For Rent- Torgal
Emergency Service

*ಬೊಮ್ಮಾಯಿ ಅವರದ್ದು ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಸಲಹೆ: ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾವೇರಿ ನೀರು ವಿಚಾರವಾಗಿ ಸುಪ್ರೀಂ ಕೋರ್ಟಿನಲ್ಲಿ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಸಲಹೆಯನ್ನು ಮಾಜಿ ಸಿಎಂ ಬೊಮ್ಮಾಯಿ ನೀಡುತ್ತಿದ್ದಾರೆ. ನೀರು ಬಿಡಲು ನಾವು ತಯಾರಿಲ್ಲ, ಹೀಗಾಗಿ ಕಾನೂನು ಹೋರಾಟ ನಡೆಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಬೆಂಗಳೂರಿನ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನೀರು ಬಿಡುಗಡೆ ಮಾಡದೆ ಕಾನೂನು ಹೋರಾಟ ನಡೆಸಬೇಕು ಎಂಬ ಬೊಮ್ಮಾಯಿ ಅವರ ಸಲಹೆ, ಕೋರ್ಟ್ ನಲ್ಲಿ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವಂತದ್ದು ಎಂದರು.

ಬೊಮ್ಮಾಯಿ ಅವರ ಕಾಲದಲ್ಲಿ ಎಷ್ಟು ನೀರು ಬಿಟ್ಟಿದ್ದರು ಎನ್ನುವ ದಾಖಲೆಗಳು ನಮ್ಮ ಬಳಿ ಇವೆ. ಆದರೆ ಸುಪ್ರೀಂ ಕೋರ್ಟ್ ಅನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ನೀರು ಬಿಡಬೇಡಿ ಎಂದು ಬೊಮ್ಮಾಯಿ ಹೇಳುತ್ತಾರೆ. ಕಾವೇರಿ ನೀರು ನಿರ್ವಹಣಾ ಸಮಿತಿಯ ಆದೇಶ ಪಾಲನೆ ಮಾಡಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದರೆ, ಬೊಮ್ಮಾಯಿ ಹಾಗೂ ನನ್ನ ಬಳಿ ಯಾವ ಆಯ್ಕೆ ಇದೆ?

ಬೊಮ್ಮಾಯಿ ಅವರು ರಾಜಕಾರಣ ಬದಿಗಿಡಲಿ. ಕೂಡಲೇ ಪ್ರಧಾನಿಗಳಿಗೆ ಮಧ್ಯಸ್ತಿಕೆ ವಹಿಸುವಂತೆ ಒತ್ತಡ ತರಲಿ. ನೀರು ನಿರ್ವಹಣಾ ಸಮಿತಿಗೂ ಮನವಿ ಸಲ್ಲಿಸಲಿ. ರಾಜ್ಯದ ಹಿತವನ್ನು ಅವರು ಮೊದಲು ಕಾಪಾಡಲಿ, ರಾಜಕಾರಣ ಬದಿಗಿಡಲಿ ಎಂದು ಹೇಳಿದರು.

ನಾನು ಶೀಘ್ರದಲ್ಲೇ ದೆಹಲಿಗೆ ಹೋಗಲಿದ್ದು, ಸಂಸದರನ್ನು ಭೇಟಿ ಮಾಡಿ ಮನವಿ ಮಾಡಲಿದ್ದೇನೆ.‌ ಮಧ್ಯಸ್ತಿಕೆ ವಹಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ ಎಂದರು.

ದೇವೇಗೌಡರು ಸರಿಯಾಗಿ ಹೇಳಿದ್ದಾರೆ:

ರಾಜ್ಯಸಭೆಯಲ್ಲಿ ಸೋಮವಾರ ಮಾತನಾಡಿದ ಎಚ್.ಡಿ.ದೇವೇಗೌಡರು “ನ್ಯಾಯಲಯದ ಹೊರಗಡೆ ಇತ್ಯರ್ಥ ಮಾಡಿಕೊಳ್ಳಿ” ಎಂದು ಸಲಹೆ ನೀಡಿರುವುದು ಸರಿಯಾಗಿದೆ. ಹಿರಿತನದ ಅನುಭವದ ಮೇಲೆ ಅವರು ಮಾತನಾಡಿದ್ದಾರೆ. ಅವರ ಸಲಹೆ ಸ್ವೀಕಾರ್ಹವಾಗಿದೆ.

ನೀರಾವರಿ ಸಚಿವರಾಗಿದ್ದ ಬೊಮ್ಮಾಯಿ ಅವರು ಉಪಯುಕ್ತ ಸಲಹೆ ನೀಡಲಿ. ಅವರೇ ನೇಮಕ ಮಾಡಿದ ಕಾನೂನು ತಜ್ಞರೇ ಈಗಲೂ ಇದ್ದಾರೆ. ಅವರ ಮಾತನ್ನು ಕೇಳಬೇಕೊ ಅಥವಾ ಇವರ ಮಾತನ್ನು ಕೇಳಬೇಕೊ? ಒಳ್ಳೆ ಸಲಹೆ ನೀಡಿದರೆ ಮಾತ್ರ ಅವರ ಮಾತನ್ನು ಕೇಳುತ್ತೇವೆ ಎಂದರು.

ಹಿರಿಯ ವಕೀಲರಾದ ನಾರಿಮನ್ ಅವರ ಸಲಹೆ ಕೇಳಿದ್ದೀರಾ ಎನ್ನುವ ಪ್ರಶ್ನೆಗೆ “ಈಗ ಇರುವ ತಂಡದಲ್ಲಿ ಅವರ ಶಿಷ್ಯರೇ ಇದ್ದಾರೆ, ಸಲಹೆ ಕೇಳಿದ್ದೇವೆ. ಇದರ ಬಗ್ಗೆ ಆನಂತರ ಮಾತನಾಡುವೆ” ಎಂದರು.


Beereshwara 27
Bottom Ad 1
Bottom Ad 2

You cannot copy content of this page