಮಾತ್ರಕ್ಕೆ ಎರಡೂ ಒಂದೇ ಎಂದು ಹೇಳುವುದು ತಪ್ಪು. ಬಿಜೆಪಿಯವರು ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಜನರಿಗೂ ಅರ್ಥವಾಗಿದೆ ಎಂದು ತಿರುಗೇಟು ನೀಡಿದರು.

ನಾವು ಹನುಮಂತನ ಭಕ್ತರು. ಆಂಜನೇಯ ಬೇರೆ, ಬಜರಂಗದಳ ಬೇರೆ. ಬಿಜೆಪಿಯವರು ಬಜರಂಗಿ ಎಂದು ಅಭಿಯಾನ ಮಾಡುವುದು ಬೇಡ. ಕುಂಬಳಕಾಯಿ ಕಳ್ಳ ಎಂದರೆ ಅವರ್ಯಾಕೆ ಹೆಗಲು ಮುಟ್ಟಿಕೊಳ್ತಿದ್ದಾರೆ. ಮೊದಲು ಬಿಜೆಪಿಯವರು ಜನರನ್ನು ಪ್ರಚೋದಿಸಿ ಗಲಾಟೆ ಮಾಡುವುದನ್ನು, ಶಾಂತಿ ಕದಡುವುದನ್ನು ನಿಲ್ಲಿಸಲಿ. ಕ್ಯಾಂಪೇನ್ ಮಾಡುವ ಬದಲು ಮೊದಲು ಜನರ ಹೊಟ್ಟೆಗೆ ಏನ್ ಕೊಟ್ಟಿದ್ದಾರೆ ಹೇಳಲಿ, ಉದ್ಯೋಗ ಏನ್ ಕೊಟ್ಟಿದ್ದಾರೆ ಹೇಳಲಿ ಎಂದು ಗುಡುಗಿದರು.

ಕಾಂಗ್ರೆಸ್ ವಿರುದ್ಧ ಹನುಮ ಚಾಲೀಸಾ ಪಠಣೆ ಮಾಡಲು ಹಿಂದೂಪರ ಸಂಘಟನೆಗಳು ಮುಂದಾದ ವಿಚಾರವಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್, ಹನುಮಾನ್ ಚಾಲೀಸ ನಾವೂ ದಿನಾ ಪಠಣೆ ಮಾಡ್ತೀವಿ. ಅವರೊಬ್ಬರೇನಾ ಮಾಡೋದು? ಈ ಹಿಂದಿನ ಆರ್ ಎಸ್ ಎಸ್ ಬೇರೆ ಈಗಿರುವ ಆರ್ ಎಸ್ ಎಸ್ ಬೇರೆ. ಹಾಗೇ ಆಂಜನೇಯ ಬೇರೆ, ಬಜರಂಗದಳ ಬೇರೆ ಎಂದು ಹೇಳಿದರು.

https://pragati.taskdun.com/mallikarjuna-khargereactionbajarangadal-bancongressbjp/


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button