Kannada NewsKarnataka NewsLatestPolitics

*ಪ್ರಚಾರಕ್ಕಾಗಿ ಎರಡು ಗಿಡ ನೋಡೋದಲ್ಲ; BJP-JDS ಬರ ಅಧ್ಯಯನಕ್ಕೆ ಡಿಸಿಎಂ ವ್ಯಂಗ್ಯ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪ್ರತ್ಯೇಕ ತಂಡಗಳನ್ನು ರಚನೆ ಮಾಡಿ ರಾಜ್ಯದಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಂಡಿರುವ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಈಗಾಗಲೇ ರಾಜ್ಯ ಸರ್ಕಾರ ಬರ ಅಧ್ಯಯನ ನಡೆಸಿ ವರದಿ ಕೊಟ್ಟಿದೆ. ಕೇಂದ್ರ ವರದಿ ಸ್ವೀಕರಿಸಿ ಅಧಿಕಾರಿಗಳನ್ನು ಕಳುಹಿಸಿಕೊಟ್ಟಿದೆ. ಈಗ ಬಿಜೆಪಿ ಹಾಗೂ ಜೆಡಿಎಸ್ ನವರಿಗೆ ಜನರ ಮೇಲೆ ಬಹಳ ಅನುಕಂಪ ಬಂದು ಬರ ಅಧ್ಯಯನಕ್ಕೆ ಹೊರಟಿದ್ದಾರೆ ಎಂದು ಟಾಮ್ಗ್ ನೀಡಿದರು.

ಪ್ರಚಾರಕ್ಕಾಗಿ ಎರಡು ಗಿಡಗಳನ್ನು ನೋಡುವುದಲ್ಲ. ಜನರ ಬಗ್ಗೆ ಕಾಳಜಿ ಇದ್ದರೆ ಬಿಜೆಪಿ, ಜೆಡಿಎಸ್ ಶಾಸಕರು ಅನುದಾನವನ್ನು ಕೊಡಿಸುವ ಕೆಲಸ ಮಾಡಲಿ. ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಪರಿಹಾರ ಕೊಡಿಸಲಿ. ಅದನ್ನು ಬಿಟ್ಟು ಪ್ರಚಾರಕ್ಕಾಗಿ ಬರ ಅಧ್ಯಾನ ಎನ್ನುತ್ತಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರದ ಬಳಿ ನಾವೇನು ಭಿಕ್ಷೆ ಕೇಳುತ್ತಿಲ್ಲ. ಕೇಂದ್ರ ಸರ್ಕಾರ ಮೊದಲು ಕರ್ನಾಟಕಕ್ಕೆ ಕೊಡಬೇಕಾದ ಅನುದಾನ ಕೊಡಲಿ ಎಂದು ಹೇಳಿದರು.

ಬರ ಪರಿಸ್ಥಿತಿ ನಿರ್ವಹಣೆಗೆ ರಾಜ್ಯ ಸರ್ಕಾರ 800 ಕೋಟಿ ಹಣ ಬಿಡುಗಡೆಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ. ಕುಡಿಯುವ ನೀರು, ಪಶುಗಳಿಗೆ ಮೇವು ಪೂರೈಕೆಗೆ ಆದ್ಯತೆ ನೀಡಲು ತಿಳಿಸಿದ್ದೇವೆ.

ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲೂಕು ಬರಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ನರೇಗಾ ಯೋಜನೆಯ ಮೂಲಕ ಸೀಮಿತ ಇರುವ ಉದ್ಯೋಗ ದಿನವನ್ನು 100ರಿಂದ 150 ದಿನಕ್ಕೆ ವಿಸ್ತರಣೆ ಮಾಡಲು ಪ್ರಸ್ತಾಪ ಇಟ್ಟಿದ್ದು ಕೇಂದ್ರ ಸರ್ಕಾರ ಇನ್ನೂ ತೀರ್ಮಾನ ಮಾಡಿಲ್ಲ.

ರಾಜ್ಯದ ಹಿತಕ್ಕಾಗಿ ಸಂಸದರು ಹಾಗೂ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಶಾಸಕರು ಕೇಂದ್ರ ಸರ್ಕಾರದ ಬಳಿ ಒತ್ತಡ ಹೇರಲಿ. ಆನಂತರ ಅವರು ರಾಜಕಾರಣ ಮಾಡಲಿ. ಅವರ ರಾಜಕಾರಣಕ್ಕೆ ನಾವು ಬೇಡ ಎನ್ನುವುದಿಲ್ಲ.

ಕೇಂದ್ರ ಸರ್ಕಾರ ಉದ್ಯೋಗ ದಿನ ಹೆಚ್ಚಿಸದಿದ್ದರೆ, ನಾವೇ ಹೆಚ್ಚಳ ಮಾಡುತ್ತೇವೆ:

ನಾವು ಕೇಂದ್ರದ ಬಳಿ ಭಿಕ್ಷೆ ಬೇಡುತ್ತಿಲ್ಲ. ಕಾನೂನು ಪ್ರಕಾರ ಬರ ಪರಿಸ್ಥಿತಿ ಇದ್ದಾಗ ನರೇಗಾ ಯೋಜನೆಯಡಿ ನೀಡುವ ಉದ್ಯೋಗ ದಿನಗಳನ್ನು 150 ದಿನಗಳಿಗೆ ಹೆಚ್ಚಳ ಮಾಡಬೇಕು. ಈ ಉದ್ಯೋಗ ದಿನ ಹೆಚ್ಚಳ ಮಾಡಲು ಆಗದಿದ್ದರೆ ಕೇಂದ್ರ ಸರ್ಕಾರ ಅದನ್ನು ಸ್ಪಷ್ಟವಾಗಿ ತಿಳಿಸಲಿ. ಆ ಕೆಲಸವನ್ನು ರಾಜ್ಯ ಸರ್ಕಾರವೇ ಮಾಡಲಿದೆ.”

ಹೈಕೋರ್ಟ್ ನಿರ್ದೇಶನದಂತೆ ಬೀದಿ ವ್ಯಾಪಾರಿಗಳ ತೆರವು:

ಬೆಂಗಳೂರು ಬೀದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಬಗ್ಗೆ ಕೇಳಿದಾಗ, “ಬೀದಿ ವ್ಯಾಪಾರಿಗಳು ನೋಂದಣಿ ಮಾಡಿಕೊಳ್ಳಿ ಎಂದು ಅವರ ಜೊತೆ ಮಾತನಾಡಿ ಹೇಳಿದ್ದೇನೆ. ಎಲ್ಲೆಲ್ಲಿ ರಸ್ತೆಯಲ್ಲಿ ಅಂಗಡಿ ಇಟ್ಟಿದ್ದಾರೆ ಅದನ್ನು ತೆರವು ಮಾಡಿಸಲಾಗಿದೆ. ಆಯುಕ್ತರು ಮತ್ತು ಅಧಿಕಾರಿಗಳು ಈ ಸಂಬಂಧ ಫೋಟೋ, ವಿಡಿಯೋ ತೋರಿಸಿದ್ದಾರೆ. ಈ ವಿಚಾರದಲ್ಲಿ ಹೈಕೋರ್ಟ್ ನಿರ್ದೇಶನವಿದೆ. ಅದರಂತೆ ಪಾಲಿಕೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ನಾವು ಎಲ್ಲರನ್ನೂ ಸಮಾನವಾಗಿ ಕಾಣುತ್ತಿದೆ. ತಾರತಮ್ಯ ಮಾಡುತ್ತಿಲ್ಲ. ನನ್ನನ್ನು ಭೇಟಿ ಮಾಡಿದಾಗ ಅವರಿಗೆ ರಸ್ತೆಯಲ್ಲಿ ವ್ಯಾಪಾರ ಮಾಡಬೇಡಿ ಎಂದು ಹೇಳಿದ್ದೇವೆ.

ಬೀದಿ ವ್ಯಾಪಾರಿಗಳ ಹಿತಕಾಯಲು 10 ಸಾವಿರದ ವರೆಗೂ ಸಾಲ ನೀಡಲು ನಾವು ಸಿದ್ಧ ಇದ್ದೇವೆ. ರಸ್ತೆಯಲ್ಲಿ ವ್ಯಾಪಾರ ಮಾಡಿದರೆ ಹೆಚ್ಚು ಅಪಘಾತ ಹಾಗೂ ಸಂಚಾರ ದಟ್ಟಣೆ ಉಂಟಾಗುತ್ತದೆ. ಈ ವಿಚಾರವಾಗಿ ನಾನು ಮತ್ತೆ ಬೀದಿ ವ್ಯಾಪಾರಿಗಳನ್ನು ಭೇಟಿ ಮಾಡುತ್ತೇನೆ” ಎಂದು ತಿಳಿಸಿದರು.

ತೆಲಂಗಾಣ ಚುನಾವಣಾ ಪ್ರಚಾರಕ್ಕೆ ಪ್ರವಾಸ:

“ನಾನು ವಿಜಯವಾಡ ಮೂಲಕ ತೆಲಂಗಾಣ ಪ್ರವಾಸ ಮಾಡುತ್ತಿದ್ದು, ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣ ಪ್ರಚಾರ ಮಾಡಲಿದ್ದೇನೆ. ಆಂಧ್ರ ಕಾಂಗ್ರೆಸ್ ಮಾಜಿ ಅಧ್ಯಕ್ಷರು ನನ್ನ ಜೊತೆ ಪ್ರವಾಸ ಮಾಡುತ್ತಿದ್ದಾರೆ. ಪ್ರಚಾರ ಮುಗಿಸಿ ಶ್ರೀಶೈಲಕ್ಕೆ ಹೋಗಲಿದ್ದೇನೆ” ಎಂದು ತಿಳಿಸಿದರು.

ತೆಲಂಗಾಣ ಚುನಾವಣೆಗೆ ರಾಜ್ಯದ ಸಚಿವರ ಜವಾಬ್ದಾರಿ ನೀಡಿರುವ ಬಗ್ಗೆ ಟೀಕೆ ವ್ಯಕ್ತವಾಗಿದೆ ಎಂದು ಕೇಳಿದಾಗ, “ಸುಮಾರು ಐದು ಸಚಿವರಿಗೆ ಹಾಗೂ 40 ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ. ಬಿಜೆಪಿ ಅವರು ಸರ್ಕಾರದಲ್ಲಿ ಇದ್ದಾಗಲೂ ಈ ರೀತಿ ಜವಾಬ್ದಾರಿ ನೀಡಿದ್ದರು. ಬರ ಹಿನ್ನೆಲೆಯಲ್ಲಿ ಕಂದಾಯ ಸಚಿವರಿಗೆ ಈ ಜವಾಬ್ದಾರಿ ನೀಡಿಲ್ಲ. ಅವರ ಬದಲು ಬೇರೆಯವರಿಗೆ ಜವಾಬ್ದಾರಿ ನೀಡಿ ಎಂದು ದೆಹಲಿ ನಾಯಕರಿಗೆ ನಾನು ಹಾಗೂ ಮುಖ್ಯಮಂತ್ರಿಗಳು ತಿಳಿಸಿದ್ದೇವೆ” ಎಂದು ತಿಳಿಸಿದರು.

ಕಾಂತರಾಜು ವರದಿ ಸರಿಯಿಲ್ಲ, ಹೊಸದಾಗಿ ಜಾತಿಗಣತಿ ಮಾಡಬೇಕು ಎಂದು ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಮೊದಲು ಬರಗಾಲದ ಬಗ್ಗೆ ಗಮನ ಹರಿಸಿ ರೈತರಿಗೆ ನೆರವು ನೀಡೋಣ. ನಂತರ ಈ ವಿಚಾರ ನೋಡೋಣ” ಎಂದು ತಿಳಿಸಿದರು.

ಕಾಂಗ್ರೆಸ್ ನ 68 ಶಾಸಕರನ್ನು ಆಪರೇಶನ್ ಮಾಡಲು ಬಿಜೆಪಿ ತೀರ್ಮಾನಿಸಿದೆ ಎಂಬ ವಿಚಾರವಾಗಿ ಕೇಳಿದಾಗ, “ಅವರ ವೃತ್ತಿ ಅದು. ಅದನ್ನು ಅವರು ಬಿಡುವುದಿಲ್ಲ” ಎಂದು ತಿಳಿಸಿದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button