Kannada NewsKarnataka NewsLatestPolitics

*ಖಂಡ್ರೆ ಕುಟುಂಬ ಕಾಂಗ್ರೆಸ್ ಪಕ್ಷದ ದೊಡ್ಡ ಆಸ್ತಿ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಭೀಮಣ್ಣ ಖಂಡ್ರೆ ಅವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ವೀರಶೈವ ಸಮಾಜದ ಅಧ್ಯಕ್ಷರಾಗಿ ಕೆಲಸ ಮಾಡಿ ಇಡೀ ರಾಜ್ಯದಲ್ಲಿ ಸಂಘಟನೆ ಮಾಡಿದ್ದಾರೆ. ಈ ಕುಟುಂಬ ಕಾಂಗ್ರೆಸ್ ಪಕ್ಷದ ದೊಡ್ಡ ಆಸ್ತಿ. ಈ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಭೀಮಣ್ಣ ಖಂಡ್ರೆ ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿ ನಮನ ಸಲ್ಲಿಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಬದುಕಿನಲ್ಲಿ ದೊಡ್ಡ ಸಾಧನೆ ಮಾಡಿದ ದೊಡ್ಡ ಶಕ್ತಿಗೆ ನಮನ ಸಲ್ಲಿಸಲು ನಾವು ಬಂದಿದ್ದೇವೆ. 1989ರಿಂದ ಭೀಮಣ್ಣ ಖಂಡ್ರೆ ಅವರ ಜೊತೆಗೆ ವಿಧಾನಸಭೆಯಲ್ಲಿ ಒಟ್ಟಿಗೆ ಕೆಲಸ ಮಾಡುವ ಭಾಗ್ಯ ನನಗೆ ಸಿಕ್ಕಿತ್ತು. ಅವರನ್ನು ಸಚಿವರನ್ನಾಗಿ ನೋಡಿದ್ದೇನೆ. ಅವರ ಮಗ ವಿಜಯ್ ಕುಮಾರ್ ಖಂಡ್ರೆ ಅವರ ಜೊತೆಗೂ ಶಾಸಕನಾಗಿ ಕೆಲಸ ಮಾಡಿದ್ದೇನೆ. ಈಶ್ವರ್ ಖಂಡ್ರೆ ಅವರ ಜೊತೆ ಶಾಸಕನಾಗಿ, ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಅವರು ನನ್ನ ಜೊತೆ ಪಕ್ಷದ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರ ಮೊಮ್ಮಗ ಸಾಗರ್ ಖಂಡ್ರೆ ಅವರು ಸಂಸದರಾಗಿ ನಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದರು.

Home add -Advt

“ವಿದ್ಯಾ ಕ್ಷೇತ್ರ ಸೇರಿದಂತೆ ಬೀದರ್ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಒಂದು ಮಗು ಹುಟ್ಟಿದಾಗ ಆ ಮಗು ಅಳುತ್ತದೆ, ಸಮಾಜ ಖುಷಿ ಪಡುತ್ತದೆ. ಅದೇ ವ್ಯಕ್ತಿ ಲಿಂಗೈಕ್ಯರಾದಾಗ ಅವರ ಸಾಧನೆ ಸ್ಮರಿಸಿ ಸಮಾಜ ದುಃಖಪಡುತ್ತದೆ. ಈ ಕಾರಣಕ್ಕೆ ನಾನು ದೆಹಲಿಯಲ್ಲಿದ್ದರೂ, ಸಿಎಂ ಬೆಂಗಳೂರಿನಲ್ಲಿ ಇದ್ದರೂ ನಮ್ಮ ಕೆಲಸಗಳನ್ನು ಬದಿಗೊತ್ತಿ ಅಂತಿಮ ನಮನ ಸಲ್ಲಿಸಲು ಬಂದಿದ್ದೇವೆ” ಎಂದರು.

“ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಬರಲು ಬಹಳ ಪ್ರಯತ್ನ ಪಟ್ಟರು. ಆದರೆ ಬೇರೆ ರಾಜ್ಯಗಳ ಚುನಾವಣೆ ಸಂಬಂಧ ಸರಣಿ ಸಭೆಗಳಿರುವ ಕಾರಣ ಬರಲು ಆಗಲಿಲ್ಲ. ನಾವು ಪಕ್ಷ ಹಾಗೂ ಸರ್ಕಾರದ ಪರವಾಗಿ ಬಂದಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದರು.

Related Articles

Back to top button