ಬೆಳಗಾವಿ ಗಡಿವಿವಾದ; ನಮ್ಮ ಊರು, ಹಳ್ಳಿ ನಮ್ಮದು; ಬಿಜೆಪಿ ರಾಜಕೀಯ ಬಿಟ್ಟು ಯೋಚಿಸಲಿ ಎಂದ ಡಿ.ಕೆ.ಶಿವಕುಮಾರ್
ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ದೊರಕಿಸಿಕೊಟ್ಟು 10 ವರ್ಷ ಪೂರ್ಣಗೊಂಡಿದ್ದು, ಇದರಿಂದ ಈ ಭಾಗದ ಜನರಿಗೆ ಆಗಿರುವ ಅನುಕೂಲಗಳ ಬಗ್ಗೆ ಅರಿವು ಮಾಡಿಕೊಡಬೇಕು. ನಮ್ಮ ಪಕ್ಷದ ಆಚಾರ, ವಿಚಾರ ತಿಳಿಸಬೇಕು. ಈ ನಿಟ್ಟಿನಲ್ಲಿ ಇಂದು ಪೂರ್ವಭಾವಿ ಸಭೆ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕಲಬುರ್ಗಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಡೀ ಕಲ್ಯಾಣ ಕರ್ನಾಟಕ ಭಾಗದ ಜನ ರಾಹುಲ್ ಗಾಂಧಿ ಅವರ ಭಾರತ ಐಕ್ಯತಾ ಯಾತ್ರೆ ಸಂದರ್ಭದಲ್ಲಿ ಅತ್ಯಂತ ಉತ್ಸಾಹ ಹಾಗೂ ಪ್ರೀತಿ ತೋರಿದ್ದಾರೆ. ಬಳ್ಳಾರಿಯಲ್ಲಿ ಐತಿಹಾಸಿಕ ಪಕ್ಷದ ಶಕ್ತಿ ಪ್ರದರ್ಶನ ಮಾಡಲಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅವರ ಭರವಸೆ ಕೇವಲ ಕಾಗದದ ಮೇಲೆ ಉಳಿದಿದ್ದು, ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಇದೇ 10 ರಂದು 371 ಜೆ ತಿದ್ದುಪಡಿ ಜಾರಿಗೆ ಪರಿಶ್ರಮ ಹಾಗೂ ಅದು ಜಾರಿಯಾದ ನಂತರ ಜನರ ಬದುಕಿನಲ್ಲಿ ಆಗುವ ಬದಲಾವಣೆ ಬಗ್ಗೆ ತಿಳಿಸಲಾಗುವುದು ಎಂದರು.
ಬಿಜೆಪಿ ಕೇವಲ ಭಾವನೆಗಳ ವಿಚಾರದ ಮೇಲೆ ರಾಜಕೀಯ ಮಾಡುತ್ತದೆ. ನಮ್ಮ ಪಕ್ಷ ಜನರ ಬದುಕಿನ ಬಗ್ಗೆ ಚಿಂತನೆ ನಡೆಸಿದೆ. ಕಲ್ಬುರ್ಗಿ ಕಾರ್ಯಕ್ರಮದಲ್ಲಿ ಯಾರೆಲ್ಲಾ ರಾಷ್ಟ್ರೀಯ ನಾಯಕರು ಭಾಗಿಯಾಗಲಿದ್ದಾರೆ ಎಂಬ ಪ್ರಶ್ನೆಗೆ, ‘ ಈ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಆಹ್ವಾನ ನೀಡುತ್ತೇವೆ ‘ ಎಂದರು.
ಕಾಂಗ್ರೆಸ್ ನಲ್ಲಿ ಬಹಳಷ್ಟು ರೌಡಿಗಳಿದ್ದು, ಲೆಕ್ಕ ಹಾಕಿ ಹೇಳಲಿ ಎಂಬ ಬಿಜೆಪಿ ಮುಖಂಡರ ಹೇಳಿಕೆ ಬಗ್ಗೆ ಕೇಳಿದಾಗ, ‘ ಈಗ ಅವರು ಯಾರ ಜತೆ ಪ್ರೀತಿ, ವಿಶ್ವಾಸ ಹೊಂದಿದ್ದಾರೆ, ಅವರ ಸಂಸ್ಕೃತಿ ಏನು ಎಂಬುದು ಎಲ್ಲವೂ ಬಹಿರಂಗವಾಗುತ್ತಿದೆ. ಇದೇನು ಹೊಸತಲ್ಲ. ತಮ್ಮಲ್ಲಿರುವ ಕಲಹ ಬಿಟ್ಟು ಬೇರೆಯವರ ಕಲಹದ ಬಗ್ಗೆ ಮಾತನಾಡುತ್ತಾರೆ ‘ ಎಂದರು.
ಪಕ್ಷಕ್ಕೆ ಬೇರೆ ಪಕ್ಷದ ನಾಯಕರ ಸೇರ್ಪಡೆ ಬಗ್ಗೆ ಕೇಳಲಾದ ಪ್ರಶ್ನೆಗೆ, ‘ ನಮ್ಮ ಪಕ್ಷದ ಸಿದ್ಧಾಂತ ಹಾಗೂ ನಾಯಕತ್ವ ಒಪ್ಪಿ ಯಾರೆಲ್ಲಾ ಷರತ್ತುರಹಿತವಾಗಿ ಪಕ್ಷ ಸೇರಲು ಬಯಸುತ್ತಾರೋ ಅವರು ಅರ್ಜಿ ಹಾಕಲಿ. ಇದುವರೆಗೂ ನಾವು ಯಾರ ಜತೆ ಸಂಪರ್ಕ ಹೊಂದಿದ್ದೇವೆ ಎಂಬುದರ ಬಗ್ಗೆ ಈಗ ಬಹಿರಂಗಪಡಿಸುವುದಿಲ್ಲ. ಈ ವಿಚಾರವಾಗಿ ಅಲ್ಲಂ ವೀರಭದ್ರಪ್ಪ ಅವರ ಸಮಿತಿ ಇದೆ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಂದ ಹಿಡಿದು ಸ್ಥಳೀಯ ಮಟ್ಟದ ನಾಯಕರವರೆಗೆ ಎಲ್ಲರ ಜತೆ ಚರ್ಚೆ ಮಾಡಿ, ಪಕ್ಷಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳಲಾಗುವುದು ‘ ಎಂದು ತಿಳಿಸಿದರು.
ಪಕ್ಷದ ನಾಯಕರಲ್ಲಿ ಅಂತರ ಹೆಚ್ಚಾಗುತ್ತಿದೆಯಲ್ಲಾ ಎಂಬ ಪ್ರಶ್ನೆಗೆ, ‘ ನಮ್ಮಲ್ಲಿ ಯಾವುದೇ ಅಂತರವಿಲ್ಲ. ಇದನ್ನು ಬಿಜೆಪಿ ಹಾಗೂ ಮಾಧ್ಯಮದವರು ಸೃಷ್ಟಿಸುತ್ತಿದ್ದಾರೆ. ರಾಜಕೀಯ ನಿಂತ ನೀರಲ್ಲ. ಇಲ್ಲಿ ಯಾರೂ ಶಾಶ್ವತವಲ್ಲ. ಪಿಜಿಆರ್ ಸಿಂಧ್ಯಾ ಅವರ ಜತೆ ನಾನು ಚುನಾವಣೆಯಲ್ಲಿ ಹೋರಾಡಿದರೂ, ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿಲ್ಲವೇ?. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರ ಮಧ್ಯೆ ಅಂತರ ಇದ್ದರೂ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಪತ್ರ ನೀಡಲಿಲ್ಲವೇ? ಬಿಜೆಪಿಯಲ್ಲಿ ಬಿರುಕಿದ್ದು, ನಮ್ಮಲ್ಲಿ ಬಿರುಕು ಮೂಡಿಸಲು ಯತ್ನಿಸುತ್ತಿದ್ದಾರೆ. ಅವರ ಪಕ್ಷದಲ್ಲಿ ಜಗದೀಶ್ ಶೆಟ್ಟರ್, ಸದಾನಂದಗೌಡರು, ಬಸನಗೌಡ ಯತ್ನಾಳ್, ಯಡಿೂರಪ್ಪನವರ ಗುಂಪು ಇಲ್ಲವೇ. ಅವರ ಪಕ್ಷದಲ್ಲಿ ಸಾಕಷ್ಟು ಸಮಸ್ಯೆಗಳಿವೆ ‘ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಯಾವ ಕ್ಷೇತ್ರಕ್ಕೆ ಟಿಕೆಟ್ ಬೇಕು ಎಂದು ಅರ್ಜಿ ಹಾಕಿದ್ದಾರೆ ಎಂದು ಕೇಳಿದಾಗ, ‘ ಹೈಕಮಾಂಡ್ ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಅವರು ಪಕ್ಷದ ಹೈಕಮಾಂಡ್ ಗೆ ಜವಾಬ್ದಾರಿ ಬಿಟ್ಟಿದ್ದಾರೆ. ನಮ್ಮ ಪಕ್ಷದಲ್ಲಿ ಈ ಮಟ್ಟದ ಶಿಸ್ತು ಇದೆ. ಯತೀಂದ್ರ ಅವರು ಹೇಳಿದ್ದರಲ್ಲಿ ತಪ್ಪೇನಿದೆ? ‘ ಎಂದರು.
ರೌಡಿ ನಾಗ ಸಚಿವ ಸೋಮಣ್ಣ ಅವರ ನಿವಾಸಕ್ಕೆ ಭೇಟಿ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಅವರ ಪಕ್ಷದಲ್ಲಿ ಕಾರ್ಯಕರ್ತರು ಇಲ್ಲ. ಹೀಗಾಗಿ ರೌಡಿಗಳನ್ನು ಸೇರಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದು, ಹೀಗಾಗಿ ಅವರು ರೌಡಿಗಳನ್ನು ಸೇರಿಸಿಕೊಳ್ಳುತ್ತಿದ್ದಾರೆ ‘ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಹತ್ಯೆ ಹೆಚ್ಚಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ‘ ಅವರು ಅಧಿಕಾರ ಕಳೆದುಕೊಂಡು, ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಗಾಬರಿಯಲ್ಲಿ ಇಂತಹ ಹೇಳಿಕೆ ನೀಡುತ್ತಿದ್ದಾರೆ. ನೇಮಕಾತಿ, ಗುತ್ತಿಗೆಯಲ್ಲಿ ಲೂಟಿ ಮಾಡಿ ಆಯಿತು. ಕಡೆಗೆ ಈಗ ಮತ ಕದಿಯುತ್ತಿದ್ದಾರೆ. ಪರಿಶಿಷ್ಟರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಮತದಾರರ ಹೆಸರು ಕೈಬಿಡಲಾಗಿದೆ. ಇದರಿಂದ ರಾಜ್ಯದ ಗೌರವ ನಾಶ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ಜಾಗತಿಕ ಮಟ್ಟದಲ್ಲಿ ಇದ್ದ ಕೀರ್ತಿಯನ್ನು ಅಳಿಸಿ, ದೇಶದ ಭ್ರಷ್ಟಾಚಾರದ ರಾಜಧಾನಿ ಎಂಬ ಕುಖ್ಯಾತಿ ನೀಡಿದ್ದಾರೆ ‘ ಎಂದರು.
ಬೆಳಗಾವಿ ಗಡಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ ಸರ್ಕಾರ ಈ ವಿಚಾರದಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ನಮ್ಮ ಊರು, ನಮ್ಮ ಹಳ್ಳಿ ನಮ್ಮದು. ಅವರದು ಅವರಿಗೆ. ಇದರಲ್ಲಿ ಬದಲಾವಣೆ ಅಸಾಧ್ಯ. ಜನ ನೆಮ್ಮದಿಯಾಗಿ ಬದುಕಲು ಬಿಡಬೇಕು’ ಎಂದು ತಿಳಿಸಿದರು.
ಮಾನಸಿಕ ಒತ್ತಡವಿಲ್ಲದೆ, ಮುಕ್ತವಾಗಿ ವಿದ್ಯೆ ಕಲಿಯುವುದು 21 ನೇ ಶತಮಾನದ ಅವಶ್ಯಕತೆ: ಬಸವರಾಜ ಬೊಮ್ಮಾಯಿ
https://pragati.taskdun.com/rajata-chunchadri-kridotsava-2022cm-basavaraj-bommmaishivamogga/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ